ಶಿಸ್ತು ಬೆಳೆಸಲು ಮಕ್ಕಳನ್ನು ಶಿಕ್ಷಿಸುವ ಬದಲು, ಈ ವಿಧಾನಗಳನ್ನು ಅನುಸರಿಸಿ

ಮಕ್ಕಳನ್ನು ಒಬ್ಬ ಜವಾಬ್ದಾರಿಯುತ ವ್ಯಕ್ತಿಯಾಗಿ ಬೆಳೆಸುವುದು ಪೋಷಕರಿಗೆ ಸುಲಭದ ಕೆಲಸವಲ್ಲ. ಮಗುವಿಗೆ ಪ್ರೀತಿ, ಕಾಳಜಿ ಮತ್ತು ರಕ್ಷಣೆ ನೀಡುವುದರ ಜೊತೆಗೆ ಉತ್ತಮ ಶಿಸ್ತನ್ನು ಸಹ ಬೆಳೆಸುವುದು ದೊಡ್ಡ ಸವಾಲು. ಏಕೆಂದರೆ ಪ್ರತಿಯೊಂದು ಮಗುವಿನ ಆಲೋಚನೆ, ಸ್ವಭಾವ ಭಿನ್ನವಾಗಿರುತ್ತದೆ. ಎಲ್ಲದಕ್ಕೂ ಬೆದರಿಕೆಯೇ ಮಾನದಂಡವಲ್ಲ. ಅವರ ಮನಸ್ಥಿತಿಗೆ ಹೊಂದಿಕೊಂಡು, ಶಿಸ್ತನ್ನು ಬೆಳೆಸಬೇಕು. ಸಂದರ್ಭಕ್ಕೆ ತಕ್ಕಂತೆ ಮಕ್ಕಳಲ್ಲಿ ಶಿಸ್ತು ಬೆಳೆಸುವ ವಿಧಾನಗಳಾವುವು ಎಂಬುದನ್ನು ಈ ಲೇಖನದಲ್ಲಿ ಹೇಳಿದ್ದೇವೆ.

ಮಕ್ಕಳಲ್ಲಿ ಶಿಸ್ತು ಬೆಳೆಸುವ ಪೋಷಕರು ತಿಳಿಯಬೇಕಾದ ಶಿಸ್ತಿನ ಪ್ರಮುಖ ವಿಧಗಳನ್ನು ಈ ಕೆಳಗೆ ನೀಡಲಾಗಿದೆ:
ಪಾಸಿಟಿವ್ ಶಿಸ್ತು:

ಈ ರೀತಿಯ ಶಿಸ್ತು ಹೊಗಳಿಕೆ ಮತ್ತು ಪ್ರೋತ್ಸಾಹದ ವಿಧಾನವನ್ನು ಆಧರಿಸಿದೆ. ಪಾಸಿಟವ್ ಮಾರ್ಗದ ಶಿಸ್ತಿನಲ್ಲಿ, ಪೋಷಕರು ಆಗಾಗ ಮಗುವಿಗೆ ತಮ್ಮ ಸುತ್ತಮುತ್ತಲಿನ ಜನರೊಂದಿಗೆ ಸೇರಿಕೊಳ್ಳಲು ಸಹಾಯ ಮಾಡಬೇಕು. ಒಂದು ವೇಳೆ ಆ ಪ್ರಕ್ರಿಯೆಯಲ್ಲಿ ಮಗು ಏನಾದರೂ ತಪ್ಪು ನಡೆಸಿದರೆ ಅಥವಾ ಸರಿಯಾಗಿ ವರ್ತಿಸದಿದ್ದರೆ, ಪೋಷಕರು ಮಕ್ಕಳನ್ನು ಕರೆದು ಮಾತನಾಡಿಸಿ, ಸಮಸ್ಯೆ ಪರಿಹರಿಸಲು ಪ್ರಯತ್ನಿಸುವುದು ಒಳ್ಳೆಯದು. ಅದಕ್ಕೆ ಬೇಕಾದ ಕೌಶಲ್ಯಗಳನ್ನು ಕಲಿಸಿಕೊಡಬೇಕು. ಹೀಗೆ ಮಕ್ಕಳೊಂದಿಗೆ ಕುಳಿತು ಮಾತನಾಡಿ ಅವರ ಸಮಸ್ಯೆಯನ್ನು ಪರಿಹರಿಸಿದರೆ ಅವರಿಗೆ ಪಾಸಿಟಿವ್ ಫೀಲ್ ಬರುವುದು.

ಪರಿಸ್ಥಿತಿಯನ್ನು ತಿಳಿಸಿಕೊಡುವ ಶಿಸ್ತು:
ಮಕ್ಕಳು ಕೆಟ್ಟದಾಗಿ ವರ್ತಿಸುವುದನ್ನು ತಡೆಯಲು ಪರಿಸ್ಥಿತಿಯನ್ನು ಅವರಿಗೆ ಅರ್ಥಮಾಡಿಸುವುದು ತುಂಬಾ ಮುಖ್ಯ. ಇದು ಬೈಯುವುದರಿಂದಾಗಲೀ ಅಥವಾ ಶಿಕ್ಷಿಸುವುದರಿಂದಾಗಲೀ ಸಾಧ್ಯವಿಲ್ಲ. ಇದರಲ್ಲಿ ಮಕ್ಕಳಿಗೆ ಯಾವುದಾದರೂ ವಿಷಯ ಇಷ್ಟವಿಲ್ಲದಿದ್ದಾಗ, ಅವರ ಗಮನ ಬೇರೆಡೆ ವರ್ಗಾಯಿಸಲು ಹಾಸ್ಯ ಮಾಡುವುದು, ನಂತರ ಅವರಿಗೆ ನಿಧಾನವಾಗಿ ಅರ್ಥಮಾಡಿಸಿ, ಆ ಕೆಲಸ ಮಾಡುವಂತೆ ಮಾಡುವುದು. ಉದಾ: ಮಕ್ಕಳು ತಮ್ಮ ಹೊಮ್ ವರ್ಕ್ ಮಾಡಲು ನಿರಾಕರಿಸಿದರೆ, ಪೋಷಕರು ಅದರ ಪರಿಣಾಮಗಳನ್ನು ನಿಧಾನವಾಗಿ ಮತ್ತು ಹಾಸ್ಯಮಯವಾಗಿ ತಿಳಿಸುತ್ತಾರೆ. ನಂತರ ಅದನ್ನು ಹೇಗೆ ಮುಗಿಸಬೇಕು ಎಂಬುದನ್ನು ಕಂಡುಹಿಡಿಯಲು ತಮ್ಮ ಮಕ್ಕಳಿಗೆ ಸಹಾಯ ಮಾಡುತ್ತಾರೆ.

ಮಿತಿಗಳನ್ನು ನಿಗದಿಪಡಿಸುವುದು:
ಗಡಿ ಆಧಾರಿತ ಶಿಸ್ತು ಎಂದರೆ ಮಕ್ಕಳಿಗೆ ಮಿತಿಗಳನ್ನು ಮತ್ತು ಸ್ಪಷ್ಟ ನಿಯಮಗಳನ್ನು ನಿಗದಿಪಡಿಸುವುದು. ಈ ರೀತಿಯ ಶಿಸ್ತಿನಲ್ಲಿ, ನಿಯಮವನ್ನು ಮೀರುವುದು ಅಥವಾ ಅಸಭ್ಯವಾಗಿ ವರ್ತಿಸುವುದರಿಂದ ಆಗುವ ಪರಿಣಾಮಗಳ ಬಗ್ಗೆ ಮಕ್ಕಳಿಗೆ ತಿಳಿಸಲಾಗುತ್ತದೆ. ಚೈಲ್ಡ್ ಮೈಂಡ್ ಇನ್ಸ್ಟಿಟ್ಯೂಟ್ ಪ್ರಕಾರ, ಮಕ್ಕಳಿಗೆ ಶಿಸ್ತಿನಲ್ಲಿ ಮಾತ್ರವಲ್ಲ, ಇತರ ಅಂಶಗಳಲ್ಲೂ ಗಡಿಗಳನ್ನು ನಿಗದಿಪಡಿಸುವುದು ಮುಖ್ಯವಾಗಿದೆ. ಇತರರ ಗಡಿಗಳನ್ನು ಗೌರವಿಸಬೇಕು ಎಂಬುದು ತಮ್ಮ ಮಕ್ಕಳಿಗೆ ತಿಳಿಸಿಕೊಡುವುದು ಬಹಳ ಮುಖ್ಯ.

ವರ್ತನೆಗಳನ್ನು ಬದಲಾಯಿಸುವುದು:
ಇದು ಪಾಸಿಟಿವ್ ಮತ್ತು ನೆಗೆಟಿವ್ ಪರಿಣಾಮಗಳ ಸಂಯೋಜನೆಯಾಗಿದೆ. ಮಕ್ಕಳ ಉತ್ತಮ ನಡವಳಿಕೆಯನ್ನು ಪೋಷಕರು ಪ್ರಶಂಸಿಸಬೇಕು ಅದಕ್ಕೆ ತಕ್ಕ ಪ್ರತಿಫಲ ಉಡುಗೊರೆ ರೂಪದಲ್ಲಿ ನೀಡಬೇಕು. ಜೊತೆಗೆ ತಪ್ಪು ಕೆಲಸಗಳಿಗೆ ಶಿಕ್ಷೆ ಅಥವಾ ಬುದ್ಧಿ ಮಾತು ಹೇಳಬೇಕು. ಈ ತಂತ್ರವು ಮಕ್ಕಳನ್ನು ನಿಯಂತ್ರಿಸಲು ಮತ್ತು ಅಸಭ್ಯ ನಡವಳಿಕೆಯನ್ನು ತಿದ್ದಲು ಸಹಾಯ ಮಾಡುತ್ತದೆ ಎಂದು ಅಧ್ಯಯನಗಳು ಸೂಚಿಸುತ್ತವೆ. ಕೆಲವು ಪೋಷಕರು ಇದನ್ನು ಲಂಚವೆಂದು ಬಾವಿಸುತ್ತಾರೆ, ಆದರೆ ಇತರರ ಪ್ರಕಾರ ಇದು ಮಕ್ಕಳನ್ನು ಬೆಳೆಸುವ ಅತ್ಯುತ್ತಮ ಮಾರ್ಗವಾಗಿದೆ.

ಭಾವನೆಗಳ ಬಗ್ಗೆ ತಿಳಿಸುವುದು:
ಭಾವನಾತ್ಮಕ ತರಬೇತಿಯಲ್ಲಿ ಮಕ್ಕಳಿಗೆ ತಮ್ಮ ಬಾವನೆಯನ್ನ ಹೇಗೆ ವ್ಯಕ್ತಪಡಿಸಬೇಕು ಎಂಬುದನ್ನು ಹೇಳಿಕೊಡಬೇಕು. ಇದು ಮಗು ತನ್ನ ಮನದಲ್ಲಾಗುತ್ತಿರುವ ಭಾವನೆ, ಅಗತ್ಯತೆಗಳನ್ನು ಹೇಳಿಕೊಳ್ಳಲು ಸಹಾಯವಾಗುತ್ತದೆ. ಇಲ್ಲದಿದ್ದರೆ ಪೊಷಕರಿಗೆ ಮಕ್ಕಳ ಮನಸ್ಸಲ್ಲಿ ಏನಾಗುತ್ತಿದೆ ಎಂಬುದು ತಿಳಿಯಲು ಕಷ್ಟವಾಗುತ್ತದೆ. ಅದಕ್ಕೆ ಈ ವಿಚಾರಗಳನ್ನು ಮಕ್ಕಳಿಗೆ ಸರಿಯಾಗಿ ಹೇಳಿಕೊಟ್ಟರೆ ಅವರು ಪೋಷಕರ ಬಳಿ ಹಂಚಿಕೊಳ್ಳುತ್ತಾರೆ.

ನೆನಪಿಡಿ:
ಎಲ್ಲಾ ಐದು ವಿಧದ ಶಿಸ್ತುಗಳು ತಮ್ಮ ಸಾಧಕ ಬಾಧಕಗಳನ್ನು ಹೊಂದಿವೆ. ಆದರೆ ನಿಮ್ಮ ಮಗುವಿಗೆ ಯಾವುದು ಉತ್ತಮ ಮತ್ತು ಪ್ರಯೋಜನಕಾರಿಯಾಗಿದೆ ಎಂದು ಹೇಳುವುದು ಕಷ್ಟ. ನೀವು ಏನು ಮಾಡಬೇಕು ಎಂಬುದು ನಿಮ್ಮ ಮಗುವಿನ ನಡವಳಿಕೆ ಮತ್ತು ಕುಟುಂಬವನ್ನು ಅವಲಂಬಿಸಿರುತ್ತದೆ. ಎಲ್ಲಾ ಮಕ್ಕಳ ಮೇಲೆ ಒಂದೇ ಒಂದು ತಂತ್ರವು ಕಾರ್ಯನಿರ್ವಹಿಸುವುದಿಲ್ಲ. ಆದ್ದರಿಂದ ಮಗುವಿನ ನಡವಳಿಕೆ ಆಧಾರಿಸಿ ಅವರಲ್ಲಿ ಶಿಸ್ತು ಬೆಳೆಸಬೇಕು.

Exit mobile version