ಹೊಸದಿಲ್ಲಿ, ಮಾ. 30: ಮುಂಬರುವ 2021ರ ಚುಟುಕು ಕ್ರಿಕೆಟ್ ಕದನ ಐಪಿಎಲ್ ಟೂರ್ನಿಗೆ ಎಲ್ಲಾ ತಂಡಗಳು ಭರ್ಜರಿ ತಯಾರಿ ಆರಂಭಿಸಿದ್ದು, ಇದರ ಬೆನ್ನಲ್ಲೇ ಹೊಸ ಹುರುಪಿನೊಂದಿಗೆ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ತವಕದಲ್ಲಿರುವ ಪಂಜಾಬ್ ಕಿಂಗ್ಸ್ ತಂಡ ಹೊಸ ಜರ್ಸಿ ಅನಾವರಣಗೊಳಿಸಿದೆ.
ಈಗಾಗಲೇ ತಂಡದ ಹೆಸರು ಬದಲಿಸಿಕೊಂಡಿರುವ ಕಿಂಗ್ಸ್ ಇಲೆವೆನ್ ಪಂಜಾಬ್, ಈಗ ಪಂಜಾಬ್ ಕಿಂಗ್ಸ್ ಆಗಿ ಬದಲಾವಣೆಗೊಂಡಿದೆ. ಇದೀಗ ಹೊಸ ಜರ್ಸಿ ಅನಾವರಣ ಮಾಡುವ ಮೂಲಕ ಹೊಸ ಲುಕ್ ನೊಂದಿಗೆ ಪ್ರಸಕ್ತ ಸೀಸನ್ನಲ್ಲಿ ಪಾಲ್ಗೊಳ್ಳಲು ಸಜ್ಜಾಗಿದೆ. ಅಲ್ಲದೇ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಪಂಜಾಬ್, ಗೋಲ್ಡನ್ ಕಲರ್ ಹೆಲ್ಮೆಟ್ ಧರಿಸುವುದಾಗಿ ಘೋಷಿಸಿದೆ. ಸದ್ಯ ಟೂರ್ನಿಯಲ್ಲಿರುವ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಈಗಾಗಲೇ ಹಲವು ವರ್ಷಗಳಿಂದ ಗೋಲ್ಡನ್ ಕಲರ್ ಹೆಲ್ಮೆಟ್ ಧರಿಸುತ್ತಿವೆ.
ಬಾಲಿವುಡ್ ನಟಿ ಪ್ರೀತಿ ಜಿಂಟಾ ಸಹ ಮಾಲಿಕತ್ವದ ಪಂಜಾಬ್ ಕಿಂಗ್ಸ್, ಈ ಬಾರಿ ಹೊಸ ನಿರೀಕ್ಷೆಯೊಂದಿಗೆ ಮೈದಾನಕ್ಕಿಳಿಯಲಿದೆ. ಇದಕ್ಕಾಗಿ ತಂಡದಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಂಡು ಸಜ್ಜಾಗಿರೋ ಪಂಜಾಬ್, ಕಳೆದ ತಿಂಗಳು ನಡೆದ ಹರಾಜು ಪ್ರಕ್ರಿಯೆಯಲ್ಲಿ ತನ್ನ ತಂಡದ ಪ್ರಮುಖ ಆಟಗಾರನಾಗಿದ್ದ ಗ್ಲೆನ್ ಮ್ಯಾಕ್ಸ್ವೆಲ್ ಅವರನ್ನು ಕೈಬಿಟ್ಟು, ಜೇಯ್ ರಿಚರ್ಡ್ಸನ್, ಡಾವಿಡ್ ಮಲಾನ್ ಸೇರಿದಂತೆ ಹಲವು ಹೊಸ ಆಟಗಾರರನ್ನು ಸೇರ್ಪಡೆ ಮಾಡಿಕೊಂಡಿದೆ.
ಕಳೆದ ವರ್ಷ ಕೊನೆ ಕ್ಷಣದಲ್ಲಿ ಪ್ಲೇ-ಆಫ್ ಪ್ರವೇಶಿಸುವ ಚಾನ್ಸ್ ಕಳೆದುಕೊಂಡ ಕನ್ನಡಿಗ ಕೆ.ಎಲ್. ರಾಹುಲ್ ನಾಯಕತ್ವದ ಪಂಜಾಬ್, ಮೇಜರ್ ಸರ್ಜರಿಯೊಂದಿಗೆ ಈ ಬಾರಿ ಮೈದಾನಕ್ಕಿಳಿಯಲಿದೆ. ಹೀಗಾಗಿ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಮಾರ್ಗದರ್ಶನದಲ್ಲಿ ಪಂಜಾಬ್ ಆಟಗಾರರು ಈ ಸೀಸನ್ನಲ್ಲಿ ಯಾವ ರೀತಿ ಕಮಾಲ್ ಮಾಡಲಿದ್ದಾರೆ ಎಂಬುದು ಕ್ರಿಕೆಟ್ ಪ್ರೇಮಿಗಳಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ.