ಐಪಿಲ್‌ಗೆ 2 ಹೊಸ ತಂಡಗಳ ಸೇರ್ಪಡೆ

ಮುಂಬೈ ಅ 26 ಮುಂದಿನ ಬಾರಿ ನಡೆಯಲಿರುವ ಐಪಿಎಲ್‌ಗೆ ಮತ್ತೆರಡು ಹೊಸ ತಂಡಗಳು ಭಾಗವಹಿಸಲಿದ್ದು 15ನೇ ಐಪಿಎಲ್‌ನಲ್ಲಿ ಒಟ್ಟು 10 ತಂಡಗಳು ಐಪಿಎಲ್‌ ಪ್ರಶಸ್ತಿಗಾಗಿ ಸೆಣಸಾಡಲಿವೆ. ಅಹಮದಾಬಾದ್ ಮತ್ತು ಲಕ್ನೋ ತಂಡಗಳು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಗೆ ಹೊಸ ತಂಡಗಳಾಗಿ ಸೇರ್ಪಡೆಯಾಗಿವೆ.

ಸೋಮವಾರ ದುಬೈನ ತಾಜ್ ಹೋಟೆಲ್‌ನಲ್ಲಿ ನಡೆದ ಬಿಡ್ಡಿಂಗ್ ನಲ್ಲಿ ಆರ್‌ಪಿ-ಸಂಜೀವ್ ಗೋಯೆಂಕಾ ಗ್ರೂಪ್ (ಆರ್‌ಪಿಎಸ್‌ಜಿ) (ಲಕ್ನೋ) ಮತ್ತು ಸಿವಿಸಿ ಕ್ಯಾಪಿಟಲ್ ಪಾರ್ಟ್‌ನರ್ಸ್ (ಅಹಮದಾಬಾದ್) ಹೊಸ ತಂಡಗಳನ್ನು ಪಡೆದು ಕೊಳ್ಳುವಲ್ಲಿ ಸಫಲವಾಗಿವೆ.

ಸಂಜೀವ್ ಗೊಯೆಂಕಾ ಒಡೆತನದ ಆರ್‌ಪಿಎಸ್‌ಜಿ ಗ್ರೂಪ್ ಲಕ್ನೋವನ್ನು 7090 ಕೋಟಿ ರೂ.ರೂಪಾಯಿಗಳ ಬಿಡ್‌ನೊಂದಿಗೆ ಆಯ್ಕೆ ಮಾಡಿಕೊಂಡಿದ್ದರೆ,ಸಿಪಿಸಿ ಕ್ಯಾಪಿಟಲ್ 5625 ಕೋಟಿಗಳ ರೂ.ಗಳ ಬಿಡ್‌ನೊಂದಿಗೆ ಅಹಮದಾಬಾದ್ ಅನ್ನು ಆಯ್ಕೆ ಮಾಡಿದೆ.

ಐಟಿಟಿ ಡಾಕ್ಯುಮೆಂಟ್‌ನಲ್ಲಿ ನಿರ್ದಿಷ್ಟಪಡಿಸಿದಂತೆ ಬಿಡ್‌ದಾರರು ಬಿಡ್‌ನ ನಂತರದ ಔಪಚಾರಿಕತೆಯನ್ನು ಪೂರ್ಣಗೊಳಿಸಿದರೆ, ಹೊಸ ಫ್ರಾಂಚೈಸಿಗಳು 2022 ರಿಂದ ಐಪಿಎಲ್ ನಲ್ಲಿ ಭಾಗವಹಿಸುತ್ತವೆ.ಐಪಿಎಲ್ 2022 ಸೀಸನ್ ಹತ್ತು ತಂಡಗಳನ್ನು ಒಳಗೊಂಡಿರುತ್ತದೆ ಮತ್ತು 74 ಪಂದ್ಯಗಳನ್ನು ಹೊಂದಿರುತ್ತದೆ.

ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಕೋಲ್ಕತ್ತಾ ನೈಟ್ ರೈಡರ್ಸ್, ಡೆಲ್ಲಿ ಕ್ಯಾಪಿಟಲ್ಸ್, ಸನ್ ರೈಸರ್ಸ್ ಹೈದರಾಬಾದ್, ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಲೀಗ್‌ನ ಆರಂಭದಿಂದಲೂ ಲೀಗ್‌ನಲ್ಲಿವೆ.ಹೈದರಾಬಾದ್ ಫ್ರಾಂಚೈಸ್ ಅನ್ನು ಮೊದಲು ಡೆಕ್ಕನ್ ಚಾರ್ಜರ್ಸ್ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು.  ಆದರೆ ಮಾಲೀಕತ್ವದ ಬದಲಾವಣೆಯ ನಂತರ ಅದನ್ನು ಸನ್ ರೈಸರ್ಸ್ ಹೈದರಾಬಾದ್ ಎಂದು ಕರೆಯಲಾಯಿತು.

2010 ರಲ್ಲಿ, ಪುಣೆ ವಾರಿಯರ್ಸ್ ಇಂಡಿಯಾ ಮತ್ತು ಕೊಚ್ಚಿ ಟಸ್ಕರ್ಸ್ ಕೇರಳ – 2011 ರಲ್ಲಿ ನಾಲ್ಕನೇ ಋತುವಿನ ಮೊದಲು ಲೀಗ್‌ಗೆ ಸೇರಿಕೊಂಡು ಅಲ್ಪಾವಧಿಗೆ ಆಡಿದ್ದವು.ಒಂದು ವರ್ಷದ ನಂತರ ನವೆಂಬರ್ 2011 ರಲ್ಲಿ, ಕೊಚ್ಚಿ ಟಸ್ಕರ್ಸ್ ಕೇರಳ ತಂಡವು ಬಿಸಿಸಿಐಯ ಷರತ್ತುಗಳನ್ನು ಉಲ್ಲಂಘಿಸಿದ ಹಿನ್ನಲೆಯಲ್ಲಿ ಅದನ್ನು ರದ್ದುಗೊಳಿಸಲಾಯಿತು. ಇನ್ನೊಂದೆಡೆಗೆ ಮಂಡಳಿಯೊಂದಿಗಿನ ಹಣಕಾಸಿನ ಭಿನ್ನಾಭಿಪ್ರಾಯದಿಂದಾಗಿ ಪುಣೆ ವಾರಿಯರ್ಸ್ ಇಂಡಿಯಾ 2013 ರಲ್ಲಿ ಐಪಿಎಲ್ ನಿಂದ ಹಿಂದೆ ಸರಿಯಿತು. 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನ ಮೆಗಾ ಹರಾಜು ಈ ವರ್ಷದ ಕೊನೆಯಲ್ಲಿ ಡಿಸೆಂಬರ್‌ನಲ್ಲಿ ನಡೆಯಲಿದೆ.

Exit mobile version