ದಲಿತರ ದೌರ್ಜನ್ಯಕ್ಕೆ ಕೊನೆಯೇ ಇಲ್ವೇ? ಚರಂಡಿ ನೀರಲ್ಲಿ ಕೊಳೆಯುತ್ತಿವೆ ಕಾನಹೊಸಹಳ್ಳಿಯ ನೂರಾರು ದಲಿತ ಕುಟುಂಬಗಳು. ವಿಜಯನಗರ ಜಿಲ್ಲಾಡಳಿತಕ್ಕೆ ಕಣ್ಣೇ ಇಲ್ವೇ?

ದಲಿತರ ದೌರ್ಜನ್ಯಕ್ಕೆ ಕೊನೆಯೇ ಇಲ್ವೇ? No end for Dalit exploitation.

ಇದು ಚಿತ್ರದುರ್ಗದ ಕಾನಹೊಸಹಳ್ಳಿ ದಲಿತರು ವಾಸಿಸೋ ಪ್ರದೇಶದ ದುಸ್ಥಿತಿ. ಇಡೀ ಏರಿಯಾ ಕೊಳಚೆ, ಕಸಕಡ್ಡಿ, ಕೊಳಕಿನಿಂದ ತುಂಬಿದೆ. ಇನ್ನು ಮಳೆ ಬಂದ್ರೆ ಇವರ ಸ್ಥಿತಿ ದೇವರಿಗೇ ಪ್ರೀತಿ.

ಕಾನಹೊಸಹಳ್ಳಿಯ ನೂರಕ್ಕೂ ಹೆಚ್ಚು ದಲಿತ ಕುಟುಂಬಗಳು ಕಳೆದ ಕೆಲವು ತಿಂಗಳಿನಿಂದ ಈ ನರಕದಲ್ಲಿ ವಾಸಿಸುತ್ತಿದ್ದಾರೆ. ನಾನಾ ರೋಗ ರುಜಿನಗಳಿಗೆ ತುತ್ತಾಗಿ ಸಂಕಷ್ಟ ಅನುಭವಿಸುತ್ತಿದ್ದಾರೆ.

ಇದಕ್ಕೆ ಮುಖ್ಯ ಕಾರಣ ಏನು ಗೊತ್ತಾ? ಚಿತ್ರದುರ್ಗ – ಬಳ್ಳಾರಿ ನಡುವೆ ನಿರ್ಮಾಣವಾಗುತ್ತಿರುವ ರಾಷ್ಟ್ರೀಯ ಹೆದ್ದಾರಿ 50 ರ ಕಳಪೆ ಕಾಮಗಾರಿ

ಈ ರಸ್ತೆಯ ಕಾಮಗಾರಿ ಉಸ್ತುವಾರಿ ಹೊತ್ತಿರುವ ಎಲ್‌ ಆಂಡ್‌ ಟಿ ಕಂಪೆನಿಯವರು ಅರ್ಧಂಬಂರ್ಧ ಕಾಮಗಾರಿಯೇ ಈ ದುರಂತಕ್ಕೆ ಕಾರಣ. ಗುತ್ತಿಗೆದಾರರು ಮುಖ್ಯ ರಸ್ತೆಯ ಕಾಮಗಾರಿ ಯನ್ನು ಮಾತ್ರ ಪೂರ್ಣಗೊಳಿಸಿ ಹೆದ್ದಾರಿ ಪಕ್ಕದಲ್ಲಿರುವ ಚರಂಡಿ ಕಾಮಗಾರಿಯನ್ನು ಮಾತ್ರ ಹಾಗೆ ಬಿಟ್ಟು ಹೋಗಿರುತ್ತಾರೆ. ಇದರಿಂದ ಈ ರಸ್ತೆ ಪಕ್ಕದಲ್ಲಿ ವಾಸಿಸುವ ನೂರಾರು ದಲಿತರ ಕುಟುಂಬಗಳು ನರಕಯಾತನೆ ಅನುಭವಿಸುತ್ತಿದ್ದಾರೆ.

ಇನ್ನು ಮಳೆ ಬಂದರೆ ಸಾಕು ರಸ್ತೆಯ ಮೇಲೆ ಬರುವ ನೀರು ದಲಿತರ ಕುಟುಂಬಗಳ ಮನೆಗಳಿಗೆ ನುಗ್ಗಿ ಅಂಗಳಗಳಲ್ಲಿ ನೀರು ನಿಂತು ಬಿಡುತ್ತೆ. ಇದರಿಂದ ಮನೆಯ ಹೊರಗಡೆ ಬರೋದೇ ಅಸಾಧ್ಯವಾಗುತ್ತೆ ಅಂತಾರೆ ಇವರು.

ಈ ಸಮಸ್ಯೆ ಕೊರೋನಾ ಭಯದಲ್ಲಿರುವ ಇಲ್ಲಿನ ಜನರನ್ನು ಸಹಿಸಲಾಗದ ದುರ್ವಾಸನೆ, ಸೊಳ್ಳೆ, ನೊಣಗಳ ಕಾಟ ಇವರನ್ನು ಇನ್ನಷ್ಟು ಭಯಭೀತಗೊಳಿಸಿದೆ.

ಈ ಬಗ್ಗೆ ಈಗಾಗ್ಲೇ ಕಾಮಗಾರಿ ಜವಾಬ್ದಾರಿ ಹೊತ್ತಿರುವ ಎಲ್‌ ಆಂಡ್‌ ಟಿ ಕಂಪೆನಿಯವರಿಗೆ ದೂರು ನೀಡಲಾಗಿದೆ ಆದ್ರೆ ಅವರು ಯಾವ ಸ್ಪಂದನೆಯನ್ನೂ ಕೊಡುತ್ತಿಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರಂತು ನಮಗೂ ಇದಕ್ಕೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದ್ದಾರೆ ಅನ್ನೋದು ಸ್ಥಳೀಯರ ದೂರು.

ಈ ಹಿಂದೆ ಇದ್ದ ತಹಶೀಲ್ದಾರ್‌ ಮಹಾಬಲೇಶ್ವರ ರವರು ತಾತ್ಕಾಲಿಕವಾಗಿ ವ್ಯವಸ್ಥೆಯನ್ನು ಮಾಡಿದ್ರು. ಆದ್ರೆ ಅದರಿಂದಲೂ ಯಾವ ಪ್ರಯೋಜನವೂ ಆಗಿಲ್ಲ. ಇನ್ನು ಜಿಲ್ಲಾಡಳಿತ ಸತ್ತೇ ಹೋಗಿದೆ. ಅದಕ್ಕೆ ಈ ಬಡ ದಲಿತರ ಕೂಗು ಕೇಳಿಸುತ್ತಲೇ ಅನ್ನೋದು ಇವರ ಆಕ್ರೋಶ.

ಒಂದು ವೇಳೆ ಜನರ ಪ್ರಾಣ ಹಿಂಡುತ್ತಿರುವ ಈ  ಚರಂಡಿ ಕಾಮಗಾರಿಯನ್ನು ಪೂರ್ಣಗೊಳಿಸದಿದ್ದರೆ ಜಿಲ್ಲಾಡಳಿತ, ಶಾಸಕರ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದು. ಅಷ್ಟೇ ಅಲ್ಲ ಇಲ್ಲಿ ದಲಿತರು ಗೌರವಯುತವಾಗಿ, ಆರೋಗ್ಯಪೂರ್ಣವಾಗಿ ಬದುಕುವ ಹಕ್ಕನ್ನೂ ಕಿತ್ತುಕೊಳ್ಳಲಾಗುತ್ತಿದೆ. ಹಾಗಾಗಿ ಅಗತ್ಯ ಬಿದ್ದರೆ ನ್ಯಾಯಾಲಯಕ್ಕೂ ಮೊರೆ ಹೋಗಲಾಗುವುದು ಎಂದು ದಲಿತ ಮುಖಂಡರು ಎಚ್ಚರಿಸಿದ್ದಾರೆ.

ಈಗಲಾದ್ರೂ ಜಿಲ್ಲಾಡಳಿತ, ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳಲಿ. ಇವರ ನೋವಿಗೆ ಸ್ಪಂದಿಸಿ ಇವರ ನರಕಯಾತನೆಗೆ ಮುಕ್ತಿಕೊಡಲಿ ಅನ್ನುವುದು ವಿಜಯಟೈಮ್ಸ್‌ ಆಶಯ.

ಕಾನಹೊಸಹಳ್ಳಿಯಿಂದ ಸಿಟಿಜನ್‌ ಜರ್ನಲಿಸ್ಟ್‌ ಮಂಜುನಾಥ್‌, ವಿಜಯಟೈಮ್ಸ್‌

Exit mobile version