ಜಮೀರ್ ವಿರುದ್ಧ ಕ್ರಮಕೈಗೊಳ್ಳಲು ಸಿದ್ದರಾಮಯ್ಯ ಅವರಿಗೆ ಭಯ ಕಾಡುತ್ತಿದೆಯೇ?: ಡಿಕೆಶಿಗೆ ರಾಜ್ಯ ಬಿಜೆಪಿ ಟಾಂಗ್

ಬೆಂಗಳೂರು,ಜೂ.21: ಬಿಜೆಪಿಯಲ್ಲಿ ಕೇಳಿ ಬರುತ್ತಿರುವ ನಾಯಕತ್ವ ಗೊಂದಲವನ್ನು ಟೀಕಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆಗೆ ರಾಜ್ಯ ಬಿಜೆಪಿ ತಿರುಗೇಟು ನೀಡಿದೆ.

“ಕಾಂಗ್ರೆಸ್ vs ಕಾಂಗ್ರೆಸ್” ಹ್ಯಾಶ್ಟ್ಯಾಗ್ ಮೂಲಕ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಾಂಗ್ರೆಸ್ಸಿನಲ್ಲಿ ವ್ಯಕ್ತಿ ಪೂಜೆಗಿಂತ ಪಕ್ಷ ಪೂಜೆಗೆ ಆದ್ಯತೆ ಎಂದು ಹೇಳುತ್ತಾರೆ. ಆದರೆ ಸಿದ್ದರಾಮಯ್ಯ ಅವರನ್ನು ತಲೆಯಲ್ಲಿ ಹೊತ್ತು ತಿರುಗಾಡುತ್ತಿರುವ ಜಮೀರ್ ವಿರುದ್ಧ ಕ್ರಮ ತೆಗೆದುಕೊಳ್ಳುವ ಧೈರ್ಯ ತೋರುತ್ತಿಲ್ಲ. ಸಿದ್ದರಾಮಯ್ಯರ ಭಯ ಕಾಡುತ್ತಿದೆಯೇ ನಿಮಗೆ, ಡಿಕೆಶಿ? ಎಂದು ಪ್ರಶ್ನಿಸುವ ಮೂಲಕ ಕಾಂಗ್ರೆಸ್ ರಾಜ್ಯಾಧ್ಯಕ್ಷರಿಗೆ ಟಾಂಗ್ ನೀಡಿದೆ.

ಬಿಜೆಪಿ ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಮಾತನಾಡುವ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಪಕ್ಷದೊಳಗಿನ ನಾಯಕತ್ವದ ಹೋರಾಟದ ಬಗ್ಗೆ ಮೌನವಾಗಿದ್ದಾರೆ. ಮುಂದಿನ ಸಿಎಂ ಸ್ಥಾನದ ವಿಚಾರವನ್ನು‌ ಸಿದ್ದರಾಮಯ್ಯ ಅವರು ತಮ್ಮ ಬೆಂಬಲಿಗರ ಮೂಲಕ ಮುನ್ನಲೆಗೆ ಬಿಟ್ಟಿದ್ದಾರೆ, ಆದರೆ ದುರ್ಬಲ ಅಧ್ಯಕ್ಷರಿಗೆ ಏನೂ ಮಾಡಲಾಗುತ್ತಿಲ್ಲ ಎಂದು ಲೇವಡಿ ಮಾಡಿದೆ.

ರಾಜ್ಯದಲ್ಲಿ ಕೆಪಿಸಿಸಿ ಅಧ್ಯಕ್ಷರೇ ಸುಪ್ರೀಂ ಎಂದು ಪರಮೇಶ್ವರ್ ಹೇಳಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರೇ ನಿಮಗೆ ಕ್ರಮ ಕೈಗೊಳ್ಳಲು ಧೈರ್ಯವಿಲ್ಲವೇ? ಜಮೀರ್ ವಿರುದ್ಧ ಕ್ರಮ ತೆಗೆದುಕೊಂಡರೆ ವಲಸೆ ನಾಯಕ ಸಿದ್ದರಾಮಯ್ಯ ಅವರ ಕೆಂಗಣ್ಣಿಗೆ ಗುರಿಯಾಗುವ ಭಯ ನಿಮ್ಮನ್ನು ಕಾಡುತ್ತಿದೆಯೇ? ಎಂದು ಡಿಕೆಶಿ ಅವರನ್ನು ಪ್ರಶ್ನಿಸಿದೆ.

Exit mobile version