ಇದೇನು ಚುನಾಯಿತ ಸರ್ಕಾರವೋ? ಹುಚ್ಚರ ಸಂತೆಯೋ?: ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ

ಬೆಂಗಳೂರು, ಏ. 23: ರಾಜ್ಯದಲ್ಲಿರುವುದು ಚುನಾಯಿತ ಸರ್ಕಾರವೋ? ಹುಚ್ಚರ ಸಂತೆಯೋ? ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯದಲ್ಲಿ ಮಿತಿಮೀರುತ್ತಿರುವ ಕೊರೊನಾ ಸೋಂಕು ಹರಡುವಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಗುರುವಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶ ಕಲ್ಪಿಸಿ ಉಳಿದೆಲ್ಲಾ ವ್ಯಾಪಾರ ವಹಿವಾಟುಗಳಿಗೆ ನಿರ್ಬಂಧ ವಿಧಿಸಿದೆ. ಸರ್ಕಾರದ ಈ ಕ್ರಮಕ್ಕೆ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದೇನು ಚುನಾಯಿತ ಸರ್ಕಾರವೋ? ಹುಚ್ಚರ ಸಂತೆಯೋ? ಕ್ಷಣ ಕ್ಷಣಕ್ಕೂ ಬದಲಾಗುವ ನಿರ್ಧಾರ-ಮಾರ್ಗಸೂಚಿಗಳು, ಅಘೋಷಿತ ಲಾಕ್ ಡೌನ್, ಅಮಾಯಕ ಜನತೆ ಮೇಲೆ ದೌರ್ಜನ್ಯ. ಏನಿದು ಮುಖ್ಯಮಂತ್ರಿ ಅವರೇ, ಆಡಳಿತ ನಡೆಸಲಾಗದಿದ್ದರೆ ಕುರ್ಚಿಬಿಟ್ಟು ತೊಲಗಿ, ಜನರನ್ನು ಯಾಕೆ ಗೋಳು ಹೊಯ್ಕೊಳ್ತೀರಿ?

ಕೊರೊನಾ ಉಲ್ಭಣಗೊಂಡಿರುವುದು ಸರ್ಕಾರದ ನಿರ್ಲಕ್ಷ್ಯ, ನಿಷ್ಕ್ರಿಯತೆ ಮತ್ತು ದುರಾಡಳಿತದಿಂದ. ತಮ್ಮ ವೈಫಲ್ಯ ಮುಚ್ಚಿಹಾಕಲು ಪೊಲೀಸರ ಕೈಗೆ ಲಾಠಿ ಕೊಟ್ಟು ಬೀದಿಗಿಳಿಸಿದರೆ ಕೊರೊನಾ ಓಡಿಹೋಗುವುದೇ ಯಡಿಯೂರಪ್ಪ ಅವರೇ? ಎಂದು ಪ್ರಶ್ನಿಸಿದ್ದಾರೆ.

ಲಾಕ್ ಡೌನ್, ಬಂದ್, ಕರ್ಪ್ಯೂ‌ ಇನ್ನೇನೋ, ಯಾವ ನಿರ್ಧಾರ ಕೈಗೊಳ್ಳುವುದಿದ್ದರೂ ಜನರಿಗೆ ಮನವರಿಕೆ ಮಾಡಿ, ವಿಶ್ವಾಸಕ್ಕೆ ತೆಗೆದುಕೊಂಡು ಪೂರ್ವಸಿದ್ದತೆಯೊಡನೆ ಮಾಡಿ. ತಟ್ಟೆ ಬಡಿಯುವ, ಕ್ಯಾಂಡಲ್ ಹಚ್ಚುವ ಶೈಲಿಯ ಇಂತಹ ತುಘಲಕ್ ದರ್ಬಾರ್ ಪುನರಾವರ್ತನೆ ಮಾಡಬೇಡಿ ಎಂದು ಸಲಹೆ ನೀಡಿದ್ದಾರೆ.

Exit mobile version