- ಕನ್ನಡಿಗರು ಪ್ರೀತಿಸಿ, ಆರಾಧಿಸುವ ದೈವದ ಪೋಸ್ಟರ್ ಅನಾವರಣಗೊಂಡಿದೆ.!
- `ಅಪ್ಪು’ಗೆ ಜೈಕಾರ ಹಾಕಿದ ಅಭಿಮಾನಿಗಳು.
ಕನ್ನಡ ಚಿತ್ರರಂಗದ ನೆಚ್ಚಿನ, ಅಚ್ಚುಮೆಚ್ಚಿನ ಸ್ಟಾರ್ ಎಂದರೆ ಅದು ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರು. ಕರುನಾಡಲ್ಲಿ ಅಭಿಮಾನಿಗಳು ಪ್ರೀತಿಸಿ, ಆರಾಧಿಸುವ ದೈವ ಎಂದರೆ ಅದು ಪುನೀತ್ ರಾಜ್ಕುಮಾರ್ ಅವರು ಮಾತ್ರ ಎಂದು ಹೇಳಲು ಸಾಧ್ಯ.! ಅಪ್ಪು ಅವರನ್ನು ಕಳೆದುಕೊಂಡ ದಿನದಿಂದಲೂ ಪ್ರತಿಯೊಬ್ಬ ಕನ್ನಡಿಗರು ಸೇರಿದಂತೆ, ಕೋಟ್ಯಾಂತರ ಅಭಿಮಾನಿಗಳು ತಮ್ಮದೇ ವಿಶೇಷ ಶೈಲಿಯಲ್ಲಿ ಅಭಿಮಾನ, ಗೌರವವನ್ನು ಸಲ್ಲಿಸುತ್ತಿದ್ದಾರೆ. ದಿನದಿಂದ ದಿನಕ್ಕೆ ಅಪ್ಪು ಅವರ ಮೇಲಿರುವ ಪ್ರೀತಿ ಮತ್ತಷ್ಟು ಬಿಗಿಯಾಗುತ್ತಿದೆ, ಮಗದಷ್ಟು ಹೆಚ್ಚಾಗುತ್ತಿದೆ. ಇಂದಿಗೂ ಅಪ್ಪು ಅವರ ಸಮಾಧಿಯ ಬಳಿ ಪ್ರತಿದಿನ ಇಪ್ಪತ್ತು ಸಾವಿರಕ್ಕೂ ಹೆಚ್ಚು ಅಭಿಮಾನ ಬಳಗ ಭೇಟಿ ನೀಡುವ ಮುಖೇನ ತಮ್ಮ ಪ್ರೀತಿಯನ್ನು ಸಲ್ಲಿಸುತ್ತಿದ್ದಾರೆ.
`ಬೋಲೋ ಬೋಲೋ ಜೇಮ್ಸ್’ ಎಂದು ಅಭಿಮಾನಿಗಳು ಕಳೆದ ವರ್ಷದಿಂದ ಎಡಬಿಡದೆ ಜಪಿಸುತ್ತಿದ್ದ ಅಪ್ಪು ಅಭಿನಯದ, ಭರಾಟೆ ಚೇತನ್ ನಿರ್ದೇಶನದ ಜೇಮ್ಸ್ ಚಿತ್ರತಂಡ ಚಿತ್ರದ ಪೋಸ್ಟರ್ ಇಂದು ಗಣರಾಜ್ಯೋತ್ಸವ ದಿನದಂದು ಬಿಡುಗಡೆಗೊಳಿಸುವ ಮೂಲಕ ಪುನೀತ್ ರಾಜ್ಕುಮಾರ್ ಅವರ ಅಭಿಮಾನಿಗಳಿಗೆ ವಿಶೇಷ ಕೊಡುಗೆಯಾಗಿ ನೀಡಿದೆ. ಹೌದು, ಪುನೀತ್ ರಾಜ್ಕುಮಾರ್ ಅವರು ಕೊನೆಯದಾಗಿ ಅಭಿನಯಿಸಿದ ಎರಡು ಸಿನಿಮಾಗಳಲ್ಲಿ ಒಂದು ಜೇಮ್ಸ್ ಮತ್ತೊಂದು ಗಂಧದಗುಡಿ ಸಿನಿಮಾಗಳು. ಈ ಸಿನಿಮಾ ಪೈಕಿ ಬಹಳ ಆತುರದಿಂದ, ಕಾತುರದಿಂದ ಅಭಿಮಾನಿಗಳು ಜೇಮ್ಸ್ ಚಿತ್ರಕ್ಕೆ ಕಾಯುತ್ತಿದ್ದರು. ಸದ್ಯ ಜೇಮ್ಸ್ ಪೋಸ್ಟರ್ ಬಿಡುಗಡೆಗೊಂಡಿರುವುದನ್ನು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.
ಈ ಚಿತ್ರವನ್ನು ಅಪ್ಪು ಅವರ ಜನ್ಮದಿನ ಮಾರ್ಚ್ 17 ರಂದು ತೆರೆಕಾಣಿಸಲು ಚಿತ್ರದ ನಿರ್ದೇಶಕರಿಗೆ ಮನವಿ ಮಾಡಿದ್ದಾರೆ. ಇದರ ಬೆನ್ನಲ್ಲೇ ಇಂದು ಜೇಮ್ಸ್ ಪೋಸ್ಟರ್ ಬಿಡುಗಡೆಗೊಳಿಸಲಾಗಿದೆ. ಈ ಪೋಸ್ಟರ್ ಬಿಡುಗಡೆಗೊಂಡಿದ್ದು ನಮಗೆಲ್ಲಾ ಬಹಳ ಸಂತಸವಾಗಿದೆ, ಆದರೆ ಅಪ್ಪು ಅವರು ಈ ಸಂದರ್ಭದಲ್ಲಿಲ್ಲ ಎಂಬುದು ತೀವ್ರ ಸಂಕಟವಾಗಿದೆ ಎಂದು ಅಭಿಮಾನಿಗಳು ತಿಳಿಸಿದ್ದಾರೆ. ಸದ್ಯ ಈ ಕುರಿತು ಮಾತನಾಡಿರುವ ಜೇಮ್ಸ್ ಚಿತ್ರತಂಡ, ಈ ಬಾರಿ ಅಪ್ಪು ಅವರ ಜೊತೆಗೆ ಶಿವರಾಜ್ಕುಮಾರ್ ಮತ್ತು ರಾಘವೇಂದ್ರ ರಾಜ್ಕುಮಾರ್ ಅವರಿಬ್ಬರು ಕೂಡ ಜೇಮ್ಸ್ ಚಿತ್ರದಲ್ಲಿ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ ನೀವು ದೊಡ್ಮನೆ ಅಣ್ಣ-ತಮ್ಮಂದಿರನ್ನು ಒಟ್ಟಿಗೆ ನೋಡಬಹುದು ಎಂದು ಪವರ್ ಸ್ಟಾರ್ ಅಭಿಮಾನಿಗಳಿಗೆ ತಿಳಿಸಿದ್ದಾರೆ.
- ಮೋಹನ್ ಶೆಟ್ಟಿ