ಜನವರಿಯಿಂದ ಕೊರೊನಾ ಲಸಿಕೆ ವಿತರಣೆಗೆ ಸಿದ್ಧತೆ

ನವದೆಹಲಿ, ಡಿ. 21: ದೇಶದಲ್ಲಿ ಕೊರೊನಾ ಸೋಂಕಿನ ಸಂಪೂರ್ಣ ನಿಗ್ರಹಕ್ಕೆ ಪಲ್ಸ್ ಪೋಲಿಯೋ ಮಾದರಿಯಲ್ಲಿ ಲಸಿಕಾ ಆಂದೋಲನವನ್ನು ನಡೆಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ, ಜನವರಿಯಿಂದ ಸಾರ್ವಜನಿಕರಿಗೆ ಲಸಿಕೆ ಲಭ್ಯವಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ದನ್ ಹೇಳಿದ್ದಾರೆ. ಅವರು ಖಾಸಗಿ ಸುದ್ದಿ ಸಂಸ್ಥೆಗೆ ನೀಡಿರುವ ವಿಶೇಷ ಸಂದರ್ಶನವೊಂದರಲ್ಲಿ ಲಸಿಕೆ ಆಂದೋಲನದ ಬಗ್ಗೆ ಸಮಗ್ರ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

.ಭಾರತದಲ್ಲಿ ಮಕ್ಕಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ 12 ಲಸಿಕೆಗಳನ್ನು ಹಾಕಲಾಗುತ್ತಿದೆ. ಲಸಿಕಾ ಆಂದೋಲನ ನಡೆಸಲು ನಾವು ಪೂರ್ಣ ಪ್ರಮಾಣದ ಸಾಮಥ್ರ್ಯ ಹೊಂದಿದ್ದೇವೆ ಎಂದು ಸಮರ್ಥಿಸಿಕೊಂಡಿದ್ದಾರೆ. ಕೊರೊನಾ ಲಸಿಕೆ ಹಾಕಲು ಕೇಂದ್ರ ಸರ್ಕಾರ ಎಲ್ಲಾ ರೀತಿಯ ಸಿದ್ಧತೆಗಳನ್ನು ಕೈಗೊಂಡಿದೆ.

ರಾಜ್ಯ ಸರ್ಕಾರಗಳ ಜೊತೆ ಸಮನ್ವಯತೆ ಸಾಧಿಸಿ ಎಲ್ಲಾ ತಯಾರಿಗಳನ್ನು ಪೂರ್ಣಗೊಳಿಸಲಾಗಿದೆ.ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಕಾರ್ಯಪಡೆಗಳನ್ನು ರಚಿಸಲಾಗಿದೆ. ತರಬೇತಿ ನೀಡುವ ಮಾಸ್ಟರ್ ಟ್ರೈನರ್‍ಗಳಿಗೆ ತರಬೇತಿ ನೀಡಲಾಗಿದೆ. ರಾಜ್ಯಮಟ್ಟದಲ್ಲೂ ತರಬೇತಿ ಕೇಂದ್ರಗಳನ್ನುತಯಾರಿಸಲಾಗಿದೆ. ಈವರೆಗೂ 260 ಜಿಲ್ಲೆಗಳ 20 ಸಾವಿರ ಮಂದಿಗೆ ತರಬೇತಿ ನೀಡಲಾಗಿದೆ ಎಂದು ಹೇಳಿದರು.

ಲಸಿಕಾ ಅಂದೋಲನದಲ್ಲಿ ಕೋ-ವಿನ್ ಡಿಜಿಟಲ್ ವೇದಿಕೆ ಮಹತ್ವದ ಪಾತ್ರ ವಹಿಸಲಿದೆ. ಮೊಬೈಲ್ ಆಪ್‍ನಲ್ಲಿ ಲಸಿಕೆ ನಿಗದಿತ ಸ್ಥಳಕ್ಕೆ ತಲುಪಿದ ತಕ್ಷಣವೆ ಮಾಹಿತಿ ಲಭ್ಯವಾಗುತ್ತದೆ. ಕೋ-ವಿನ್ ಆಪ್‍ನಲ್ಲಿ ಲಸಿಕೆಯನ್ನು ಎಷ್ಟು ಡಿಗ್ರಿ ಉಷ್ಣಾಂಶದಲ್ಲಿ ಸಾಗಾಣಿಕೆ ಮಾಡಲಾಗುತ್ತಿದೆ ಎಂಬುದರ ಮೇಲೂ ನಿಗಾವಹಿಸಬಹುದು. ಲಸಿಕೆ ಪಡೆಯಬೇಕಾದವರ ವಿವರ, ಮೊದಲ ಲಸಿಕೆ ಮತ್ತು ಎರಡನೆ ಹಂತದ ಲಸಿಕೆ ಪಡೆದ ಮಾಹಿತಿಯೂ ದಾಖಲಾಗುತ್ತದೆ, ಎರಡನೇ ಹಂತದ ಲಸಿಕೆ ಅವಧಿ ಮುಗಿದ ಬಳಿಕ ತನ್ನಷ್ಟಕ್ಕೆ ತಾನೇ ದೃಢಿಕರಣ ಪತ್ರ ತಯಾರಾಗುತ್ತದೆ ಎಂದು ಹೇಳಿದ್ದಾರೆ.

ದೇಶದಲ್ಲಿ 28 ರಿಂದ 29 ಸಾವಿರ ಲಸಿಕೆ ಸಾಗಾಣಿಕೆಯ ಕೇಂದ್ರಗಳಿವೆ. ಲಸಿಕೆ ಸಾಗಾಣಿಕೆಗೆ ಅಗತ್ಯವಾದ ರೆಫ್ರಿಜಿರೇಟರ್, ಮೊಬೈಲ್ ವ್ಯಾನ್, ತೀವ್ರವಾದ ಫ್ರೀಜರ್ ಸೇರಿದಂತೆ ಸಲಕರಣೆಗಳ ಖರೀದಿಗೆಯನ್ನು  ಆರಂಭ ಮಾಡಲಾಗಿದೆ. ಲಸಿಕೆ ದಾಸ್ತಾನು ಕೇಂದ್ರಗಳಿಗೆ ಬೇಕಾದ ಪರಿಕರಗಳನ್ನು ಒದಗಿಸಲಾಗುತ್ತಿದೆ ಎಂದು ಹೇಳಿದರು.

ಲಸಿಕೆ ನಿರ್ವಹಣೆಯ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರು ನಿಗಾ ವಹಿಸಿದ್ದಾರೆ. ಕಾಲ ಕಾಲಕ್ಕೆ ಅಗತ್ಯ ಸೂಚನೆಗಳನ್ನು ನೀಡುತ್ತಿದ್ದಾರೆ. ಈಗಾಗಲೇ ಔಷಧಿ ತಯಾರಿಕಾ ಕೇಂದ್ರಗಳಿಗೂ ಭೇಟಿ ನೀಡಿ ಗಂಭೀರವಾಗಿ ಪರಿಶೀಲಿಸಿದ್ದಾರೆ. ಸುರಕ್ಷತೆ ಮತ್ತು ಲಸಿಕೆಯ ಸಾಮಥ್ರ್ಯ ನಮ್ಮ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಸಚಿವರು ಸ್ಪಷ್ಟ ಪಡಿಸಿದ್ದಾರೆ.

Exit mobile version