ಅಗ್ನಿಪಥ್ ಯೋಜನೆ ಆಕ್ರೋಶ ; ರೈಲಿಗೆ ‘ಅಗ್ನಿ’ ಇಟ್ಟ ಪ್ರತಿಭಟನಕಾರರು!

ಅಗ್ನಿಪಥ್ ನೇಮಕಾತಿ ಯೋಜನೆ(Agnipath Recruitment Yojana) ವಿರುದ್ಧ ಪ್ರತಿಭಟನೆಯ ನಡುವೆ ಬಿಹಾರ(Bihar) ನಿಲ್ದಾಣದಲ್ಲಿ ರೈಲಿಗೆ ಬೆಂಕಿ ಹಚ್ಚಲಾಗಿದೆ. ಸರ್ಕಾರದ ಅಗ್ನಿಪಥ್ ರಕ್ಷಣಾ ನೇಮಕಾತಿ ಯೋಜನೆಯನ್ನು ವಿರೋಧಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದು, ತೀವ್ರ ಆಕ್ರೋಶದಿಂದ ಬಿಹಾರದ ರೈಲು ನಿಲ್ದಾಣದಲ್ಲಿ ರೈಲಿಗೆ ಬೆಂಕಿ ಹಚ್ಚಿದ್ದಾರೆ.

ದೆಹಲಿಯ(Delhi) ನಂಗ್ಲೋಯ್(Nangloi) ನಿಲ್ದಾಣದಲ್ಲಿ ಪ್ರತಿಭಟನಾಕಾರರು ರೈಲು ತಡೆದಿದ್ದಾರೆ. ರೈಲ್ವೆ ನೇಮಕಾತಿ ಪರೀಕ್ಷೆಗಳಲ್ಲಿನ ವಿಳಂಬ ಮತ್ತು ಕೇಂದ್ರದ ಅಗ್ನಿಪಥ್ ಯೋಜನೆಯನ್ನು ಪ್ರತಿಭಟಿಸಲು ದೆಹಲಿಯ ನಂಗ್ಲೋಯ್ ರೈಲು ನಿಲ್ದಾಣದಲ್ಲಿ ಸುಮಾರು 20 ಪುರುಷರು ಜಮಾಯಿಸಿ, ರೈಲಿನ ಸಂಚಾರವನ್ನೂ ನಿಲ್ಲಿಸಿದ್ದಾರೆ. ಅವರನ್ನು ಸಮಾಧಾನಪಡಿಸಿ ಪೊಲೀಸರು ಚದುರಿಸಿದರು ಕೂಡ ಬಗ್ಗದೆ ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಬಿಹಾರದ 8 ಜಿಲ್ಲೆಗಳಲ್ಲಿ ಪ್ರತಿಭಟನೆ
ಬಿಹಾರದ ಜಹಾನಾಬಾದ್, ಬಕ್ಸರ್, ಮುಜಫರಾಬಾದ್, ಭೋಜ್‌ಪುರ್, ಸರನ್, ಮುಂಗೇರ್, ನವಾಡ ಮತ್ತು ಕೈಮೂರ್‌ನ ಕನಿಷ್ಠ ಎಂಟು ಜಿಲ್ಲೆಗಳಿಂದ ಅಗ್ನಿಪಥ್ ಯೋಜನೆಯ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿರುವುದು ವರದಿಯಾಗಿವೆ. ರಾಜಸ್ಥಾನ, ಹರಿಯಾಣ, ಯುಪಿ, ಮಧ್ಯಪ್ರದೇಶ ಮತ್ತು ದೆಹಲಿಯಲ್ಲೂ ಪ್ರತಿಭಟನೆಗಳು ವರದಿಯಾಗಿವೆ. ಅಗ್ನಿಪಥ್ ಯೋಜನೆಯ ವಿರುದ್ಧದ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗುತ್ತಿದ್ದಂತೆ, ಅಗ್ನಿವೀರರ ಭವಿಷ್ಯವು ಸ್ಥಿರವಾಗಿದೆ ಎಂದು ಸರ್ಕಾರವು ಸ್ಪಷ್ಟಪಡಿಸಿದೆ.

ಕೇಂದ್ರದ ಅಗ್ನಿಪಥ್ ಸೇನಾ ನೇಮಕಾತಿ ಯೋಜನೆಗೆ ಸಂಬಂಧಿಸಿದಂತೆ ಬಿಹಾರ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ಸೇರಿದಂತೆ ದೇಶದ ಹಲವಾರು ಭಾಗಗಳಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ಭುಗಿಲೆದ್ದಿದ್ದು, ಹಲವಾರು ಆಕಾಂಕ್ಷಿಗಳು ಪ್ರತಿಭಟನೆಗಳ ಮುಖೇನ ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರಿಂದ ಅಗ್ನಿವೀರರ ಭವಿಷ್ಯವು ಸ್ಥಿರವಾಗಿದೆ ಎಂದು ಸರ್ಕಾರ ಸ್ಪಷ್ಟವಾಗಿ ತಿಳಿಸಿದೆ. ಸೇನೆಯ ಉದ್ಯೋಗಾಕಾಂಕ್ಷಿಗಳು ಭದ್ರತೆ ಮತ್ತು ಪಿಂಚಣಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರಿಂದ ಬಿಹಾರ ಮತ್ತು ರಾಜಸ್ಥಾನದಾದ್ಯಂತ ಸರ್ಕಾರದ ಅಗ್ನಿಪಥ್ ಯೋಜನೆ ವಿರುದ್ಧ ಬೃಹತ್ ಪ್ರತಿಭಟನೆಗಳು ನಡೆಯುತ್ತಿವೆ.

ಬಿಹಾರದ ಅರಾದಿಂದ ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ವರದಿಯಾಗಿದ್ದು, ಕೇಂದ್ರ ಸರ್ಕಾರದ ಯೋಜನೆ ವಿರುದ್ಧ ಹಲವಾರು ವಿದ್ಯಾರ್ಥಿಗಳು ಬೀದಿಗಿಳಿದಿದು ಪ್ರತಿಭಟನೆ ಕೈಗೊಳ್ಳುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

Exit mobile version