ಸೈಕಲ್(Cycle) ಓಡಿಸದವರು ಯಾರಾದರೂ ಇದ್ದಾರಾ? ಹಿಂದಿನ ತಲೆಮಾರಿನಿಂದ ಹಿಡಿದು ಈಗಿನ ಮಕ್ಕಳವರೆಗೂ ಎಲ್ಲರೂ ಸೈಕಲ್ ಪ್ರಿಯರೇ. ಈಗೀಗ ಪ್ರತಿದಿನ ಸೈಕಲ್ ಬಳಸುವವರು ಬಹಳ ವಿರಳ.
ಎಲ್ಲರೂ ಬೈಕ್ ಹಾಗೂ ಕಾರ್ ಗಳನ್ನು ಹೆಚ್ಚಾಗಿ ಬಳಸುತ್ತಾರೆ. ಸೈಕಲ್ ತುಳಿಯುವುದು ಆರೋಗ್ಯಕ್ಕೆ ಒಳ್ಳೆಯದು, ಪರಿಸರಕ್ಕೆ ಯಾವುದೇ ರೀತಿಯ ಮಾಲಿನ್ಯವನ್ನು ಉಂಟು ಮಾಡುವುದಿಲ್ಲ, ಪೆಟ್ರೋಲ್ ಡಿಸೇಲ್ ಬೇಕಿಲ್ಲ, ಇದರಿಂದ ಹಣವೂ ಉಳಿತಾಯವಾಗುತ್ತದೆ. ಇಷ್ಟೆಲ್ಲಾ ಲಾಭಗಳಿದ್ದರೂ, ವೇಗವಾಗಿ ಓಡುತ್ತಿರುವ ಈ ಕಾಲಘಟ್ಟದಲ್ಲಿ ಬೈಕ್ ಹಾಗೂ ಕಾರ್ ಗಳಂತಹ ವಾಹನಗಳ ಜೊತೆಗೆ ಸ್ಪರ್ಧಿಸುವಲ್ಲಿ ಸೈಕಲ್ ಹಿಂದುಳಿದಿದೆ. ಆದರೆ ಇಲ್ಲೊಂದು ಸೈಕಲ್ ತನ್ನ ದುಬಾರಿ ಬೆಲೆಯಿಂದಾಗಿ ಎಲ್ಲರ ಗಮನ ಸೆಳೆಯುತ್ತಿದೆ.
ಬ್ರಿಟಿಷ್ ವಿನ್ಯಾಸಕ ಡೇಮಿಯನ್ ಹಿರ್ಸ್ಟ್ ರಚಿಸಿದ ಬಟರ್ಫ್ಲೈ ಟ್ರೆಕ್ ಮಾಡೋನ್(Butterfly Trek Madone) ಅತ್ಯಂತ ದುಬಾರಿ ಸೈಕಲ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಸೈಕಲ್ ದಾಖಲೆಯ ಮೊತ್ತಕ್ಕೆ ಹರಾಜಾಗಿದೆ. ಇದರ ಬೆಲೆ ಬರೋಬ್ಬರಿ ಅರ್ಧ ಮಿಲಿಯನ್ ಡಾಲರ್! ಇಷ್ಟೊಂದು ದುಬಾರಿಯಾಗಿದೆ ಎಂದರೆ ಈ ಸೈಕಲ್ ನಲ್ಲಿ ಏನಿದೆ ಅಂತಹ ವಿಶೇಷತೆ ಎಂದು ಯೋಚಿಸುತ್ತಿದ್ದೀರಾ? ಈ ಸೈಕಲ್ ಚಾಲನಾ ವಿಧಾನವೇನು ಭಿನ್ನವಾಗಿಲ್ಲ, ಇತರ ಸೈಕಲ್ಗಳಂತೆಯೇ ಇದನ್ನು ಓಡಿಸಬಹುದು. ಇದು ಹೆಚ್ಚು ವೇಗವಾಗಿಯೂ ಚಲಿಸುವುದಿಲ್ಲ. ಚಿನ್ನದ ಲೇಪನ ಮಾಡಿಲ್ಲ, ವಜ್ರಗಳಿಂದ ಅಲಂಕರಿಸಲಾಗಿಲ್ಲ.
ಆದ್ರೂ ಈ ಸೈಕಲ್ ನ ವಿಶೇಷತೆ ಎಂದರೆ, ಸೈಕಲ್ ಚೌಕಟ್ಟಿನ ಅಲಂಕಾರ ಮತ್ತು ಚಿಟ್ಟೆ ರೆಕ್ಕೆಗಳೊಂದಿಗೆ ಮಾಡಲಾದ ಚಕ್ರಗಳ ಒಳಭಾಗ. ಹೌದು, ಅತ್ಯಂತ ವಿಶಿಷ್ಟವಾದ ಈ ವಿನ್ಯಾಸದ ರಚನೆಗಾಗಿಯೇ ಡೇಮಿಯನ್ ಹಿರ್ಸ್ಟ್ ಅವರು ವಿಶೇಷವಾಗಿ ಬೆಳೆಸಿದ ಚಿಟ್ಟೆಗಳು ಇಷ್ಟು ಹೆಚ್ಚಿನ ಬೆಲೆಗೆ ಕಾರಣವಾಗಿವೆ. ಈ ಮೂಲಕ, ಡೇಮಿಯನ್ ಹಿರ್ಸ್ಟ್ ತನ್ನ ಅಸಾಮಾನ್ಯ ಸೃಷ್ಟಿಯಾದ ಈ ಸೈಕಲನ್ನು, ಪ್ರಸಿದ್ಧ ಅಮೇರಿಕನ್ ಸೈಕ್ಲಿಸ್ಟ್ ಲೂಯಿಸ್ ಆರ್ಮ್ಸ್ಟ್ರಾಂಗ್ಗೆ ಅರ್ಪಿಸಿದರು
ಬೈಕ್ ಲ್ಯಾನ್ಸ್ ಆರ್ಮ್ಸ್ಟ್ರಾಂಗ್ ಫೌಂಡೇಶನ್ ಆಯೋಜಿಸಿದ್ದ ಹರಾಜಿನಲ್ಲಿ ಟ್ರೆಕ್ ಮಾಡಿದ $ 500,000 ಗೆ ಮಾರಾಟವಾಯಿತು. ಎಂದರೆ ರೂಪಾಯಿಗಳಲ್ಲಿ ಇದರ ಬೆಲೆ 3.88 ಕೋಟಿ ರೂಪಾಯಿಗಳು!