New Delhi: ದಿಲ್ಲಿಯಲ್ಲಿ 2008ರ ಸೆಪ್ಟೆಂಬರ್‌ನಲ್ಲಿ ನಡೆದಿದ್ದ 25 ವರ್ಷದ ಪತ್ರಕರ್ತೆ ಸೌಮ್ಯಾ ವಿಶ್ವನಾಥನ್ (Sowmya Viswanathan) ಕೊಲೆ ಪ್ರಕರಣ ಪೊಲೀಸರಿಗೆ ದೊಡ್ಡ ತಲೆನೋವಾಗಿತ್ತು. ನಸುಕಿನಲ್ಲಿ ನಡೆದಿದ್ದ ಹತ್ಯೆಯ ಯಾವ ಸುಳಿವೂ ಸಿಕ್ಕಿರಲಿಲ್ಲ. 2009ರಲ್ಲಿ ನಡೆದ ಕೊಲೆಯೊಂದರಲ್ಲಿ ಕೊಲೆಗಾರರು ಬಿಟ್ಟ ಸುಳಿವುಗಳು ಸೌಮ್ಯಾ ಪ್ರಕರಣಕ್ಕೆ ಮಹತ್ತರ ತಿರುವು ನೀಡಿದ್ದವು.
ಹೆಡ್ಲೈನ್ಸ್ ಟುಡೆ (Headlines Today) ಮಾಧ್ಯಮದ ನ್ಯೂಸ್ ಪ್ರೊಡ್ಯೂಸರ್ ಆಗಿದ್ದ ಅವರು, ಬ್ರೇಕಿಂಗ್ ನ್ಯೂಸ್‌ಗೆ (Breaking News) ಸಂಬಂಧಿಸಿದಂತೆ ಕೆಲಸ ಮುಗಿಸಿ ಹೊರಡುವುದು ತಡವಾಗಿತ್ತು. ದಿಲ್ಲಿಯ (Delhi) ಝಾಂಡೆವಾಲನ್ ಕಚೇರಿಯಿಂದ ನಸುಕಿನ 3.03ರ ಸಮಯಕ್ಕೆ ಕಾರು ಹತ್ತಿದ ಅವರು, ವಸಂತ್ ಕುಂಜ್‌ನಲ್ಲಿನ ಮನೆಗೆ ಹೊರಟಿದ್ದರು. ತದ ಬಳಿಕ ಕಾರಿನ ಬಳಿ ಅವರು ರಕ್ತದ ಮಡುವಿನಲ್ಲಿ ಬಿದ್ದಿದ್ದರು.
ಮೊದಲಿಗೆ ಪೊಲೀಸರು ಇದು ಅಪಘಾತ ಇರಬಹುದು ಎಂದು ಭಾವಿಸಿದ್ದು, ನಂತರ ಮರಣೋತ್ತರ ಪರೀಕ್ಷೆ ವೇಳೆ ಸೌಮ್ಯಾ ಅವರ ತಲೆಗೆ ಗುಂಡು ಹೊಕ್ಕಿರುವುದು ಪತ್ತೆಯಾಗಿತ್ತು. ಹಂತಕರಿಗಾಗಿ ಸಾಕಷ್ಟು ಹುಡುಕಿದರೂ ಯಾವ ಸುಳಿವೂ ಸಿಕ್ಕಿರಲಿಲ್ಲ. ಇದು ದರೋಡೆ ಪ್ರಯತ್ನದ ಕೊಲೆ ಎಂದು ಪೊಲೀಸರು ಪರಿಗಣಿಸಿದ್ದರು.
ಜಿಗೀಶಾ ಘೋಷ್ ಕೊಲೆ ಪ್ರಕರಣ
ಐಟಿ ಉದ್ಯೋಗಿ ಜಿಗೀಶಾ ಘೋಷ್ (Jigisha Ghosh) ಎಂಬುವವರನ್ನು ಇದೇ ರೀತಿ ಫರೀದಾಬಾದ್‌ನಲ್ಲಿ 2009ರ ಮಾರ್ಚ್ 18ರಂದು ಕೊಲ್ಲಲಾಗಿತ್ತು. ಎರಡೂ ಹತ್ಯೆಗಳ ಬಳಿಕ ಅವರ ಬಳಿಯಿದ್ದ ಹಣ ಮತ್ತು ಬೆಲೆಬಾಳುವ ವಸ್ತುಗಳನ್ನು ದೋಚಲಾಗಿತ್ತು. ಸಿಸಿಟಿವಿ (CCTV) ದೃಶ್ಯಗಳು, ಪೊಲೀಸ್ ಅಧಿಕಾರಿಯೊಬ್ಬರಿಂದ ಕದ್ದಿದ್ದ ವೈರ್‌ಲೆಸ್ ಸೆಟ್, ಕೈಯಲ್ಲಿದ್ದ ಟ್ಯಾಟೂ (Tattoo) ಮತ್ತು ಘೋಷ್ ಹಂತಕರ ಸುಳಿವನ್ನು ಕೊಟ್ಟಿತ್ತು. ಅದರ ತನಿಖೆ ಸೌಮ್ಯಾ ಕೊಲೆಯ ಹಿಂದಿನ ಬೆಚ್ಚಿಬೀಳಿಸುವ ರಹಸ್ಯವನ್ನೂ ಬಯಲಿಗೆಳೆದಿತ್ತು.
ಬಂಧಿತರಾದ ರವಿ ಕಪೂರ್ (Ravi Kapoor), ಅಮಿತ್ ಶುಕ್ಲಾ ಮತ್ತು ಬಲ್ಜೀತ್ ಮಲಿಕ್, ಸೌಮ್ಯಾ ಕೊಲೆಯನ್ನೂ ತಾವೇ ಮಾಡಿದ್ದು ಎಂದು ಈ ಹತ್ಯೆಯ ತನಿಖೆ ವೇಳೆ ಬಾಯ್ಬಿಟ್ಟಿದ್ದರು. ಅವರು ನೀಡಿದ ಮಾಹಿತಿ ಆಧಾರದಲ್ಲಿ ಅಜಯ್ ಕುಮಾರ್ (Ajay Kumar) ಮತ್ತು ಅವರಿಗೆ ಸಹಾಯ ಮಾಡಿದ್ದ ಅಜಯ್ ಸೇಥಿ ಕೂಡ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು.
ಸಿಸಿಟಿವಿ ಕ್ಯಾಮೆರಾದಲ್ಲಿ ಪತ್ತೆ
ಎರಡು ಮೂರು ದಿನಗಳಲ್ಲಿಯೇ ಹಂತಕರ ಸುಳಿವು ದೊರಕಿದ್ದು, ಫರೀದಾಬಾದ್‌ನ (Faridabad) ಸೂರಜ್ ಕುಂಡ್ ಪ್ರದೇಶದಲ್ಲಿ ಜಿಗಿಶಾ ಘೋಷ್ ಶವ ಪತ್ತೆಯಾಗಿತ್ತು. ಸಿಸಿಟಿವಿ (CCTV) ಕ್ಯಾಮೆರಾವೊಂದರಲ್ಲಿ ಜಿಗಿಶಾರಿಂದ ಕದ್ದಿದ್ದ ಡೆಬಿಟ್ ಕಾರ್ಡ್ (Debit Card) ಬಳಸಿ ಶಾಪಿಂಗ್ ಮಾಡುತ್ತಿದ್ದ ಆರೋಪಿಯೊಬ್ಬನ ಕೈಯಲ್ಲಿನ ಟ್ಯಾಟೂ ಕಾಣಿಸಿತ್ತು. ಟೊಪ್ಪಿ ಧರಿಸಿದ್ದ ಮತ್ತೊಬ್ಬ ಆರೋಪಿ ವೈರ್‌ಲೆಸ್ ಸೆಟ್ (Wireless Set) ಕೊಂಡೊಯ್ಯುತ್ತಿದ್ದ. ಪೊಲೀಸರು ಇದರ ಜಾಡು ಹಿಡಿದು, ಮಸೂದ್‌ಪುರದಲ್ಲಿನ ಮಲಿಕ್‌ನ ಮನೆಗೆ ನುಗ್ಗಿದ್ದರು. ಅದರ ಬೆನ್ನಲ್ಲೇ ಕಪೂರ್ ಮತ್ತು ಶುಕ್ಲಾ ಸಹ ಸಿಕ್ಕಿಬಿದ್ದಿದ್ದರು.
ತನ್ನ ಕೈ ಮೇಲೆ ತನ್ನ ಹೆಸರನ್ನೇ ಹಚ್ಚೆ ಹಾಕಿಸಿಕೊಂಡಿದ್ದ ಮಲಿಕ್ (Malik). ಇನ್ನು ಪೊಲೀಸ್ ಸಿಬ್ಬಂದಿಯೊಬ್ಬರಿಂದ ಕದ್ದಿದ್ದ ವೈರ್‌ಲೆಸ್ ಸೆಟ್‌ಅನ್ನು ಶುಕ್ಲಾ ಕೊಂಡೊಯ್ಯುತ್ತಿದ್ದ. ಇನ್ನು ವಸಂತ್ ವಿಹಾರದಲ್ಲಿನ ಮನೆಯಿಂದ ಜಿಗಿಶಾ ಘೋಷ್ ಅವರನ್ನು ಅಪಹರಿಸಿದ್ದ ಕೊಲೆಗಡುಕರು, ಆಕೆಯನ್ನು ದೋಚಿದ ನಂತರ ಕೊಲೆ ಮಾಡಿದ್ದರು. ಆಕೆಯ ಡೆಬಿಟ್ ಕಾರ್ಡ್ ಬಳಸಿ ಶಾಪಿಂಗ್ (Shopping) ಮಾಡಿದ್ದರು. ಇದೆಲ್ಲ ಮಾಹಿತಿ ಬಾಯ್ಬಿಡುವಾಗ ರವಿ ಕಪೂರ್, ಅದರ ಹಿಂದಿನ ವರ್ಷ ನೆಲ್ಸನ್ ಮಂಡೇಲಾ (Nelson Mandela) ಮಾರ್ಗದಲ್ಲಿ ಮತ್ತೊಬ್ಬ ಯುವತಿಯನ್ನು ಕೊಂದಿದ್ದಾಗಿ ತಿಳಿಸಿದ್ದ.
ಮಾರುತಿ ಜೆನ್ (Maruti Zen) ಕಾರೊಂದು ಈ ಹಂತಕರ ಕಾರನ್ನು ಹಿಂದಿಕ್ಕಿಕೊಂಡು ಮುಂದಕ್ಕೆ ಹೋಗಿತ್ತು. ಮಹಿಳೆಯೊಬ್ಬಳು ತಮ್ಮ ಕಾರನ್ನು ಹಿಂದೆ ಹಾಕಿದ್ದು ಕಂಡ ಕ್ರೂರಿಗಳು, ಆಕೆ ಒಂಟಿಯಾಗಿ ಇರುವುದನ್ನು ಗಮನಿಸಿದ್ದರು.ಕೂಡಲೇ ತಮ್ಮ ಕಾರಿನ ವೇಗ ಹೆಚ್ಚಿಸಿ, ಸೌಮ್ಯಾ ಕಾರಿನ ಸಮೀಪ ಬಂದಿದ್ದರು. ಆಕೆಯನ್ನು ತಡೆಯಲು ಮೊದಲು ಪ್ರಯತ್ನಿಸಿದರು. ಆದರೆ ಸೌಮ್ಯಾ ಕಾರು ನಿಲ್ಲಿಸಿರಲಿಲ್ಲ. ಆಗ ಕಪೂರ್ ಗನ್ (Gun) ತೆಗೆದು ಗುಂಡು ಹಾರಿಸಿದ್ದ. ಅದು ನೇರವಾಗಿ ಸೌಮ್ಯಾರ ತಲೆಯನ್ನು ಹೊಕ್ಕಿತ್ತು. ಇದರ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟರು. ಕಾರು ಡಿವೈಡರ್‌ಗೆ (Divider) ಡಿಕ್ಕಿ ಹೊಡೆದು ನಿಂತಿತ್ತು.
ಹಂತಕರು ಸ್ಥಳದಿಂದ ಪರಾರಿಯಾಗಿದ್ದರು. ಆದರೆ ಆಕೆಯ ಸ್ಥಿತಿ ತಿಳಿಯಲು 20 ನಿಮಿಷಗಳ ನಂತರ ಮತ್ತೆ ಅಲ್ಲಿಗೆ ಬಂದಿದ್ದರು. ಅಲ್ಲಿ ಪೊಲೀಸ್ ಸಿಬ್ಬಂದಿಯನ್ನು ಕಂಡು ವಾಪಸಾಗಿದ್ದರು. ಸಮೀಪದ ರೆಸ್ಟೋರೆಂಟ್ (Restaurant) ಒಂದರ ಕೆಲಸಗಾರ 3.45ರ ವೇಳೆಗೆ ಸೈಕಲ್‌ನಲ್ಲಿ ಮನೆಗೆ ಹೋಗುತ್ತಿದ್ದಾಗ, ಕಾರ್‌ನಲ್ಲಿದ್ದ ಮಹಿಳೆಯನ್ನು ಕಂಡಿದ್ದ. ಕಾರಿನ ಹೆಡ್‌ಲೈಟ್ (Headlight) ಉರಿಯುತ್ತಿತ್ತು. ಎಂಜಿನ್ ಚಾಲನೆಯಲ್ಲಿತ್ತು. ಅಲ್ಲಿ ಬರುತ್ತಿದ್ದ ಒಂದೆರಡು ವಾಹನಗಳನ್ನು ನಿಲ್ಲಿಸಿದ ಆತ, ಪೊಲೀಸರಿಗೆ ಕರೆ ಮಾಡಿದ್ದ.
ಸೌಮ್ಯಾ ಅವರನ್ನು ಏಮ್ಸ್‌ಗೆ (Aims) ಸಾಗಿಸಲಾಗಿತ್ತು. ಆದರೆ ಅವರು ಆಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದರು. ಇನ್ನು ತಂದೆಗೆ 3.15ಕ್ಕೆ ಮನೆಗೆ ವಾಪಸಾಗುತ್ತಿರುವುದಾಗಿ ಕರೆ ಮಾಡಿ ತಿಳಿಸಿದ್ದರು. ಆದರೆ ದುರದೃಷ್ಟವಶಾತ್ ಅರ್ಧ ಗಂಟೆಯ ಒಳಗೆ ಜೀವ ಕಳೆದುಕೊಂಡಿದ್ದರು. ಅವರ ಕಾರಿನಲ್ಲಿ ಫೋನ್ (Phone) ಮತ್ತು ವ್ಯಾಲೆಟ್ (Wallet) ಇರುವುದನ್ನು ಪೊಲೀಸರು ನಂತರ ಪತ್ತೆ ಮಾಡಿದ್ದರು.
ಭವ್ಯಶ್ರೀ ಆರ್.ಜೆ