Dharmashtala: ಧರ್ಮಸ್ಥಳದಲ್ಲಿ ನಡೆದ ಸೌಜನ್ಯ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣ ಇಡೀ ದೇಶದಲ್ಲೇ (justice for soujanya) ಸಂಚಲನವನ್ನು ಮೂಡಿಸಿತ್ತು. ಅದ್ರಲ್ಲೂ 11
ವರ್ಷಗಳ ಬಳಿಕ ಈ ಪ್ರಕರಣದ ಪ್ರಮುಖ ಆರೋಪಿ ಸಂತೋಷ್ ರಾವ್ (Santhosh Rao) ನಿರಪರಾಧಿ ಅಂತ ಸಿಬಿಐ (CBI) ನ್ಯಾಯಾಲಯ ಯಾವಾಗ ಆತನನ್ನು ಬಿಡುಗಡೆ ಮಾಡಿತೋ
ಆಗ ಸೌಜನ್ಯಗಳಿಗೆ ನ್ಯಾಯ ಸಿಗಬೇಕು ಅನ್ನೋ ಹೋರಾಟ ಇನ್ನಷ್ಟು ತೀವ್ರ ಸ್ವರೂಪ ಪಡೆಯಿತು. ಈಗ ಎಲ್ಲೆಲ್ಲಿಯೂ ಸೌಜನ್ಯಗಳಿಗೆ ನ್ಯಾಯ ಸಿಗಬೇಕು ಅನ್ನೋ ಸಮಾವೇಶಗಳು, ಪಾದಯಾತ್ರೆಗಳು,
ರ್ಯಾಲಿಗಳು ನಡೀತಿವೆ. ಈ ಹೋರಾಟಗಳು ಹೊಸ ಹೊಸ ಆಯಾಮಗಳನ್ನು, ಹೊಸ (justice for soujanya) ಹೊಸ ರೂಪಗಳನ್ನು ಪಡೆಯುತ್ತಿವೆ.

ಬೀದಿ ರಂಪಾಟಗಳಿಗೆ ಕಾರಣವಾಗುತ್ತಿವೆ. ಹಾಗಾಗಿಯೇ ಈಗ ಸೌಜನ್ಯ (Soujanya) ಪರ ಹೋರಾಟಗಳು ಜನರಲ್ಲಿ ನಾನಾ ಪ್ರಶ್ನೆಗಳನ್ನು ಮೂಡಿಸುತ್ತಿವೆ. ಸೌಜನ್ಯಾ ಅತ್ಯಾಚಾರ-ಹತ್ಯೆ ಪ್ರಕರಣವು
ಸಮಾಧಿಯಾಯ್ತಾ? ಸೌಜನ್ಯ ಪ್ರಕರಣದ ಹೋರಾಟದ ದಾರಿ ತಪ್ಪಿಸಲಾಯಿತೇ? ಸೌಜನ್ಯ ಸಾವಿಗೆ ನ್ಯಾಯ ಸಿಗೋದು ಇನ್ನು ಮರೀಚಿಕೆಯಾ? ಪಟ್ಟಬದ್ಧ ಹಿತಾಸಕ್ತಿಗಳಿಂದ ಸೌಜನ್ಯ ಪ್ರಕರಣದ
ಕಗ್ಗೊಲೆಯಾಯಿತಾ? ಅನ್ನೋ ಗಂಭೀರ ಪ್ರಶ್ನೆಗಳು ಕಾಡುತ್ತಿವೆ.
Online Certificate Course: 2023 ರಲ್ಲಿನ ಭಾರತದ ಟಾಪ್ 8 ಆನ್‌ಲೈನ್ ಸರ್ಟಿಫಿಕೇಟ್ ಕೋರ್ಸ್‌ಗಳು ಇಲ್ಲಿದೆ ಮಾಹಿತಿ
ಸೌಜನ್ಯಳ ಸಾವಿಗೆ ನ್ಯಾಯ ಸಿಗಬೇಕು ಎಂದು ನಡೆದ ಹೋರಾಟಗಳು ಇನ್ನೇನು ತೀವ್ರ ಸ್ವರೂಪ ಪಡೆಯುತ್ತಿದೆ ಎನ್ನುವ ಸಂದರ್ಭದಲ್ಲೇ ಪ್ರಕರಣದ ಹೋರಾಟ ದಿಕ್ಕನ್ನೇ ತಪ್ಪಿಸಲಾಗುತ್ತಿದೆ. ಒಂದು
ಕಡೆ ಸೌಜನ್ಯಾಳ ಪರ ಹೋರಾಟ, ಮತ್ತೊಂದೆಡೆ ಧರ್ಮಸ್ಥಳ ಮಂಜುನಾಥ ಕ್ಷೇತ್ರದ ಘನತೆಗಾಗಿ ನಡೆಯುತ್ತಿರುವ ಪ್ರಮಾಣಾಹ್ವಾನ, ಮತ್ತೊಂದೆಡೆ ಪಂಥಾಹ್ವಾನಗಳು ಇಡೀ ಪ್ರಕರಣದ ಗಂಭೀರತೆಗೆ
ಧಕ್ಕೆ ಉಂಟು ಮಾಡುತ್ತಿವೆ. ಅದೃಶ್ಯ ಪಡೆಗಳೆಲ್ಲಾ ಹೋರಾಟಕ್ಕಿಳಿದಿವೆ: ಈಗ ಬೀದಿ ತುಂಬಾ ಸೌಜನ್ಯಾಳಿಗೆ ನ್ಯಾಯ ಸಿಗಬೇಕು ಅನ್ನುವ ಹೋರಾಟ ಪ್ರಾರಂಭವಾಗಿದ್ದು, ಅದೃಶ್ಯವಾಗಿದ್ದ ಪಡೆಗಳೆಲ್ಲಾ
ಸೌಜನ್ಯಾಳ ಪರ ಪ್ರತ್ಯಕ್ಷವಾಗಿ ಬೀದಿ ರಂಪಾಟ ಮಾಡುತ್ತಿವೆ.

ಹಾಗಾಗಿ ಈ ಹೋರಾಟಗಾರರ ಕಾಳಜಿಗಳ ಬಗ್ಗೆ ಜನರಿಗೆ ಅನುಮಾನಗಳು ಶುರುವಾಗಿದೆ. ಸೌಜನ್ಯ ಅತ್ಯಾಚಾರ ಮತ್ತು ಕೊಲೆ ನಡೆದ ಸಂದರ್ಭದಲ್ಲಿ ಸರ್ಕಾರವು ಯಾವ ರೀತಿ ನಿರ್ಲಕ್ಷ್ಯವಹಿಸಿತ್ತೋ
ಅದೇ ರೀತಿ ಈಗಿನ ಸರ್ಕಾರವು ನಿರ್ಲಕ್ಷ್ಯವನ್ನು ತೋರುತ್ತಿರುವುದು ಮೇಲ್ನೋಟಕ್ಕೇ ಗೋಚರವಾಗುತ್ತಿದೆ. ಆರಂಭದಲ್ಲಿ ಗೃಹ ಸಚಿವರ ನೀಡಿದ್ದ ಹೇಳಿಕೆ ತದ ನಂತರ ಮುಖ್ಯಮಂತ್ರಿಗಳ ಕಾಳಜಿ
ಇಲ್ಲದ ಉತ್ತರಗಳು ಇವೆಲ್ಲಾ ಈ ಸರ್ಕಾರದ ಬದ್ಧತೆಯ ಬಗ್ಗೆಯೇ ಪ್ರಶ್ನಾರ್ಥಕ ಚಿಹ್ನೆ ಮೂಡುವಂತೆ ಮಾಡಿದೆ. ‘ಜಸ್ಟೀಸ್ ಫಾರ್ ಸೌಜನ್ಯ’ (Justice For Soujanya) ಎಂಬ ಹೋರಾಟವನ್ನು
ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಹೈಜಾಕ್ ಮಾಡುತ್ತಿದ್ದು, ಅವರ ಬೇಳೆ ಬೇಯಿಸಿಕೊಳ್ಳುವ ಸಲುವಾಗಿ ಬೀದಿಗಿಳಿದು ಶಕ್ತಿ ಪ್ರದರ್ಶನ ಮಾಡುತ್ತಿವೆ.
ಇನ್ನು ಕೆಲವರಿಗೆ ಈ ಹೋರಾಟ ಪ್ರತಿಷ್ಠೆಯ ರಕ್ಷಣೆಯ ರಂಗವಾಗಿದೆ. ಇನ್ನು ರಾಜಕೀಯ ಶಕ್ತಿಗಳಿಗೆ ಸೌಜನ್ಯಾ ಪ್ರಕರಣ ಚುನಾವಣಾ ವಿಷಯವಾಗುತ್ತಿದೆ. ಹೋರಾಟದ ವೇದಿಕೆ ಇಂದು ಕೆಸರೆರೆಚಾಟದ
ಕಣವಾಗುತ್ತಿರುವುದು ಮಾತ್ರ ದುರಂತ ಅಂತ ಹೇಳಬಹುದು. ಒಟ್ಟಿನಲ್ಲಿ ಸೌಜನ್ಯಾಳ ಪರ ಹೋರಾಟ ರಾಜ್ಯದ ಜನರಲ್ಲಿ ಕಿಚ್ಚು ಹಚ್ಚಿದೇ ವಿನಹ ಸರ್ಕಾರವನ್ನು ಬಡಿದೆಬ್ಬಿಸುವಲ್ಲಿ ಶಕ್ತವಾಗಿಲ್ಲ.
ಮತ್ತು ಸರ್ಕಾರಕ್ಕೆ ಬಿಸಿ ಮುಟ್ಟಿಸಲು ವಿಫಲವಾಗುತ್ತಿದೆ. ಇನ್ನು ಸೌಜನ್ಯಳಿಗೆ ನ್ಯಾಯ ಸಿಗಬೇಕು ಪ್ರಕರಣದ ಮರು ತನಿಖೆಯಾಗಬೇಕು, ತಪ್ಪಿತಸ್ಥರಿಗೆ ಶಿಕ್ಷೆಯಾಗಭೇಕು ಎನ್ನುವ ಏಕಧ್ಯೇಯ
ವಾಕ್ಯದಲ್ಲಿ ಹೋರಾಟ ನಡೆಯಬೇಕೇ ಹೊರತು ಈ ಪ್ರಕರಣ ಆರೋಪ, ಪ್ರತ್ಯಾರೋಪಗಳ ವೇದಿಕೆಯಾಗಬಾರದು ಮತ್ತು ಸಂಘರ್ಷಕ್ಕೆ ಕಾರಣವಾಗಬಾರದು.
- ಭವ್ಯಶ್ರೀ ಆರ್.ಜೆ