ವನ್ಯ ಜೀವಗಳ ಜೀವಂತ ಸಮಾಧಿ. ಮಂಡ್ಯದ ಕೆ.ಆರ್‌ ಪೇಟೆಯಲ್ಲಿ ನಡೆಯುತ್ತಿದೆ ವಿಕೃತ ಕೃತ್ಯ. ವನ್ಯಜೀವಿ ವಲಯದೊಳಗೆ ನುಗ್ಗಿ, ಕಾಡನ್ನು ಸರ್ವನಾಶ ಮಾಡಿದ್ರು ಸಣ್ಣ ನೀರಾವರಿ ಇಲಾಖೆ ಗುತ್ತಿಗೆದಾರರು !

Deforestation by K.R Pet minor irrigation contractors. Illegally entered in a wildlife sanctuary


ಸರ್ವ ನಾಶ……ಸಂಪೂರ್ಣ ನಾಶ. ಪ್ರಾಣಿ ಪಕ್ಷಿಗಳಿಂದ ತುಂಬಿದ್ದ ಈ ಅರಣ್ಯವನ್ನು ನಿರ್ದಾಕ್ಷಿಣ್ಯವಾಗಿ ನಾಶ ಮಾಡ್ತಿದ್ದಾರೆ ಸರ್ಕಾರಿ ಕಟುಕರು.
ಈ ನಾಡಿನ ಅಮೂಲ್ಯ ಅರಣ್ಯ ಸಂಪತ್ತನ್ನು ಉಳಿಸಿ ಬೆಳೆಸಬೇಕಾದ ಅಧಿಕಾರಿಗಳೇ ವನ್ಯಜೀವಿ ಅರಣ್ಯ ಪ್ರದೇಶದೊಳಗೆ ನುಗ್ಗಿ ಇಡೀ ಕಾಡನ್ನೇ ಸರ್ವನಾಶ ಮಾಡಿದ್ದಾರೆ.

ಈ ದುಷ್ಕೃತ್ಯ ನಡೆದಿರೋದು ಮಂಡ್ಯ ಜಿಲ್ಲೆಯ ಕೆ.ಆರ್‌ಪೇಟೆಯ ಶೀಳನೆರೆ ಹೋಬಳಿಯ ರಾಯಸಮುದ್ರ ಗ್ರಾಮದಲ್ಲಿರುವ ವನ್ಯಜೀವಿ ಅರಣ್ಯ ಪ್ರದೇಶದೊಳಗೆ. ರಾಯಸಮುದ್ರ ಗ್ರಾಮದ ಬಳಿ ಇರುವ ಸೂಜಿಕಲ್ಲು ಕೆರೆ ಅಭಿವೃದ್ದಿ ಕಾರ್ಯ ಮಾಡಲು ಸಣ್ಣ ನೀರಾವರಿ ಮತ್ತು ಅಂರ್ಜಲ ಅಭಿವೃದ್ಧಿ ವಿಭಾಗ ನಾಲ್ಕು ಕೋಟಿ ವೆಚ್ಚದ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ. ಈ ಕಾಮಗಾರಿಯನ್ನು ಯಾವುದೇ ಟೆಂಡರ್ ಕರೆಯದೆ ನೇರ ಗುತ್ತಿಗೆ ಆಧಾರದ ಮೇಲೆ ಆರ್‌.ಚಂದ್ರಮೋಹನ್ ಅನ್ನೋ ಗುತ್ತಿಗೆದಾರನಿಗೆ ನೀಡಲಾಗಿದೆ. ಈ ಗುತ್ತಿಗೆದಾರ ಕೆರೆ ಏರಿಗೆ ಬೇಕಾಗಿರುವ ಗ್ರಾವೆಲ್‌ ಮಣ್ಣು ಮತ್ತು ಮರಳನ್ನು ಬೇರೆ ಕಡೆಯಿಂದ ತರುವ ಬದಲು ವನ್ಯಜೀವಿ ಅರಣ್ಯ ಪ್ರದೇಶದ ಒಳಗೆ ಅಕ್ರಮವಾಗಿ ನುಗ್ಗಿ ಅಲ್ಲಿ ಗಣಿಗಾರಿಕೆ ಮಾಡಿದ್ದಾರೆ. ಇವರ ಅಕ್ರಮ ದಂಧೆಗೆ 5 ಎಕರೆ ಅರಣ್ಯ ಪ್ರದೇಶ ಸಂಪೂರ್ಣ ಹಾಳಾಗಿರುವುದನ್ನು ಕಣ್ಣಾರೆ ಕಾಣಬಹುದು. ಇದು ಇಲ್ಲಿನ ಸ್ಥಳೀಯರಲ್ಲಿ ಭಾರೀ ಆಕ್ರೋಶ ಮೂಡಿಸಿದೆ.

ಇಷ್ಟೊಂದು ವನ್ಯಜೀವಿ ಅರಣ್ಯ ವಲಯದ ನಾಶ ಆದ್ರೂ ಮಂಡ್ಯ ಜಿಲ್ಲೆಯ ಅರಣ್ಯ ಅಧಿಕಾರಿಗಳು ಮಾತ್ರ ಬಾಯಿಗೆ ಬೆರಳು ಹಾಕ್ಕೊಂಡು ಕೂತಿದ್ದಾರೆ.. ಇಲ್ಲೂ ಕಮಿಷನ್‌ ದಂಧೆ ಭರ್ಜರಿಯಾಗಿ ನಡೆದಿದೆ. ಹಾಗಾಗಿಯೇ ಅವರು ನೋಡಿಯೂ ನೋಡದಂತೆ ಅರಣ್ಯ ನಾಶಕ್ಕೆ ಸಂಪೂರ್ಣ ಬೆಂಬಲ ಕೊಡ್ತಿದ್ದಾರೆ ಅನ್ನೋದು ಸ್ಥಳೀಯರ ನೇರ ಆರೋಪ.
ಈ ಭಾರೀ ಅಕ್ರಮದ ಬಗ್ಗೆ ಈಗಾಗಲೇ ಗ್ರಾಮಸ್ಥರು ಅರಣ್ಯ ಇಲಾಖೆ, ಸಣ್ಣ ನೀರಾವರಿ ಇಲಾಖೆ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ದೂರು ನೀಡಿದ್ದಾರೆ. ಆದ್ರೆ ಯಾರೂ ಇನ್ನೂ ಕ್ರಮಕೈಗೊಳ್ಳದಿರುವುದು ನಮ್ಮ ಭ್ರಷ್ಟ ಆಡಳಿತಕ್ಕೆ ಹಿಡಿದ ಕನ್ನಡಿಯಾಗಿದೆ.

Exit mobile version