ಆರ್‌ಎಸ್‌ಎಸ್‌ ಇಲ್ಲದಿದ್ದರೆ ಭಾರತ ಪಾಕಿಸ್ತಾನ ಆಗಿರುತ್ತಿತ್ತು – ಕೆ.ಎಸ್ ಈಶ್ವರಪ್ಪ

ಶಿವಮೊಗ್ಗ ಅ 9 : ರಾಷ್ಟ್ರ ಭಕ್ತರನ್ನು ನಿರ್ಮಾಣ ಮಾಡುತ್ತಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಭಾರತ ದೇಶದಲ್ಲಿ ಇರದೇ ಹೋಗಿದ್ದರೆ, ನಮ್ಮ ದೇಶವು ಪಾಕಿಸ್ತಾನದಂತೆ ಆಗುತ್ತಿತ್ತು ಎಂದು ಸಚಿವ ಕೆ ಎಸ್ ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.

 ಪ್ರಸ್ತುತ ದೇಶದಲ್ಲಿ ಆಡಳಿತ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್, ಕರ್ನಾಟಕದ ರಾಜ್ಯಪಾಲ ತಾವರಚಂದ್ ಗೆಹ್ಲೋಟ್, ಇನ್ನೂ ಅನೇಕ ಹಿರಿಯರು ದೇಶಕ್ಕೆ ಕೊಡುಗೆ ನೀಡಿದ ಮಹಾನ್ ವ್ಯಕ್ತಿಗಳು ಆರ್ ಎಸ್ ಎಸ್ ನಿಂದ ಬಂದವರು, ರಾಷ್ಟ್ರೀಯತೆಯ ವಿಚಾರವುಳ್ಳವರು   ಎಂದು ಹೇಳಿದರು.

ಇಡೀ ಹಿಂದು ಸಮುದಾಯ ನರೇಂದ್ರ ಮೋದಿ ಅವರ ಜೊತೆಗಿದೆ. ದೇಶಭಕ್ತ ಮುಸ್ಲಿಮರು ಬಿಜೆಪಿ ಜೊತೆಗೆ ಬರುತ್ತಿದ್ದಾರೆ ಎಂಬುದನ್ನು ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಹಿಂದುಗಳ ಓಟಂತೂ ನಮಗೆ ಸಿಗುವುದಿಲ್ಲ  ಮುಸ್ಲಿಮರನ್ನು ಸಂತೃಪ್ತಗೊಳಿಸಬೇಕು ಎಂದು ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಆಗಾಗ ಮುಸ್ಲಿಂ ಹಾಗೂ ಕ್ರಿಶ್ಚಿಯನ್ನರ ಪರವಾಗಿ ಮಾತನಾಡುತ್ತಾರೆ ಎಂದು ಕುಮಾರಸ್ವಾಮಿ ಅವರನ್ನು ಟೀಕಿಸಿದರು. ಎಲ್ಲಾ ಕ್ಷೇತ್ರಗಳಲ್ಲೂ ಆರ್ ಎಸ್ ಎಸ್ ತನ್ನ ಛಾಪನ್ನು ಮೂಡಿಸಿದೆ. ದೇಶದ ಆಡಳಿತವನ್ನು ಸಂಘ ನಡೆಸುತ್ತಿಲ್ಲ ಬದಲಾಗಿ ಮಾರ್ಗದರ್ಶನ ನೀಡುತ್ತಿದೆ. ಆರ್ ಎಸ್ ಎಸ್ ಆಡಳಿತ ನಡೆಸುತ್ತಿದೆ ಎಂಬ ವಿಪಕ್ಷಗಳ ಹೇಳಿಕೆ ಭ್ರಮೆಯಾಗಿದೆ ಎಂದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕುರಿತಾಗಿ ಕೆಟ್ಟ ರೀತಿಯ ಹೇಳಿಕೆ ನೀಡಿರುವ ಕುಮಾರಸ್ವಾಮಿ ಅವರು ಈ ಕೂಡಲೇ ಕ್ಷಮೆ ಯಾಚಿಸಬೇಕು ಎಂದು  ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ಈ ಸಂದರ್ಭದಲ್ಲಿ ಆಗ್ರಹಿಸಿದರು.

Exit mobile version