ಕಾಳರಾತ್ರಿಯ ವಿಶೇಷ ಆರಾಧನೆ ಹೇಗಿದ್ರೆ ಫಲ ಸಿಗುತ್ತೆ?

ಶರನ್ನವರಾತ್ರಿ ಎಂದರೆ ಒಂಭತ್ತು ದಿನಗಳ ಕಾಲ ಸಡಗರ ಸಂಭ್ರಮದಿಂದ ಆಚರಿಸುವ ಹಬ್ಬ. ಒಂಭತ್ತು ದಿನಗಳ ಕಾಲ ದೇವಿಯ ಒಂಭತ್ತು ರೂಪಗಳ್ನು ವಿಶೇಷವಾಗಿ ಪೂಜಿಸಲಾಗುವುದು. ನವರಾತ್ರಿಯ ಏಳನೇ ದಿನವಾದ ಇಂದು ಆಶ್ವಯುಜ ಚಂದ್ರಮಾನ ತಿಂಗಳ ಅಶ್ವಯುಜ ಮಾಸದ ಶುಕ್ಲಪಕ್ಷದ ಸಪ್ತಮಿ. ಇಂದು ವಿಶೇಷವಾಗಿ ತಾಯಿ ಕಾಳರಾತ್ರಿಯನ್ನು ಪೂಜಿಸಲಾಗುತ್ತದೆ. ಈ ದೇವಿಯು ಉಗ್ರ ಸ್ವರೂಪವಾಗಿದೆ ಹಾಗೂ ತುಂಬಾ ವಿಚಿತ್ರವಾಗಿದೆ.

ಈ ರೂಪದಲ್ಲಿ ತಾಯಿಯು ತುಂಬಾ ರೌದ್ರಾವತಾರದಿಂದ ಕಾಣಿಸಿಕೊಳ್ಳುತ್ತಾಳೆ. ಹೆಸರೇ ಹೇಳುವಂತೆ ಇದು ತಾಯಿಯ ಕಗ್ಗತ್ತಲು ಮತ್ತು ಸಮಯದ ಸ್ವರೂಪವಾಗಿದೆ. ಕಾಲರಾತ್ರಿಯ ವಾಹನ ಕತ್ತೆಯಾಗಿದೆ. ಕಾಳರಾತ್ರಿ ದೇವಿಗೆ ನಾಲ್ಕು ಕೈಗಳಿವೆ. ಇದರಲ್ಲಿ ಎರಡಲ್ಲಿ ಒಂದರಲ್ಲಿ ಬೆಂಕಿ, ಮತ್ತೊಂದರಲ್ಲಿ ಖಡ್ಗವಿದೆ. ಇನ್ನೆರಡು ಕೈಗಗಳು ವರ ಅಥವಾ ಅಭಯ ನೀಡುವ ಮತ್ತು ರಕ್ಷಿಸುವ ಹಾಗೆ ಇದೆ.

ಕಾಳರಾತ್ರಿಯ ಕಥೆ:

ತಾಯಿ ದುರ್ಗೆಯು ಕಾಳರಾತ್ರಿಯಾಗಿ ರೌದ್ರಾವತಾರ ಮತ್ತು ತುಂಬಾ ಉಗ್ರ ರೂಪ ಧಾರಣೆ ಮಾಡಿ, ತನ್ನ ಬಂಗಾರದ ಮೈಬಣ್ಣದ ಚರ್ಮವನ್ನು ಕಿತ್ತು ರಾಕ್ಷಸರ ವಿರುದ್ಧ ಹೋರಾಡಲು ಹೋಗುವಳು. ಕಾಳರಾತ್ರಿಯು ಕಪ್ಪು ಹಾಗೂ ವಿಚಿತ್ರವಾಗಿ ಕಾಣಿಸಿಕೊಳ್ಳುತ್ತಾಳೆ. ಆಕೆ ಎಲ್ಲಾ ರೀತಿಯ ದುಷ್ಟಶಕ್ತಿ, ದುಷ್ಟತೆ ಮತ್ತು ನಕಾರಾತ್ಮಕ ಶಕ್ತಿ ಹಾಗೂ ಭೀತಿ ದೂರ ಮಾಡುವಳು ಎಂಬ ನಂಬಿಕೆ ಭಕ್ತರದು. ಆಕೆ ತನ್ನ ಭಕ್ತರಿಗೆ ವರ ನೀಡಿ ರಕ್ಷಿಸುವ ಮಾತೆಯಾಗಿ ಕಾಣಿಸುಕೊಳ್ಳುತ್ತಾಳೆ. ಆಕೆ ತನ್ನ ಭಕ್ತರಿಗೆ ಹೆಚ್ಚಿನ ಸಂತೋಷ ಹಾಗೂ ತೃಪ್ತಿ ಕರುಣಿಸುವಳು. ಇದರಿಂದಾಗಿ ಆಕೆಯನ್ನು ಶುಭಾಂಕರಿ ಅಥವಾ ಪವಿತ್ರಳೆಂದು ಪರಿಗಣಿಸಲಾಗಿದೆ.

ಕಾಳರಾತ್ರಿಯ ಪೂಜಾ ಪ್ರಾಮುಖ್ಯತೆ:

ತಾಯಿ ಕಾಳರಾತ್ರಿಯು ಶನಿ ಗ್ರಹದ ಅಧಿಪತಿ. ಆಕೆ ಜನರು ಮಾಡಿರುವ ಕೆಡುಕು ಹಾಗೂ ಒಳಿತನ್ನು ನೋಡಿಕೊಂಡು ವರ ನೀಡುವರು. ಆಕೆ ದುಷ್ಟತೆಯನ್ನು ಶಿಕ್ಷಿಸಿ, ಒಳ್ಳೆಯದನ್ನು ರಕ್ಷಿಸುವ ಮಾತೆಯಾಗಿ ಕಾಣಿಸಿಕೊಳ್ಳುತ್ತಾಳೆ. ತಾಯಿ ಕಾಳರಾತ್ರಿಯನ್ನು ಪೂಜಿಸುವುದರಿಂದಾಗಿ ಶನಿಯಿಂದ ಆಗುವ ತೊಂದರೆ ಹಾಗೂ ಸಾಡೇಸಾತಿ ಪ್ರಭಾವ ತಗ್ಗಿಸಬಹುದು ಎಂದು ಪುರಾಣಗಳಲ್ಲಿ ಹೇಳಲಾಗುತ್ತದೆ.

ಮಲ್ಲಿಗೆ ಹೂ ತಾಯಿ ಕಾಳರಾತ್ರಿಗೆ ಅರ್ಪಿಸಲು ಅತ್ಯುತ್ತಮವಾಗಿರುವ ಹೂ ಎಂದು ಪರಿಗಣಿಸಲಾಗಿದೆ. ಶ್ರದ್ಧಾಭಕ್ತಿಯಿಂದ ನವರಾತ್ರಿಯ ಏಳನೇ ದಿನದಿಂದ ತಾಯಿ ಕಾಳರಾತ್ರಿಯ ಪೂಜೆ ಮಾಡಬೇಕು. ಇಂದು ದೇವಿಗೆ ಗುಡಾನ್ನದಂತಹ ಬೆಲ್ಲದಿಂದ ತಯಾರಿಸಲಾದ ಸಿಹಿ ತಿಂಡಿಗಳನ್ನು ಅರ್ಪಿಸಬೇಕು. ಗಣಪತಿ ಪೂಜೆಯ ಬಳಿಕ ಷೋಡಶೋಪಚಾರ ಪೂಜೆಯನ್ನು ತಾಯಿ ಕಾಳರಾತ್ರಿಗೆ ಅರ್ಪಿಸಬೇಕು. ಆರತಿಯೊಂದಿಗೆ ಪೂಜೆ ಕೊನೆಗೊಳಿಸಬೇಕು ಎನ್ನುವುದು ವಾಡಿಕೆ.

ಇಂದಿನ ಆರಾಧನೆಯ ಮಹತ್ವ:

ಕಾಳರಾತ್ರಿ ತಾಯಿಯನ್ನು ಏಳನೇ ದಿನದಂದು ಪೂಜಿಸುವುದರಿಂದ ಭಕ್ತರಲ್ಲಿರುವಂತಹ ಎಲ್ಲಾ ರೀತಿಯ ಭಯವು ನಿವಾರಣೆಯಾಗುವುದು. ಭಕ್ತರ ಅಭಿವೃದ್ಧಿಗೆ ಇರುವಂತಹ ಎಲ್ಲಾ ಅಡೆತಡೆಗಳು ನಿವಾರಣೆಯಾಗುವುದು. ಗುಣವಾಗದ ರೋಗವು ಗುಣವಾಗುವುದು, ಮಾನಸಿಕ ಶಾಂತಿ ಹಾಗೂ ಸುಖ ನೀಡುವಳು ಎಂಬುದಾಗಿ ನಂಬಲಾಗುತ್ತದೆ. ಆಕೆ ತನ್ನ ಭಕ್ತರಿಗೆ ಎಲ್ಲಾ ರೀತಿಯ ಒಳ್ಳೆಯತನ ಮತ್ತು ಸಮೃದ್ಧಿ ಕರುಣಿಸುವಳು. ಇದೇ ವೇಳೆ ಎಲ್ಲಾ ರೀತಿಯ ಪಾಪ ನಿವಾರಣೆ ಮಾಡಿ ಸರಿಯಾದ ಮಾರ್ಗದಲ್ಲಿ ಸಾಗಲು ನೆರವಾಗುತ್ತಾಳೆ. ನವರಾತ್ರಿಯ ಏಳನೇ ದಿನವನ್ನು ಮಹಾಸಪ್ತಮಿ ಎಂದು ಕರೆಯಲಾಗುತ್ತದೆ.

ಇಂದಿನ ದಿನವನ್ನು ನಕರಾತ್ಮಕ ಶಕ್ತಿಗಳ ಮರ್ದನ ದಿನವನ್ನಾಗಿ ಆಚರಿಸಲಾಗುತ್ತದೆ. ಆದ್ದರಿಂದ ವಿಶ್ವದೆಲ್ಲೆಡೆ ಆವರಿಸಿಕೊಂಡಿರುವ ಕೊರೋನಾದ ಮರ್ದನವಾಗಲಿ ಹಾಗೂ ನಕಾರಾತ್ಮಕ ಶಕ್ತಿಗಳು ಜಗತ್ತಿನಿಂದ ದೂರಗೊಳ್ಳಲಿ ಎನ್ನುವುದು ಎಲ್ಲರ ಆಶಯವಾಗಿದೆ. ದುಷ್ಟ ಶಕ್ತಿಗಳನ್ನು ಆ ದೇವಿ ಕಾಲರಾತ್ರಿಯು ದೂರಮಾಡುತ್ತಾಳೆ  ಎನ್ನುವುದು ಭಕ್ತರ ಅಚಲ ನಂಬಿಕೆ.

Exit mobile version