67ನೇ ವಯಸ್ಸಿನಲ್ಲೂ ಚಿರ ಯುವಕನಂತೆ ನಟಿಸಿದ್ದಾರೆ ‘ವಿಕ್ರಮ್’ ಎಂದ ಅಭಿಮಾನಿಗಳು!

Actor

ಸಕಲಕಲಾವಲ್ಲಭ ಕಮಲ್ ಹಾಸನ್(Kamal Hassan) ನಟನೆಯ ಬಹುನಿರೀಕ್ಷಿತ ಸಿನಿಮಾ ‘ವಿಕ್ರಮ್’(Vikram) ಇದೇ ಜೂನ್ 3 ರಂದು ದೇಶವಿದೇಶಗಳಲ್ಲಿ ತೆರೆಗೆ ಅಪ್ಪಳಿಸಿತು.

ನಟ ಕಮಲ್ ಹಾಸನ್ ‘ವಿಶ್ವರೂಪಂ’(Vishwaroopam) ಸಿನಿಮಾದ ನಂತರ ಅಭಿಮಾನಿಗಳನ್ನು ರಂಜಿಸುವಂತಹ ಸಿನಿಮಾ ಮಾಡುವಲ್ಲಿ ಅಷ್ಟೇನೂ ಯಶಸ್ವಿಯಾಗಿರಲಿಲ್ಲ. ಸ್ವಲ್ಪ ಕಾಲ ಚಿತ್ರರಂಗದಿಂದಲೇ ಅವರು ಅಂತರ ಕಾಯ್ದುಕೊಂಡಿದ್ದರು. ಆದರೆ ‘ಕೈದಿ’, ‘ಮಾನಗರಂ’, ‘ಮಾಸ್ಟರ್’ ಸಿನಿಮಾಗಳ ನಿರ್ದೇಶಕ ಲೋಕೇಶ್‌ ಕನಗರಾಜ್‌ ಜೊತೆಗೆ ಕಮಲ್ ಹಾಸನ್ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಯಾವಾಗ ಹರಿದಾಡಲು ಆರಂಭಿಸಿತೋ, ಅಂದಿನಿಂದಲೇ ಕಮಲ್ ಹಾಸನ್ ಅಭಿಮಾನಿಗಳು ಬಹಳ ಕುತೂಹಲದಿಂದ ಈ ಸಿನಿಮಾಗಾಗಿ ಕಾಯುತ್ತಿದ್ದರು.

ಇದೀಗ ಕಮಲ್ ಮತ್ತು ಲೋಕೇಶ್ ಕಾಂಬಿನೇಷನ್‌ನ ‘ವಿಕ್ರಮ್‌’ ಬಿಡುಗಡೆಯಾಗಿ, ಅದ್ಬುತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರವನ್ನು ಕರ್ನಾಟಕದಲ್ಲಿ ಬ್ಯಾನ್ ಮಾಡುವಂತೆ ಕೆಲವರು ಕರೆ ನೀಡಿದ್ದರು. ಆದರೆ ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ ನೋಡಿದರೆ, ಈ ಕರೆ ಚಿತ್ರದ ಮೇಲೆ ಕಿಂಚಿತ್ತೂ ಪರಿಣಾಮ ಬೀರಿಲ್ಲ ಎನ್ನುವುದು ಸ್ಪಷ್ಟವಾಗುತ್ತಿದೆ. ‘ವಿಕ್ರಮ್’ ಒಂದು ರಿವೆಂಜ್ ಸ್ಟೋರಿ. ಆರಂಭದಿಂದಲೇ ಟ್ವಿಸ್ಟ್ ಮೇಲೆ ಟ್ವಿಸ್ಟ್ ನೀಡುತ್ತ ಸಾಗುವ ನಿರ್ದೇಶಕ ಲೋಕೇಶ್, ರಿವೆಂಜ್ ಸ್ಟೋರಿಯೊಂದನ್ನ ಹೆಣೆಯುತ್ತಾ ಸಾಗಿದ್ದಾರೆ. ಒಂದರ ಬೆನ್ನಲೇ ಮತ್ತೊಂದು ಸರಣಿ ಕೊಲೆಗಳು ನಡೆಯುತ್ತಲೇ ಇರುತ್ತವೆ.

ಅದನ್ನು ಮಾಡುತ್ತಿರುವವರು ಯಾರು ಅನ್ನೋದೇ ಚಿತ್ರದ ಮೊದಲರ್ಧದಲ್ಲಿರುವ ಸಸ್ಪೆನ್ಸ್. ಹೀಗೆ ಸರಣಿ ಕೊಲೆಗಳನ್ನ ಮಾಡುತ್ತಿರುವ ಕೊಲೆಗಾರನನ್ನು ಕಂಡುಹಿಡಿಯಲು ಬರುವ ಸ್ಪೆಷಲ್‌ ಆಫೀಸರ್‌ ಅಮರ್ (ಫಹಾದ್ ಫಾಸಿಲ್) ಯಾರಿಗೂ ಕೇರ್ ಮಾಡುವ ವ್ಯಕ್ತಿತ್ವದವನಲ್ಲ. ಇದರ ಮಧ್ಯೆ ತೆರೆಮೇಲೆ ರಕ್ತ ಹರಿಸುವುದರಲ್ಲಿ ಫೇಮಸ್ ಆಗಿರುವ ಖಳ ಸಂತಾನಂ (ವಿಜಯ್ ಸೇತುಪತಿ) ಪಾತ್ರ ಕೂಡ ಎಂಟ್ರಿ ಪಡೆದುಕೊಳ್ಳುತ್ತದೆ. ಹಾಗಾದರೆ, ಚಿತ್ರದಲ್ಲಿ ಕಮಲ್ ನಿಭಾಯಿಸಿರುವ ವಿಕ್ರಮ್ ಪಾತ್ರ ಹೇಗಿದೆ? ಅಮರ್, ಸಂತಾನಂ, ವಿಕ್ರಮ್‌ಗೆ ಇರುವ ಸಂಬಂಧ, ಇವೆಲ್ಲವನ್ನೂ ತೆರೆಮೇಲೆಯೇ ನೋಡಿ ಕಣ್ತುಂಬಿಕೊಳ್ಳಬೇಕು.


ಗಿರೀಶ್ ಗಂಗಾಧರನ್‌ ಕ್ಯಾಮೆರಾ ವರ್ಕ್ ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್. ಹಾಡುಗಳಿಗಿಂತಲೂ ಹಿನ್ನೆಲೆ ಸಂಗೀತದ ಮೂಲಕ ಇಡೀ ಸಿನಿಮಾವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವಲ್ಲಿ ಸಂಗೀತ ನಿರ್ದೇಶಕ ಅನಿರುದ್ಧ ಯಶಸ್ವಿಯಾಗಿದ್ದಾರೆ. ಸಂಭಾಷಣೆಯೂ ಕೂಡ ಪ್ರೇಕ್ಷಕರ ಮನಮುಟ್ಟುವಂತಿದೆ. 67ನೇ ವಯಸ್ಸಿನಲ್ಲಿ ಕೂಡ ಕಮಲ್ ಹಾಸನ್ ಅವರ ಚಾರ್ಮ್‌ ಸ್ವಲ್ಪವೂ ಕಡಿಮೆಯಾಗಿಲ್ಲ. ಭರ್ಜರಿ ಆಕ್ಷನ್‌ ಸೀನ್‌ಗಳಲ್ಲಿ ಸಖತ್ ಆಗಿಯೇ ಮಿಂಚಿದ್ದಾರೆ. ನವ ಯುವಕನಂತೆ ಹಾಡಿ ಕುಣಿದಿದ್ದಾರೆ. ಭಾವುಕ ಸ್ವಭಾವದ ಅಪ್ಪ ಹಾಗೂ ತಾತನ ಪಾತ್ರದಲ್ಲಿ ತಮ್ಮ ಎಮೋಷನಲ್ ರೂಪದ ಮೂಲಕ ಪ್ರೇಕ್ಷಕರ ಕಣ್ಣು ಒದ್ದೆಯಾಗುವಂತೆ ಮಾಡಿದ್ದಾರೆ.

ಇದು ಕಮಲ್ ಹಾಸನ್ ಅವರ ಪಾಲಿಗೆ ನಿಜಕ್ಕೂ ದೊಡ್ಡ ಕಮ್‌ಬ್ಯಾಕ್ ಸಿನಿಮಾ ಎಂದೇ ಹೇಳಬಹುದು. ಕೊನೆಯ ಸೀನ್‌ನಲ್ಲಿ ಬಂದು ಕಥೆಯನ್ನು ಮತ್ತಷ್ಟು ರಂಗೇರಿಸುವ ನಟ ಸೂರ್ಯ, ಪ್ರೇಕ್ಷಕರನ್ನು ರೋಮಾಂಚನಗೊಳಿಸುತ್ತಾರೆ. ಕಮಲ್ ಹಾಸನ್ ಅಭಿಮಾನಿಗಳು ವಿಕ್ರಮ್ ಸಿನಿಮಾವನ್ನು ಅತ್ಯುತ್ತಮ ಆಕ್ಷನ್ ಸಿನಿಮಾ ಎಂದು ಕರೆಯುತ್ತಿದ್ದಾರೆ. ನಟ ಸೂರ್ಯ ಅವರನ್ನು ತೆರೆಯ ಮೇಲೆ ನೋಡಿ ಅವರ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

Exit mobile version