“ಕನ್ನಡ ಮಿತ್ರರು”(Kannada Mithraru) ಎನ್ನುವುದು ಯು.ಎ.ಇ ದುಬೈನಲ್ಲಿ(UAE Dubai) ಸ್ಥಾಪಿತವಾಗಿರುವ ಒಂದು ಕನ್ನಡ ಪರ ಸಂಘಟನೆಯಾಗಿದ್ದು, ಕರ್ನಾಟಕದ ಭಾಷೆ, ಕಲೆ ಮತ್ತು ಸಂಸ್ಕೃತಿಯನ್ನು ವಿದೇಶೀ ನೆಲದಲ್ಲಿ ಉತ್ತೇಜಿಸಿ ಸಂರಕ್ಷಿಸುತ್ತಾ ಬಂದಿದ್ದು, ಪ್ರಮುಖವಾಗಿ ಕನ್ನಡ ಸಾಕ್ಷರತಾ ಅಂದೋಲನದ ರುವಾರಿಯಾಗಿ ಸೇವೆ ಸಲ್ಲಿಸುತ್ತಿದೆ. ಕನ್ನಡ ಮಿತ್ರರು ಯು.ಎ.ಇ ನಲ್ಲಿ 2014 ರಿಂದ ನಡೆಸುತ್ತಾ ಬಂದಿರುವ ಕನ್ನಡ ಪಾಠಶಾಲೆ, ಕನ್ನಡ ತರಗತಿಗಳನ್ನು ಕ್ರಮಬದ್ಧವಾಗಿ ನಡೆಸುತ್ತಿರುವ ವಿಶ್ವದಲ್ಲಿಯೇ ಅತಿದೊಡ್ಡ ವಿದೇಶಿ ಕನ್ನಡ ಕಲಿಕಾ ಕೇಂದ್ರ ಎಂದು ಪ್ರಸಿದ್ದಿಯಾಗಿದೆ.
ಕನ್ನಡ ಪಾಠಶಾಲೆ ದುಬೈ, ಯು.ಎ.ಇ ಯಲ್ಲಿ ನೆಲೆಸಿರುವ ಎಲ್ಲಾ ಕನ್ನಡಿಗರ ಮಕ್ಕಳಿಗೆ ಉಚಿತವಾಗಿ ಕನ್ನಡ ಕಲಿಸುತಿದ್ದು, ಒಂದು ಸ್ವಯಂ ಸೇವೆಯ ಮಾಧರಿಯನ್ನು ಅನುಸರಿಸಲಾಗುತ್ತಿದೆ. ಪಾಠ ಕಲಿಸಲು ಬೇಕಾಗುವ ಸ್ಥಳಾವಕಾಶವನ್ನು ಮೊಟ್ಟಮೊದಲಿಗೆ ಸುತ್ತೂರು ಸಂಸ್ಥಾನ ಮಠದ ಪೂಜ್ಯ ಗುರುಗಳಾದ ಶ್ರೀ ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ಆಶೀರ್ವಾದ ಪಡೆದು, ದುಬೈನ ಜೆ. ಎಸ್. ಎಸ್. ಶಾಲೆಯಲ್ಲಿ ಆರಂಭಿಸಲಾಯಿತು. ಪ್ರಸ್ತುತವಾಗಿ ಶ್ರೀ ಓಂಪ್ರಕಾಶ ಅವರ ಅಸಾಪ್ ಟ್ಯುಟರ್ಸ್ ಸಹಕಾರದೊಂದಿಗೆ ನಡೆಸಲಾಗುತ್ತಿದೆ.
ಹತ್ತು ಜನ ಶಿಕ್ಷಕಿಯರು ಸ್ವಯಂ ಪ್ರೇರಣೆಯಿಂದ ವೇತನ ರಹಿತ ಸೇವೆಸಲ್ಲಿಸಿ ಅನಿವಾಸಿ ಕನ್ನಡಿಗರ ಸಾಕ್ಷರತಾ ಆಂದೋಲನದಲ್ಲಿ ಭಾಗಿಯಾಗಿದ್ದಾರೆ. ಕನ್ನಡ ಕಲಿಕೆ ಕುರಿತು ಕರ್ನಾಟಕದಲ್ಲೇ ಚರ್ಚೆಯಾಗುತ್ತಿರುವ ಈ ಸಂದರ್ಭದಲ್ಲಿ, “ಮಾತೃಭಾಷಾ ಸಾಕ್ಷರತೆ(Litracy) ಪ್ರತಿಯೊಬ್ಬ ಕನ್ನಡ ಕಂದನ ಹಕ್ಕು” ಎಂಬ ಘೋಷಣೆಯೊಂದಿಗೆ ಉಚಿತವಾಗಿ ದುಬೈನಲ್ಲಿ ಕನ್ನಡ ಕಲಿಸುತ್ತಿರುವ ಕನ್ನಡ ಮಿತ್ರರು ಸಂಘಟನೆ ಹಾಗೂ ಈ ಪಾಠಶಾಲೆಯಲ್ಲಿ ಉಚಿತವಾಗಿ ಕನ್ನಡ ಕಲಿಸುತ್ತಿರುವ ಎಲ್ಲ ಶಿಕ್ಷಕಿಯರ ತಂಡ ಪ್ರತಿಯೊಬ್ಬರಿಗೂ ಮಾದರಿಯಾಗಿದೆ.
- ಪವಿತ್ರ