ಶಾಲೆಗೆ ಹೋಗದಿರುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ದೇಶದಲ್ಲೇ ಕರ್ನಾಟಕ ನಂ.7ನೇ ಸ್ಥಾನದಲ್ಲಿದೆ.

Bengaluru: ರಾಜ್ಯದಲ್ಲಿ ಶಾಲೆಗೆ ಹೋಗದೆ ಇರುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ದೇಶದಲ್ಲಿ ಕರ್ನಾಟಕ (Karnataka) 7 ನೇ ಸ್ಥಾನದಲ್ಲಿದ್ದು, ಕಳೆದ 5 ವರ್ಷದಲ್ಲಿ 53,484 ವಿದ್ಯಾರ್ಥಿಗಳು ವಿವಿಧ ಕಾರಣಗಳಿಂದಾಗಿ ಸ್ಕೂಲ್ ಗೆ ಗುಡ್ ಬೈ ಹೇಳಿದ್ದಾರೆ.

ಯಾವ ವರ್ಷದಲ್ಲಿ ಎಷ್ಟು ಮಕ್ಕಳು ಹೊರಗುಳಿದಿದ್ದಾರೆ?
2017-18ರಲ್ಲಿ 9,362 ಮಕ್ಕಳು,
2018-19ರಲ್ಲಿ 6,806,
2019-20ರಲ್ಲಿ 17,052,
2020-21ರಲ್ಲಿ 7,002,
2021-22 ರಲ್ಲಿ 13,262 ರಷ್ಟು ಮಕ್ಕಳು ಶಾಲೆಯಿಂದ ಹೊರಗುಳಿದಿದ್ದು, ಮಕ್ಕಳು ಶಾಲೆಗೆ ಹೋಗದಿರಲು ಹಲವು ಕಾರಣಗಳಿವೆ. ಕೋವಿಡ್ (Covid) ಪರಿಣಾಮವೂ ಈ ಸಮಸ್ಯೆಗೆ ಒಂದು ಕಾರಣವಾಗಿದ್ದು, ತೀವ್ರ ಬಡತನ ಹಾಗೂ ಮಕ್ಕಳ ಶಿಕ್ಷಣದ ಕುರಿತಾಗಿ ಸೂಕ್ತ ನಿಗಾ ಇಲ್ಲದೆ ಇರುವುದು ಈ ಸಮಸ್ಯೆಗೆ ಪ್ರಮುಖ ಕಾರಣವಾಗುತ್ತಿದೆ.

ಮಳೆ ಕೊರತೆಯಿಂದಾಗಿ ಈ ವರ್ಷವಂತೂ ರಾಜ್ಯದ ಬಹುಭಾಗ ಬರ ಪರಿಸ್ಥಿತಿ ಇದ್ದು, ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಹೆಚ್ಚು ಬರ ಪರಿಸ್ಥಿತಿ ಇರುವುದರಿಂದ ಇಲ್ಲಿನ ನಿವಾಸಿಗಳು ಕೆಲಸ ಹುಡುಕಿಕೊಂಡು ದೂರದೂರುಗಳಿಗೆ ಹೋಗುತ್ತಾರೆ. ಇನ್ನು ಬೆಂಗಳೂರು, ಮೈಸೂರು (Mysore), ಮಂಗಳೂರು, ಶಿವಮೊಗ್ಗ, ಗೋವಾ, ಕಾರವಾರ ಮೊದಲಾದ ಊರುಗಳಿಗೆ ತೆರಳುವಾಗ ಬಹಳಷ್ಟು ಮಂದಿ ತಮ್ಮ ಜೊತೆಗೆ ಮಕ್ಕಳನ್ನೂ ಕರೆದೊಯ್ಯುತ್ತಾರೆ.

ಅಷ್ಟೇ ಅಲ್ಲದೆ ಈ ರೀತಿ ಹೋಗುವಾಗ ಹೋದ ಸ್ಥಳದಲ್ಲಿರುವ ಸರ್ಕಾರಿ ಶಾಲೆಗಳಿಗೆ ವಿದ್ಯಾಭ್ಯಾಸ ನಡೆಸಲು ಅನುಕೂಲವಿದ್ದರೂ ದಾಖಲಾಗುತ್ತಾರೆ ಎಂಬುದಕ್ಕೆ ಯಾವುದೇ ಖಾತ್ರಿಯಿರುವುದಿಲ್ಲ. ಹೀಗೆ ಶಿಕ್ಷಣ ವಂಚಿತ ಮಕ್ಕಳನ್ನು ಪ್ತತೆ ಹಚ್ಚುವುದು ಕೂಡ ಶಿಕ್ಷಣ ಇಲಾಖೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ನಿಯಂತ್ರಣಕ್ಕೆ ಕ್ರಮ ಏನು?
ಉಚ್ಚ ನ್ಯಾಯಾಲಯದ ಆದೇಶದಂತೆ ಕರ್ನಾಟಕ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆಯ ಸೆಕ್ಷನ್ 4ರ ಪ್ರಕಾರ, 6 ರಿಂದ 14 ವರ್ಷದ ಯಾವ ಮಗುವೂ ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಲು ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ರಾಜ್ಯಮಟ್ಟದ ಉನ್ನತಾಧಿಕಾರಿಗಳ ಸಮಿತಿಯನ್ನು ರಚಿಸಲಾಗಿದೆ.

ಆರ್.ಟಿ.ಇ (RTI) ನಿಯಮ ‘6ಡಿ’ ರಂತೆ ಹಾಜರಾತಿ ಅಧಿಕಾರಿಗಳು ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ಪೋಷಕರಿಗೆ ನೋಟೀಸ್ (Notice) ನೀಡಿ, ಶಾಲೆಗೆ ಕರೆತರಲು ಒಂದು ತಿಂಗಳ ಅವಧಿ ಹಾಗೂ ಶಾಲೆಗೆ ಹಾಜರಾಗದಿದ್ದಲ್ಲಿ ನಿಯಮ 6(ಡಿ)(2) ರಡಿಯಲ್ಲಿ ಪೋಷಕರಿಗೆ ಮಗುವಿನೊಂದಿಗೆ ಸಂಬಂಧಿಸಿದ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರಾಗುವಂತೆ ಆದೇಶ ಹೊರಡಿಸುತ್ತಾರೆ.

ಭವ್ಯಶ್ರೀ ಆರ್ ಜೆ

Exit mobile version