ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಸೆಮಿಫೈನಲ್‌ಗೆ ಕರ್ನಾಟಕ

ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಕರ್ನಾಟಕ ತಂಡ ಬಂಗಾಳದ ವಿರುದ್ಧ ರೋಚಕವಾಗಿ ಗೆಲುವು ಸಾಧಿಸಿದೆ. ಸೂಪರ್ ಓವರ್‌ನಲ್ಲಿ ಮಿಂಚಿದ ಕರ್ನಾಟಕದ ಬೌಲರ್ ಕಾರಿಯಪ್ಪ ಸುಲಭ ಗುರಿ ಪಡೆಯಲು ಕಾರಣವಾದರು. ನಂತರ ಕರ್ನಾಟಕ ಈ ಗುರಿಯನ್ನು ಸುಲಭವಾಗಿ ತಲುಪುವಲ್ಲಿ ಯಶಸ್ವಿಯಾಗಿದ್ದು ಸೆಮಿಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ.

ಬಂಗಾಳ ತಂಡ ಈ ಪಂದ್ಯದಲ್ಲಿ ಉತ್ತಮವಾಗಿ ರನ್ ಗಳಿಸುತ್ತಾ ಸಾಗಿದರೂ ಕೂಡ ಕರ್ನಾಟಕ ವಿಕೆಟ್ ಪಡೆಯುತ್ತಾ ಸಾಗಿತ್ತು. ಪಂದ್ಯದುದ್ದಕ್ಕೂ ಒಮ್ಮೆ ಕರ್ನಾಟಕ ಮೇಲುಗೈ ಸಾಧಿಸಿದರೆ ಮತ್ತೊಮ್ಮೆ ಬಂಗಾಳ ಮೇಲುಗೈ ಸಾಧಿಸುತ್ತಾ ಸಾಗಿತ್ತು. ಕಡೆಗೆ ಅಂತಿಮ ಓವರ್‌ನಲ್ಲಿ 20 ರನ್‌ಗಳಿಸುವ ಸವಾಲು ಪಡೆಯಿತು ಬಂಗಾಳ. ಈ ಕಠಿಣ ಸವಾಲಿನಲ್ಲಿಯೂ ಬಹುತೇಕ ಯಶಸ್ಸು ಸಾಧಿಸಿದ ಬಂಗಾಳ 19.5 ಓವರ್‌ನಲ್ಲಿ ಪಂದ್ಯವನ್ನು ಟೈ ಮಾಡಿಕೊಂಡಿತ್ತು. ಅಂತಿಮ ಒಂದು ಎಸೆತದಲ್ಲಿ ಒಂದು ರನ್‌ಗಳಿಸುವ ಸವಾಲು ಬಂಗಾಳದ ಮುಂದಿತ್ತು. ಆದರೆ ಈ ಸಂದರ್ಭದಲ್ಲಿ ಮನೀಶ್ ಪಾಂಡೆಯ ಮಿಂಚಿನ ಫೀಲ್ಡಿಂಗ್‌ನಿಂದಾಗಿ ಕರ್ನಾಟಕ ತಂಡ ಪಂದ್ಯವನ್ನು ಟೈ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು

ಸೂಪರ್‌ ಓವರ್‌ನಲ್ಲಿ ಗೆದ್ದ ಕರ್ನಾಟಕ :  ಸೂಪರ್ ಓವರ್‌ನಲ್ಲಿ ಕರ್ನಾಟಕಕ್ಕೆ ಗೆಲುವು ಇನ್ನು ಈ ಕ್ವಾರ್ಟರ್‌ಫೈನಲ್ ಪಂದ್ಯ ರೋಚಕ ಟೈ ಫಲಿತಾಂಶವನ್ನು ಕಂಡ ಕಾರಣ ಸೂಪರ್ ಓವರ್‌ನಲ್ಲಿ ಪಲಿತಾಂಶವನ್ನು ಪಡೆಯಲಾಯಿತು. ಈ ಸೂಪರ್ ಓವರ್‌ನಲ್ಲಿ ಬಂಗಾಳ ಮೊದಲಿಗೆ ಬ್ಯಾಟಿಂಗ್ ನಡೆಸಿತು. ಕರ್ನಾಟಕದ ಪರವಾಗಿ ಬೌಲಿಂಗ್ ದಾಳಿಗಿಳಿದ ಕಾರಿಯಪ್ಪ ಅದ್ಭುತ ಪ್ರದರ್ಶನ ನೀಡಿ ಬಂಗಾಳವನ್ನು ಕೇವಲ 5 ರನ್‌ಗಳಿಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು. ಕರ್ನಾಟಕ ಸೆಮಿಫೈನಲ್‌ಗೆ ಪ್ರವೇಶಿಸಲು ಒಂದು ಓವರ್‌ನಲ್ಲಿ 6 ರನ್‌ಗಳಿಸುವ ಸವಾಲು ಪಡೆಯಿತು. ಕರ್ನಾಟಕ ಪರವಾಗಿ ಬ್ಯಾಟಿಂಗ್‌ಗೆ ನಾಯಕ ಮನೀಶ್ ಪಾಂಡೆ ಹಾಗೂ ಕರುಣ್ ನಾಯರ್ ಕಣಕ್ಕಿಳಿದರು. ಮೊದಲ ಎಸೆತದಲ್ಲಿ ಮನೀಶ್ ಪಾಂಡೆ ಎರಡು ರನ್ ಗಳಿಸಿದರು. ಮುಖೇಶ್ ಕುಮಾರ್ ಎಸೆದ ಎರಡನೇ ಎಸೆತವನ್ನು ಮನೀಶ್ ಪಾಂಡೆ ಭರ್ಜರಿಯಾಗಿ ಸಿಕ್ಸರ್‌ಗೆ ಅಟ್ಟಿದರು. ಈ ಮೂಲಕ ಕರ್ನಾಟಕ ಅದ್ಭುತವಾದ ಗೆಲುವು ಸಾಧಿಸಿದೆ. ಈ ಗೆಲುವು ಕರ್ನಾಟಕಕ್ಕೆ ಸೆಮಿಫೈನಲ್‌ನ ಟಿಕೆಟ್ ನೀಡಿದೆ. ಸೆಮಿಫೈನಲ್‌ನಲ್ಲಿ ಕರ್ನಾಟಕ ವಿದರ್ಭ ತಂಡವನ್ನು ಎದುರಿಸಲಿದೆ.

Exit mobile version