ಅಪೌಷ್ಟಿಕತೆ ತಡೆಗೆ ಸರ್ಕಾರದ `ಪೌಷ್ಟಿಕ’ ಹೆಜ್ಜೆ!

karnataka

ಅಪೌಷ್ಟಿಕತೆಯನ್ನ ಹೋಗಲಾಡಿಸಲು ಕರ್ನಾಟಕ ಸರ್ಕಾರ ಮಹತ್ವದ ಹೆಜ್ಜೆಯೊಂದನ್ನ ಇಟ್ಟಿದೆ.

ಏಪ್ರಿಲ್ ೧ ರಿಂದ ಕರ್ನಾಟಕ ರಾಜ್ಯದ 14 ಜಿಲ್ಲೆಗಳಲ್ಲಿ ಪೋಷಕಾಂಶಯುಕ್ತ ಅಕ್ಕಿಯನ್ನು ವಿತರಿಸಲು ಸರ್ಕಾರ ಸಿದ್ಧತೆ ನಡೆಸಿದೆ. ದೀರ್ಘ ಕಾಲದ ರಕ್ತಹೀನತೆ ಮತ್ತು ಅಪೌಷ್ಟಿಕತೆಯನ್ನು ತಡೆಯುವ ಮಹತ್ತರ ಗುರಿಯನ್ನ ಇಟ್ಟುಕೊಂಡು ಈ ಯೋಜನೆಯನ್ನ ಜಾರಿಗೆ ತರಲಾಗಿದೆ.

ಅಪೌಷ್ಟಿಕತೆಯನ್ನು ಹೋಗಲಾಡಿಸಲು ‘ಪೌಷ್ಟಿಕ ಕರ್ನಾಟಕ‘ ಕಾರ್ಯಕ್ರಮದ ಅಡಿಯಲ್ಲಿ ಅಕ್ಕಿಯನ್ನ ವಿತರಿಸಲಿದೆ. ಈ ಬಾರಿಯ ರಾಜ್ಯ ಬಜೆಟ್ ನಲ್ಲಿ ಈ ಯೋಜನೆಯನ್ನು ಘೋಷಿಸಿದ ನಂತರದಲ್ಲಿ ಆರೋಗ್ಯ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಡಿಯಲ್ಲಿ ರಾಜ್ಯದ 58 ಅಕ್ಕಿ ಗಿರಣಿಗಳಿಗೆ ತರಬೇತಿಯನ್ನು ನೀಡಲಾಗುತ್ತಿದೆ. ಆಹಾರ ಸಚಿವಾಲಯದ ಪ್ರಕಾರ, ಭಾರತದಲ್ಲಿ ಮಹಿಳೆಯರು ಮತ್ತು ಮಕ್ಕಳಲ್ಲಿ ಅತಿ ಹೆಚ್ಚು ಅಪೌಷ್ಟಿಕತೆ ಇದೆ. ದೇಶದಲ್ಲಿ ಪ್ರತಿ ಎರಡನೇ ಮಹಿಳೆ ರಕ್ತಹೀನತೆಯಿಂದ ಬಳಲುತ್ತಿದ್ದಾರೆ ಮತ್ತು ಪ್ರತಿ ಮೂರನೇ ಮಗು ಬೆಳವಣಿಗೆಯಲ್ಲಿ ಕುಂಠಿತವಾಗಿದೆ.

ದೀರ್ಘಕಾಲದ ರಕ್ತ ಹೀನತೆಯಿಂದ ಕೂಡ ಬಳಲುತ್ತಿದ್ದಾರೆ. ಹೀಗಿರುವಾಗ ಅಪೌಷ್ಟಿಕತೆಯನ್ನು ತಡೆಯಲು ಆಹಾರದ ಬಲವರ್ಧನೆಯು ಅತ್ಯಂತ ಸೂಕ್ತವಾದ ವಿಧಾನವಾಗಿದೆ. ಅತ್ಯಂತ ದುರ್ಬಲ ಮತ್ತು ಬಡ ವರ್ಗದವರಿಂದ ಹಿಡಿದು ಎಲ್ಲಾ ವರ್ಗದ ಭಾರತೀಯರ ಪ್ರಧಾನ ಆಹಾರದ ಭಾಗ ಅಕ್ಕಿಯೇ ಆಗಿರುವುದರಿಂದ, ಅಕ್ಕಿಯನ್ನೇ ಬಲವರ್ಧನೆ ಗೊಳಿಸುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ. ಜನಸಂಖ್ಯೆಯ ಸುಮಾರು ಮೂರನೇ ಎರಡರಷ್ಟು ಜನರು ಅಕ್ಕಿಯನ್ನು ಸೇವಿಸುತ್ತಾರೆ. 65 ಪ್ರತಿಶತ ಭಾರತೀಯರು ಅಕ್ಕಿಯನ್ನೇ ಅವಲಂಬಿಸಿದ್ದಾರೆ.

ಭತ್ತದಿಂದ ಅಕ್ಕಿಯನ್ನು ಬೇರ್ಪಡಿಸುವಾಗ ಮತ್ತು ಪಾಲಿಶ್ ಮಾಡುವ ಹಂತದಲ್ಲಿ ಅಕ್ಕಿಯ ಪೌಷ್ಟಿಕತೆಯ ಪದರಗಳು ಹಾಳಾಗುತ್ತವೆ. ಬೇಯಿಸಿದ ನಂತರ ಮತ್ತಷ್ಟು ಪೋಷಕಾಂಶಗಳು ನಾಶವಾಗುತ್ತವೆ. ಆದ್ದರಿಂದ ನಾವು ಸೇವಿಸುವ ಆಹಾರ ಅಪೌಷ್ಟಿಕತೆಯಿಂದ ಕೂಡಿದ್ದು, ದೇಹಕ್ಕೆ ಬೇಕಾಗಿರುವ ಅಗತ್ಯ ಪೋಷಕಾಂಶಗಳ ಕೊರತೆಯಾಗುತ್ತದೆ. ಆದ್ದರಿಂದ ಸೂಕ್ಷ್ಮ ಪೋಷಕಾಂಶಗಳೊಂದಿಗೆ ಅಕ್ಕಿಯನ್ನು ಬಲಪಡಿಸುವುದು ಬಡವರ ಆಹಾರಕ್ಕೆ ಪೂರಕವಾಗಲಿದೆ‌.

ಬಲವರ್ಧಿತ ಅಕ್ಕಿ ಎಂದರೇನು? : ಸಾಮಾನ್ಯ ಅಕ್ಕಿಯ ಹಿಟ್ಟಿನ ಜೊತೆ ಅಗತ್ಯ ಸೂಕ್ಷ್ಮ ಪೋಷಕಾಂಶಗಳಾದ ಕಬ್ಬಿಣ, ಫೋಲಿಕ್, ಆಮ್ಲ ಮತ್ತು ವಿಟಮಿನ್ B12 ಮಿಶ್ರಣವನ್ನು  ಬಲವರ್ಧಿತ ಅಕ್ಕಿ ಎಂದು ಕರೆಯಲಾಗುತ್ತದೆ. ಅಕ್ಕಿಯ ಬಲವರ್ಧನೆಯನ್ನು ಹೆಚ್ಚಿಸಿ ಅಕ್ಕಿಯನ್ನ ಉತ್ಪಾದಿಸಲಾಗುತ್ತದೆ. ಬಲವರ್ಧಿತ ಅಕ್ಕಿಯನ್ನು ಬೇಯಿಸಿದ ನಂತರವೂ ಮೊದಲು ಇದ್ದ ಸೂಕ್ಷ್ಮ ಪೋಷಕಾಂಶಗಳ ಮಟ್ಟವನ್ನು ಹಾಗೆ ಉಳಿಸಿಕೊಳ್ಳುವ ಸಾಮರ್ಥ್ಯವನ್ನ ಹೊಂದಿರುವುದರಿಂದ ಕಡಿಮೆ ಅವಧಿಯಲ್ಲಿ ಪೌಷ್ಟಿಕಾಂಶದ ಸಮಸ್ಯೆಯನ್ನು ಪರಿಹರಿಸಲು ಪರಿಣಾಮಕಾರಿಯಾಗಿದೆ. 
ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ, ಪೋಷಕಾಂಶಯುಕ್ತ ಅಕ್ಕಿ ಕಾಳುಗಳ ಆಕಾರ ಮತ್ತು ಗಾತ್ರದಲ್ಲಿ ಸಾಮಾನ್ಯ ಅಕ್ಕಿಯನ್ನೇ ಹೋಲುತ್ತದೆ. ಇಂತಹ ಬಲವರ್ಧಿತ 1 ಕೆಜಿ ಅಕ್ಕಿಗೆ 100 ಕೆಜಿ ಸಾಮಾನ್ಯ ಅಕ್ಕಿಯನ್ನು ಬೆರಸಿ ವಿತರಿಸಲಾಗುತ್ತದೆ.

ಕರ್ನಾಟಕದ ಯಾವ ಜಿಲ್ಲೆಗಳಲ್ಲಿ ಬಲವರ್ಧಿತ ಅಕ್ಕಿ ವಿತರಣೆ : ಅತಿಹೆಚ್ಚು ಅಪೌಷ್ಟಿಕತೆಯಿಂದ ಕೂಡಿರುವ ಜಿಲ್ಲೆಗಳಾದ ಬಳ್ಳಾರಿ, ಕಲಬುರಗಿ, ಬಾಗಲಕೋಟೆ, ಹಾವೇರಿ, ಬೀದರ್, ಗದಗ, ಶಿವಮೊಗ್ಗ, ವಿಜಯಪುರ, ಚಿಕ್ಕಬಳ್ಳಾಪುರ, ರಾಯಚೂರು, ಉತ್ತರ ಕನ್ನಡ, ಯಾದಗಿರಿ, ಕೊಪ್ಪಳ ಮತ್ತು ದಾವಣಗೆರೆ ಜಿಲ್ಲೆಗಳಿಗೆ ಮೊದಲು ಬಲವರ್ಧಿತ ಅಕ್ಕಿಯನ್ನ ವಿತರಿಸಲಾಗುತ್ತದೆ‌. 
ಮೊದಲ ಹಂಚಿಕೆಯಲ್ಲಿ ಬಳ್ಳಾರಿ (1,41,147 ಕ್ವಿಂಟಾಲ್), ವಿಜಯಪುರ (1,07,539) ಮತ್ತು ಕಲಬುರಗಿ (1,33,473) ಜಿಲ್ಲೆಗಳಿಗೆ ಅತಿ ಹೆಚ್ಚು ಹಂಚಿಕೆಯಾಗಿದೆ. 14 ಜಿಲ್ಲೆಗಳಿಗೆ ಒಟ್ಟು ವಾರ್ಷಿಕ 12,71,732 ಮೆಟ್ರಿಕ್ ಟನ್ ಅಕ್ಕಿಯ ಅಗತ್ಯವಿದ್ದು, ಭಾರತೀಯ ಆಹಾರ ನಿಗಮ (FCI) ಪೂರೈಸುತ್ತದೆ. ಮುಂದಿನ ವರ್ಷದಲ್ಲಿ ಕರ್ನಾಟಕದ ಎಲ್ಲಾ 31 ಜಿಲ್ಲೆಗಳಿಗೆ ಬಲವರ್ಧಿತ ಅಕ್ಕಿಯನ್ನು ಪೂರೈಸಬೇಕು ಎಂಬ ಆಲೋಚನೆ ಇದೆ ಎಂದು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಆಯುಕ್ತರು ತಿಳಿಸಿದ್ದಾರೆ.
Exit mobile version