ಫ್ಲಿಪ್ಕಾರ್ಟ್ ಮತ್ತು ಅಮೆಜಾನ್ ಸಲ್ಲಿಸಿದ್ದ ರಿಟ್ ಅರ್ಜಿ ವಜಾಗೊಳಿಸಿದ ಕರ್ನಾಟಕ ಹೈಕೋರ್ಟ್‌

ನವದೆಹಲಿ, ಜೂ. 12: ಭಾರತ ಸ್ಪರ್ಧಾ ಆಯೋಗದ(ಸಿಸಿಐ) ತನಿಖೆ ಪ್ರಶ್ನಿಸಿ ಭಾರತದ ಬೃಹತ್​ ಇ-ಕಾಮರ್ಸ್​ ಕಂಪನಿಗಳಾದ ಫ್ಲಿಪ್​ಕಾರ್ಟ್​ ಮತ್ತು ಅಮೆಜಾನ್​ ಸಲ್ಲಿಸಿದ್ದ ರಿಟ್​ ಅರ್ಜಿಯನ್ನು ಶುಕ್ರವಾರ ಕರ್ನಾಟಕ ಹೈಕೋರ್ಟ್​ ವಜಾಗೊಳಿಸಿ ಆದೇಶಿಸಿದೆ. ನ್ಯಾಯಾಲಯದ ತೀರ್ಪಿನ ಬೆನ್ನಲ್ಲೇ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ ಇಂದು ಸುದ್ದಿಗೋಷ್ಠಿ ನಡೆಸಲು ನಿರ್ಧರಿಸಿದೆ. ಅಮೆಜಾನ್​ ಮತ್ತು ಫ್ಲಿಪ್​ಕಾರ್ಟ್​​​ ಕಂಪನಿಗಳು ನಡೆಸುತ್ತಿರುವ ದುಷ್ಕೃತ್ಯಗಳ ವಿರುದ್ಧ ಧ್ವನಿ ಎತ್ತಲಿದೆ.

ಈ ಬಗ್ಗೆ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ.  ಇಂದು ಮಧ್ಯಾಹ್ನ 12 ಗಂಟೆಗೆ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಯಲಿದೆ. ಈ ಕಾನ್ಫರೆನ್ಸ್​​ನಲ್ಲಿ ಎಲ್ಲಾ ರಾಜ್ಯಗಳ ಹಿರಿಯ ವ್ಯಾಪಾರ ಮುಖಂಡರು ಭಾಗವಹಿಸಬಹುದಾಗಿದೆ. ಜೂಮ್ ಆ್ಯಪ್​ ಮೂಲಕ ಪ್ರೆಸ್​​ಮೀಟ್​ ನಡೆಯಲಿದ್ದು, ಆಸಕ್ತರು ಭಾಗವಹಿಸಬಹುದಾಗಿದೆ.

ಸ್ಪರ್ಧೆ ಕಾನೂನುಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಭಾರತ ಸ್ಪರ್ಧಾ ಆಯೋಗ ತನಿಖೆಗೆ ನೀಡಿದ ಆದೇಶಕ್ಕೆ ಸಂಬಂಧಿಸಿದಂತೆ ಅಮೆಜಾನ್ ಮತ್ತು ಫ್ಲಿಪ್​ಕಾರ್ಟ್​ ರಿಟ್​​ ಅರ್ಜಿ ಸಲ್ಲಿಸಿದ್ದವು. ಆದರೆ ಕರ್ನಾಟಕ ಹೈಕೋರ್ಟ್ ಶುಕ್ರವಾರ​ ಈ ಅರ್ಜಿಯನ್ನು ವಜಾ ಮಾಡಿದೆ. ನ್ಯಾಯಮೂರ್ತಿ ದಿನೇಶ್​ ಕುಮಾರ್ ಈ ಎರಡು ಕಂಪನಿಗಳು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದ್ದಾರೆ. ರಿಟ್​​ನಲ್ಲಿ ಅರ್ಜಿದಾರರು ಎತ್ತಿದ ಸಮಸ್ಯೆಗಳನ್ನು ಈ ಹಂತದಲ್ಲಿ ಪೂರ್ವಾಗ್ರಹ ಮಾಡುವುದು ಹಾಗೂ ತನಿಖೆಯನ್ನು ತಡೆಯುವುದು ಅವಿವೇಕದ ಸಂಗತಿಯಾಗಲಿದೆ ಎಂದು ಹೈಕೋರ್ಟ್​ ಹೇಳಿದೆ.

2020ರ ಜನವರಿ 13ರಂದು ಫ್ಲಿಪ್​ಕಾರ್ಟ್​​ ಮತ್ತು ಅಮೆಜಾನ್​ ಉದ್ಯಮ ನಡೆಸುವ ರೀತಿಯು ಸರಿಯಲ್ಲ ಎಂಬ ಆರೋಪ ಕೇಳಿಬಂದಿತ್ತು. ಹೆಚ್ಚಿನ ರಿಯಾಯಿತಿಗಳು ಹಾಗೂ ತಮ್ಮ ಫ್ಲಾಟ್​ಪಾರ್ಮ್​​ನಲ್ಲಿ ಕೆಲವೇ ಮಾರಾಟಗಾರರ ಜೊತೆ ಕೈ ಜೋಡಿಸುತ್ತಿದೆ ಎಂದು ಸಿಸಿಐ ತನಿಖೆಗೆ ಆದೇಶಿಸಿತ್ತು.

ಸುಮಾರು 18 ತಿಂಗಳ ಹಿಂದೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಸಣ್ಣ ಮತ್ತು ಮಧ್ಯಮ ವ್ಯಾಪಾರ ಮಾಲೀಕರನ್ನು ಪ್ರತಿನಿಧಿಸುವ ದೆಹಲಿ ವ್ಯಾಪಾರ್​ ಮಹಾಸಂಘ್​(ಡಿವಿಎಂ) ದೇಶದ ಇಬ್ಬರು ಅತೀ ದೊಡ್ಡ ಇ-ಕಾಮರ್ಸ್ ಕಂಪನಿಗಳಾದ ಅಮೆಜಾನ್​ ಮತ್ತು ಫ್ಲಿಪ್​​ಕಾರ್ಟ್​​ ವಿರುದ್ಧ ದೂರು ​ಸಲ್ಲಿಸಿತ್ತು. ಸ್ಮಾರ್ಟ್​​ಫೋನ್​ಗಳು ಹಾಗೂ ಸಂಬಂಧಿತ ಆಕ್ಸೆಸರಿಗಳ ವ್ಯವಹಾರಕ್ಕೆ ಸಂಬಂಧಿಸಿದಂತೆ ಡಿವಿಎಂ ಆರೋಪ ಮಾಡಿತ್ತು.

ಈ ದೂರಿನ ಆಧಾರದ ಮೇಲೆ ಸಿಸಿಐ 2020ರ ಜನವರಿಯಲ್ಲಿ ತನಿಖೆಗೆ ಆದೇಶಿಸಿತ್ತು. ಆದರೆ ಇ-ಕಾಮರ್ಸ್​ ಕಂಪನಿಗಳು ಸಿಸಿಐ ತನಿಖೆ ವಿರುದ್ಧ ರಿಟ್​ ಅರ್ಜಿ ಸಲ್ಲಿಸಿದ್ದವು. ಈಗ ಕರ್ನಾಟಕ ಹೈ ಕೋರ್ಟ್​ ಅಮೆಜಾನ್​ ಮತ್ತು ಫ್ಲಿಪ್​ಕಾರ್ಟ್​​ ಸಲ್ಲಿಸಿದ್ದ ರಿಟ್​ ಅರ್ಜಿಯನ್ನು ವಜಾಗೊಳಿಸುವ ಮೂಲಕ ಪ್ರಕರಣಕ್ಕೆ ಸಂಬಂಧಿಸಿದಂತೆ ತಡೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ. ಇದರಿಂದ ದೇಶದ ಬೃಹತ್​ ಇ-ಕಾಮರ್ಸ್​ ಕಂಪನಿಗಳಿಗೆ ಹಿನ್ನಡೆಯಾಗಿದೆ.

Exit mobile version