ಕೊರೊನಾ ಅಬ್ಬರಕ್ಕೆ ಮತ್ತೆ ಕರ್ನಾಟಕ ಸ್ತಬ್ಧ: ಮೇ 10 ರಿಂದ 24ರವರೆಗೆ ಸಂಪೂರ್ಣ ಲಾಕ್‌ಡೌನ್‌

ಬೆಂಗಳೂರು, ಮೇ. 08: ರಾಜ್ಯದಲ್ಲಿ ಕೊರೊನಾ‌ ಸೋಂಕಿನ ಆತಂಕ ಉಲ್ಬಣಗೊಂಡ ಬೆನ್ನಲ್ಲೇ ಮತ್ತಷ್ಟು ಕಠಿಣ ಕ್ರಮಕ್ಕೆ ಮುಂದಾಗಿರುವ ಸರ್ಕಾರ ಮೇ 10ರಿಂದ 24ರವರೆಗೆ 14 ದಿನಗಳ ಕಾಲ ಕಂಪ್ಲೀಟ್ ಲಾಕ್‌ಡೌನ್‌ ಮಾಡಿ ಆದೇಶ ಹೊರಡಿಸಿದೆ.

ಕೊರೊನಾ ನಿಯಂತ್ರಣಕ್ಕಾಗಿ ಈ ಹಿಂದೆ ವಿಧಿಸಿದ್ದ ಜನತಾ
ಕರ್ಫ್ಯೂನಿಂದ ರಾಜ್ಯದಲ್ಲಿ ಸೋಂಕು ನಿಯಂತ್ರಣಕ್ಕೆ ಬರದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ಲಾಕ್​ಡೌನ್​ ಮೊರೆ ಹೋಗಿದೆ. ಹೀಗಾಗಿ ಮೇ 10ರಿಂದ 2 ವಾರಗಳ ಕಾಲ ಕರ್ನಾಟದಲ್ಲಿ ಕಠಿಣ ಲಾಕ್​ಡೌನ್​ ಜಾರಿಗೊಳಿಸುವ ಮೂಲಕ ಸೋಂಕು ಹರಡುವಿಕೆಗೆ ಕಡಿವಾಣ ಹಾಕಲು ಸಿಎಂ ಬಿ.ಎಸ್​. ಯಡಿಯೂರಪ್ಪ ಸರ್ಕಾರ ಕಟ್ಟಿನಿಟ್ಟಿನ ಮಾರ್ಗಸೂಚಿ ಸಿದ್ಧಪಡಿಸಿದೆ. 

14 ದಿನಗಳ ಕಾಲ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಟಫ್​ ರೂಲ್ಸ್​ ಜಾರಿಯಲ್ಲಿರಲಿದೆ. ಮೇ 10ರ ಬೆಳಗ್ಗೆ 6 ಗಂಟೆಯಿಂದ ಮೇ 24ರ ಬೆಳಗ್ಗೆ 6 ಗಂಟೆವರೆಗೆ ಕಠಿಣ ಲಾಕ್​ಡೌನ್​ ರಾಜ್ಯಾದ್ಯಂತ ಜಾರಿಯಲ್ಲಿ ಇರಲಿದೆ. ಬೆಳಗ್ಗೆ 6 ಗಂಟೆಯಿಂದ ಬೆಳಗ್ಗೆ 10 ಗಂಟೆವರೆಗೆ ಮಾತ್ರ ಹಾಲು, ದಿನಸಿ ಅಂಗಡಿಗಳು, ಬಾರ್​ಗಳನ್ನು ತೆರೆಯಲು ಅನುಮತಿ ನೀಡಲಾಗಿದೆ.

ತುರ್ತು ವೈದ್ಯಕೀಯ ಸೇವೆ ಹೊರತು ಪಡಿಸಿ ಎಲ್ಲಾ ರೀತಿಯ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಅಂತರ್​ ಜಿಲ್ಲಾ ಸಂಚಾರಕ್ಕೂ ನಿರ್ಬಂಧ ಹೇರಲಾಗಿದೆ. ಉಳಿದಂತೆ ರಸ್ತೆ ಕಾಮಗಾರಿಗಳಿಗೆ ಯಾವುದೇ ನಿರ್ಬಂಧ ಇರುವುದಿಲ್ಲ.  ಬೆಳಗ್ಗೆ 6 ಗಂಟೆಯಿಂದ ಬೆಳಗ್ಗೆ 10 ಗಂಟೆವರೆಗೆ ಮಾತ್ರ ಬಾರ್​ಗಳಲ್ಲಿ ಪಾರ್ಸಲ್​ಗೆ ಅವಕಾಶ ನೀಡಲಾಗಿದೆ. ಹೋಟೆಲ್​ ​,  ರೆಸ್ಟೋರೆಂಟ್​​ಗಳಲ್ಲಿ ಪಾರ್ಸಲ್​ಗೆ ಮಾತ್ರ ಅನುಮತಿ ನೀಡಲಾಗಿದೆ. ಆಸ್ಪತ್ರೆಗಳು, ಮೆಡಿಕಲ್​ ಶಾಪ್​ಗಳು, ಬ್ಯಾಂಕ್​ಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ.  ಕಟ್ಟಡ ನಿರ್ಮಾಣ ಕಾರ್ಯಕ್ಕೆ ಅನುಮತಿ ನೀಡಲಾಗಿದ್ದು, ಕಾರ್ಮಿಕರು ಬೆಂಗಳೂರು ತೊರೆಯುವುದು ಬೇಡ ಎಂದು ಸಿಎಂ ಮನವಿ ಮಾಡಿದರು.

ಈಗಾಗಲೇ ಕೊರೋನಾ ಕರ್ಫ್ಯೂನಲ್ಲಿ ಜಾರಿಯಲ್ಲಿರುವ ಮೆಟ್ರೋ ಸಂಚಾರ ಬಂದ್​, ಸರ್ಕಾರಿ-ಖಾಸಗಿ ಬಸ್​ಗಳ ಸಂಚಾರಕ್ಕೆ ನಿರ್ಬಂಧ ಲಾಕ್​ಡೌನ್​​ ವೇಳೆಯೂ ಮುಂದುವರೆಯಲಿದೆ.  ಟ್ಯಾಕ್ಸಿ, ಆಟೋ ಸಂಚಾರ ಇರುವುದಿಲ್ಲ. ಮದುವೆ-ಸಮಾರಂಭಗಳು, ಅಂತ್ಯಸಂಸ್ಕಾರಗಳ ಮೇಲಿನ ನಿರ್ಬಂಧ ಎಂದಿನಂತೆ ಮುಂದುವರೆಯಲಿದೆ.

Exit mobile version