ಕಾಸರಗೋಡು ಗ್ರಾಮಗಳ ಹೆಸರು ಬದಲಿಸುವುದಿಲ್ಲ: ಸಿದ್ದು ಮನವಿಗೆ ಕೇರಳ ಸಿಎಂ ಸ್ಪಂದನೆ

ಬೆಂಗಳೂರು, ಜು. 13: ಕೇರಳ ಗಡಿಯಲ್ಲಿರುವ ಕಾಸರಗೋಡುವಿನ ಕೆಲವು ಗ್ರಾಮಗಳ ಹೆಸರನ್ನು ಯಾವುದೇ ಕಾರಣಕ್ಕೂ ಬದಲಿಸುವುದಿಲ್ಲ. ಜತೆಗೆ ಕೇರಳ ಸರ್ಕಾರವು ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಪೂರಕವಾಗಿ ಸ್ಥಳೀಯ ದೃಶ್ಯವಾಹಿನಿಯಲ್ಲಿ ಪಠ್ಯ ಬೋಧನಾ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪತ್ರಕ್ಕೆ ಉತ್ತರಿಸಿದ್ದಾರೆ.

ಇತ್ತೀಚೆಗೆ ಚರ್ಚೆಗೆ ಗ್ರಾಸವಾಗಿದ್ದ ಕಾಸರಗೋಡು ಗ್ರಾಮಗಳ ಹೆಸರು ಬದಲಾವಣೆಗೆ ಸಂಬಂಧಿಸಿದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೇರಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದು, ಹೆಸರು ಬದಲಿಸದಂತೆ ಮನವಿ ಮಾಡಿದ್ದರು. ಇವರ ಪತ್ರಕ್ಕೆ ಉತ್ತರಿಸಿರುವ ಪಿಣರಾಯಿ, ನಾವು ಹೆಸರು ಬದಲಿಸುವಂತಹ ಯಾವುದೇ ನಿರ್ಧಾರ ತಳೆದಿಲ್ಲ.

ಸೌಹಾರ್ದತೆ ಕಾಪಾಡಲು, ನಿಮ್ಮ ಭಾವನೆಗಳನ್ನು ಗೌರವಿಸುವುದು ನಮ್ಮ ಕರ್ತವ್ಯವಾಗಿದೆ. ಎರಡೂ ರಾಜ್ಯಗಳ ಜನರ ಒಡನಾಟಕ್ಕೆ ಇಂಬು ನೀಡುವುದೇ ನಮ್ಮ ಉದ್ದೇಶವಾಗಿದೆ. ಸಾಂಕ್ರಾಮಿಕ ರೋಗದಿಂದ ಶಾಲಾ ತರಗತಿಯಿಂದ ವಂಚಿತರಾಗುತ್ತಿರುವ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿ ಆರಂಭಿಸಲಾಗಿದೆ ಎಂದೂ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Exit mobile version