ಕೇರಳ: ‘ವರದಕ್ಷಿಣೆ ಪಡೆದುಕೊಂಡಿಲ್ಲ’ ಎಂಬ ಪ್ರಮಾಣಪತ್ರ ಸಲ್ಲಿಸಲು ಸರ್ಕಾರಿ ನೌಕರರಿಗೆ ಸೂಚನೆ

ಕೇರಳ, ಜು. 23: ವರದಕ್ಷಿಣೆಯನ್ನು ತಡೆಗಟ್ಟುವ ಭಾಗವಾಗಿ ಕೇರಳದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು, ಸರ್ಕಾರಿ ನೌಕರರಿಗೆ ವರದಕ್ಷಿಣೆ ತೆಗೆದುಕೊಂಡಿಲ್ಲ ಎನ್ನುವ ಬಗ್ಗೆ ಅಫಿಡ್‌ವಿಟ್ (ಪ್ರಮಾಣಪತ್ರ) ಸಲ್ಲಿಸಲು ಸೂಚಿಸಿದೆ.

ಕೇರಳದಲ್ಲಿ ಇತ್ತೀಚೆಗೆ ವರದಕ್ಷಿಣೆ ಸಾವು ಮತ್ತು ಕಿರುಕುಳಗಳು ನಡೆದಿದ್ದು, ಇದರಲ್ಲಿ ಸರ್ಕಾರಿ ನೌಕರರು ಸಹ ಆರೋಪಿಯಾಗಿದ್ದಾರೆ. ಹಾಗಾಗಿ, ಅಲ್ಲಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಈ ಬಗ್ಗೆ ಸುತ್ತೋಲೆ ಹೊರಡಿಸಿದೆ. ಕೇರಳದಲ್ಲಿ ವರದಕ್ಷಿಣೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದು, ಈ ಕಾಯ್ದೆಯ ಅನ್ವಯ ಸರ್ಕಾರಿ ನೌಕರರಿಗೆ ಪ್ರಮಾಣಪತ್ರ ಸಲ್ಲಿಸುವಂತೆ ಸುತ್ತೋಲೆಯಲ್ಲಿ ಸೂಚಿಸಲಾಗಿದೆ.

ಮದುವೆಯಾಗಿರುವ ಪುರುಷ ಸರ್ಕಾರಿ ನೌಕರರು ಒಂದು ತಿಂಗಳ ಅವಧಿಯೊಳಗೆ ತಾವು ವರದಕ್ಷಿಣೆ ಪಡೆದಿಲ್ಲ ಎನ್ನುವ ಕುರಿತು ಪ್ರಮಾಣಪತ್ರ ಸಲ್ಲಿಸಬೇಕು. ಈ ಪತ್ರಕ್ಕೆ ನೌಕರನ ಹೆಂಡತಿ, ತಂದೆ–ತಾಯಿ ಮತ್ತು ಅತ್ತೆ–ಮಾವ ಸಹಿ ಹಾಕಬೇಕು. ಈ ಬಗ್ಗೆ ಇಲಾಖೆಯ ಮುಖ್ಯಸ್ಥರು, ಜಿಲ್ಲಾ ವರದಕ್ಷಿಣೆ ನಿಷೇಧ ಅಧಿಕಾರಿಗೆ ಅರ್ಧವಾರ್ಷಿಕ ವರದಿ ಸಲ್ಲಿಸಬೇಕು ಎಂದೂ ನಿರ್ದೇಶನ ನೀಡಲಾಗಿದೆ.

Exit mobile version