ಕೊಡಗು-ಕೇರಳ ಗಡಿಯಲ್ಲಿ ಕೋವಿಡ್ ನೆಗೆಟಿವ್ ನಕಲಿ ವರದಿ ಪತ್ತೆಗೆ ಸಿಟಿಜನ್ ರಿಜಿಸ್ಟ್ರೇಷನ್ ಆ್ಯಪ್ ಬಳಕೆ

ಕೊಡಗು: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯ ಅಬ್ಬರ ತೀವ್ರವಾಗಿದ್ದು, ಇದರ ಪರಿಣಾಮ ರಾಜ್ಯ ಸರ್ಕಾರ ಹೊರ ರಾಜ್ಯಗಳಿಂದ ಬರುವವರಿಗೆ 72 ಗಂಟೆಗಳ ಒಳಗಿನ ಕೋವಿಡ್‌ ನೆಗೆಟಿವ್‌ ವರದಿ ಕಡ್ಡಾಯಗೊಳಿಸಿದೆ. ಈ ಹಿನ್ನೆಲೆಯಲ್ಲಿ ಕೇರಳದಿಂದ ರಾಜ್ಯಕ್ಕೆ ಬರುವವರು ವರದಿ ನೀಡುವುದನ್ನು ತಪ್ಪಿಸಿಕೊಳ್ಳಲು ನಕಲಿ ನೆಗೆಟಿವ್‌ ವರದಿಗಳನ್ನು ಹಾಜರು ಪಡಿಸಿ ಒಳ ಪ್ರವೇಶಿಸತೊಡಗಿದರು.

ಕರ್ನಾಟಕ ಹಾಗೂ ಕೇರಳ ಗಡಿಭಾಗವಾದ ಮಾಕುಟ್ಟ ಅಂತರರಾಜ್ಯ ಗಡಿಯಲ್ಲಿ ಈ ರೀತಿಯ ಅನೇಕ ಪ್ರಕರಣಗಳು ವರದಿ ಆಗಿದ್ದವು. ಹೀಗಾಗಿ ನಕಲಿ ಕೋವಿಡ್ ನೆಗೆಟಿವ್ ವರದಿ ನೀಡಿ ಕರ್ನಾಟಕಕ್ಕೆ ಬರುವವರನ್ನು ಪತ್ತೆ ಹಚ್ಚಲು ಹೊಸ ಉಪಾಯ ಕಂಡುಕೊಂಡಿದೆ. ವರದಿ ಅಸಲಿಯೇ ಅಥವಾ ನಕಲಿಯೋ ಎನ್ನೋದನ್ನು ಪತ್ತೆ ಹಚ್ಚಲು ಕೇರಳ ಸರ್ಕಾರವೇ ಅಭಿವೃದ್ಧಿಗೊಳಿಸಿರುವ “ಸಿಟಿಜನ್ ರಿಜಿಸ್ಟ್ರೇಷನ್” ಆ್ಯಪನ್ನು ಚೆಕ್ ಪೋಸ್ಟ್ ಗಳಲ್ಲಿ ಬಳಕೆ ಮಾಡುತ್ತಿದೆ.

ಕೇರಳ ರಾಜ್ಯದಿಂದ ಕೊಡಗಿಗೆ ಮೂರು ಚೆಕ್ ಪೋಸ್ಟ್ ಮೂಲಕ ಬರಲು ಅವಕಾಶವಿದೆ. ಅದರಲ್ಲಿ ವಿರಾಜಪೇಟೆ ತಾಲ್ಲೂಕಿನ ಮಾಕುಟ್ಟ ಚೆಕ್ ಪೋಸ್ಟ್ ಮೂಲಕ ಅತೀ ಹೆಚ್ಚು ಅಂದರೆ ದಿನಕ್ಕೆ ಕನಿಷ್ಠ ಮುನ್ನೂರು ವಾಹನಗಳು ಕೇರಳದಿಂದ ಕೊಡಗಿಗೆ ಬರುತ್ತವೆ. ಕೆಲವು ಬಾರಿ ಜಾಸ್ತಿ ವಾಹನಗಳು ಅಥವಾ ಜಾಸ್ತಿ ಜನರು ಒಂದೇ ಬಾರಿಗೆ ಬಂದಾಗ ಅವರೆಲ್ಲರ ರಿಪೋರ್ಟ್‍ಗಳು ನಕಲಿಯೋ ಅಥವಾ ಅಸಲಿಯೋ ಎಂದು ಪತ್ತೆಹಚ್ಚುವುದು ಕಷ್ಟವಾಗುತಿತ್ತು. ಹೀಗಾಗಿ ಕೊಡಗು ಜಿಲ್ಲಾಡಳಿತ ಕೇರಳ ಸರ್ಕಾರ ಅಭಿವೃದ್ಧಿಗೊಳಿಸಿರುವ ಸಿಟಿಜನ್ ರಿಜಿಸ್ಟ್ರೇಷನ್ ಆ್ಯಪನ್ನು ಚೆಕ್ ಪೋಸ್ಟ್ ಗಳಲ್ಲಿ ತಪಾಸಣಾ ಕಾರ್ಯ ನಿರ್ವಹಿಸುತ್ತಿರುವ ತಂಡಗಳಿಗೆ ನೀಡಿದೆ.

ಈ ಆ್ಯಪಿನಲ್ಲಿ ತಪಾಸಣಾ ತಂಡ ಕೇರಳದಿಂದ ಕೊಡಗಿಗೆ ಬರುತ್ತಿರುವವರ ಫೋನ್ ನಂಬರ್ ಎಂಟ್ರಿ ಮಾಡಿದರೆ ಸಾಕು ಕೋವಿಡ್ ಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಸ್ಥಳದಲ್ಲಿಯೇ ಸಿಗಲಿದೆ. ಇದು ಕೇರಳದಿಂದ ಬರುತ್ತಿರುವವರ ವರದಿ ನಕಲಿಯೇ ಅಥವಾ ಅಸಲಿಯೇ ಎನ್ನುವುದು ಕ್ಷಣ ಮಾತ್ರದಲ್ಲೇ ಗೊತ್ತು ಮಾಡಲು ಸಹಕಾರಿ ಆಗಲಿದೆ. ಆ ಮೂಲಕ ಕೊಡಗು ಜಿಲ್ಲಾಡಳಿತ ರಾಜ್ಯದಲ್ಲಿ ಕೋವಿಡ್ ಮಹಾಮಾರಿಯ ಎರಡನೇ ಅಲೆ ಅಬ್ಬರಿಸುತ್ತಿದ್ದರುವುದರಿಂದ ಕೊಡಗಿನಲ್ಲಿ ಅದರ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಕೈಗೊಂಡಿದೆ.

ನೂತನ ಆ್ಯಪ್‌ ಬಳಕೆಯಿಂದ ನಕಲಿ ವರದಿಗಳನ್ನು ತೋರಿಸಿ ಕೊಡಗಿಗೆ ಬರುವವರ ಪ್ರಯತ್ನವನ್ನು ಸಂಪೂರ್ಣವಾಗಿ ತಡೆಗಟ್ಟಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಮೋಹನ್ ಕುಮಾರ್ ತಿಳಿಸಿದರು. ವರ್ಷದ ಹಿಂದೆ ಕೋವಿಡ್ ಆರಂಭವಾದಾಗ ಹೇಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದೆವೋ ಅದೇ ರೀತಿ ಎರಡನೇ ಅಲೆಯ ಕೋವಿಡ್‌ ತಡೆಗೆ ಯೋಜಿತ ಪ್ರಯತ್ನ ನಡೆಸುತ್ತಿರುವುದರಿಂದ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣದಲ್ಲಿದೆ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಹೇಳುತ್ತಾರೆ.

Exit mobile version