ಕೇರಳದ ಕೋಯಿಕ್ಕೋಡ್ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ವಿಮಾನ ಅಪಘಾತ ಹಿನ್ನೆಲೆಯಲ್ಲಿ, ವಿಮಾನ ನಿಲ್ದಾಣದ ರನ್ವೇ ಸುರಕ್ಷತೆಗೆ ಸಂಬಂಧಿಸಿದಂತೆ ಚರ್ಚೆಗೆ ಗ್ರಾಸವಾಗಿದೆ.
ಕೋಯಿಕ್ಕೋಡ್ ನಲ್ಲಿರುವ ಕರಿಪುರ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸಂಜೆ ಏರ್ ಇಂಡಿಯಾ ವಿಮಾನ ಲ್ಯಾಂಡಿಂಗ್ ವೇಳೆ ಸಂಭವಿಸಿದ ಅಪಘಾತದಿಂದ ವಿಮಾನ ಇಬ್ಭಾಗವಾಗಿ 18ಕ್ಕೂ ಹೆಚ್ಚು ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದರು. ಆದರೆ ಈ ಘಟನೆ ವಿಮಾನ ನಿಲ್ದಾಣದ ರನ್ವೇ ಸುರಕ್ಷತೆಯ ಬಗ್ಗೆ ದೊಡ್ಡ ಅನುಮಾನಗಳನ್ನು ಹುಟ್ಟಿಹಾಕಿದೆ.
ಕರಿಪುರ ವಿಮಾನ ನಿಲ್ದಾಣ ಅಸಮರ್ಪಕ ವ್ಯವಸ್ಥೆ ಹೊಂದಿದ್ದು, ಇಲ್ಲಿ ವಿಮಾನಗಳನ್ನು ಇಳಿಸಲು ಅವಕಾಶ ನೀಡಬಾರದು. ಅದರಲ್ಲೂ ವಿಶೇಷವಾಗಿ ಮಳೆ ವಾತಾವಾರಣದಲ್ಲಿ ಲ್ಯಾಂಡಿಂಗ್ಗೆ ಅನುಮತಿ ನೀಡಬಾರದೆಂದು ನಾಗರಿಕ ವಿಮಾನಯಾನ ಸಚಿವಾಲಯ ರಚಿಸಿದ ಸುರಕ್ಷತಾ ಸಲಹಾ ಸಮಿತಿಯ ಸದಸ್ಯ ಕ್ಯಾಪ್ಟನ್ ಮೋಹನ್ ರಂಗನಾಥನ್ ಒಂಭತ್ತು ವರ್ಷಗಳ ಹಿಂದೆ ಎಚ್ಚರಿಕೆ ನೀಡಿತ್ತು ಎನ್ನಲಾಗಿದೆ.
ಕರ್ನಾಕಟದ ಮಂಗಳೂರು ವಿಮಾನ ಅಪಘಾತ ನಡೆದ ಬಳಿಕ ನಾನು ನೀಡಿದ್ದ ಎಚ್ಚರಿಕೆಯನ್ನು ಕಡೆಗಣಿಸಲಾಗಿದೆ. ಬೆಟ್ಟದ ಮೇಲಿರುವ ಈ ವಿಮಾನ ನಿಲ್ದಾಣದ ರನ್ವೇ ಇಳಿಜಾರಿನಿಂದ ಕೂಡಿದೆ. ಅಲ್ಲದೆ ರನ್ವೇ ಕೊನೆಯಲ್ಲಿರುವ ಬಫರ್ ಝೋನ್ ಅಸಮರ್ಪಕವಾಗಿದೆ ಎಂದು ರಂಗನಾಥ್ ಎಚ್ಚರಿಕೆ ನೀಡಿದ್ದರು ಎಂದು ತಿಳಿದು ಬಂದಿದೆ.
ಸಾಮಾನ್ಯವಾಗಿ 240 ಮೀಟರ್ ಬಫರ್ ಝೋನ್ ಹೊಂದಿರಬೇಕು ಆದರೆ ಈ ವಿಮಾನ ನಿಲ್ದಾಣದಲ್ಲಿ 90 ಮೀಟರ್ ಬಫರ್ ಝೋನ್ ಇದೆ. ಅಲ್ಲದೆ ರನ್ವೇ ಬದಿಯ ಎರಡೂ ಬದಿಯಲ್ಲೂ 100 ಮೀಟರ್ ಸ್ಥಳಾವಕಾಶ ಇರಬೇಕಾದಲ್ಲಿ, ಇಲ್ಲಿ 75 ಮೀಟರ್ ಮಾತ್ರ ಇದೆ. ಜತೆಗೆ ರನ್ವೇಯ ಎರಡೂ ಬದಿಗಳಲ್ಲಿ ರಬ್ಬರ್ ತುಣುಕುಗಳು ಪತ್ತೆಯಾದ ಕುರಿತು, ರನ್ವೇಯಲ್ಲಿ ಬಿರುಕುಗಳು ಮೂಡಿರುವ ಕುರಿತು, ರನ್ವೇ ಅಂಚಿನಲ್ಲಿ 1.5 ಮೀ ಎತ್ತರದಲ್ಲಿ ನೀರು ಸಂಗ್ರಹವಾಗಿರುವುದು ಸೇರಿದಂತೆ 8 ಅಸಮರ್ಪಕ ವ್ಯವಸ್ಥೆಗಳನ್ನು ಪಟ್ಟಿಮಾಡಿ, ಭಾರತೀಯ ನಾಗರಿಕ ವಿಮಾನಯಾನ ಸಚಿವಾಲಯ ಕರಿಪುರ್ ವಿಮಾನ ನಿಲ್ದಾನದ ನಿರ್ದೇಶಕರಿಗೆ 2019ರಲ್ಲಿಯೇ ಶೋಕಾಸ್ ನೋಟಿಸ್ ಜಾರಿಗೊಳಿಸಿತ್ತು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ
ಅಲ್ಲದೇ 2015 ರಲ್ಲಿ ರನ್ವೇಯಲ್ಲಿ ಕೆಲವು ಸಮಸ್ಯೆಗಳನ್ನು ಇದ್ದದ್ದು ನಿಜ, ಆದರೆ ಆ ಸಮಸ್ಯೆಗಳನ್ನು ಪರಿಹರಿಸಿದ ನಂತರ, 2019 ರಲ್ಲಿ ಅದಕ್ಕೆ ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (DGCA) ಅನುಮತಿ ನೀಡಿತ್ತು. ಏರ್ ಇಂಡಿಯಾದ ಜಂಬೋ ಜೆಟ್ಗಳು ಕೂಡಾ ಅಲ್ಲಿಗೆ ಇಳಿಯುತ್ತಿದ್ದವು ಎಂದು ವಿಮಾನ ನಿಲ್ದಾಣ ಪ್ರಾಧಿಕಾರದ (AAI) ಅಧ್ಯಕ್ಷ ಅರವಿಂದ್ ಸಿಂಗ್ ಹೇಳಿದ್ದಾರೆ.
ವಿಮಾನವು ಯಾವ ರನ್ವೇಯಲ್ಲಿ ಇಳಿಯಬೇಕಿತ್ತೋ ಅಲ್ಲಿ ಇಳಿಯಲು ಸಾಧ್ಯವಾಗಲಿಲ್ಲ, ಬಳಿಕ ಮತ್ತೊಂದು ರನ್ವೇನಲ್ಲಿ ಇಳಿಯಲು ಪ್ರಯತ್ನಿಸಲಾಯಿತು, ಅಲ್ಲಿ ಅಪಘಾತ ಸಂಭವಿಸಿದೆ. ನಾವು ಪರಿಸ್ಥಿತಿಯನ್ನು ವಿಚಾರಣೆ ಮಾಡುತ್ತಿದ್ದೇವೆ ಮತ್ತು ವಿಮಾನ ನಿಲ್ದಾಣವು ಶೀಘ್ರದಲ್ಲೇ ಕಾರ್ಯರೂಪಕ್ಕೆ ಬರಲಿದೆ. ನಾಗ್ಪುರದಲ್ಲಿ ಪರ್ಯಾಯ ಸೌಲಭ್ಯವೂ ಪ್ರಗತಿಯಲ್ಲಿದೆ ಅರವಿಂದ್ ಸಿಂಗ್ ಹೇಳಿದ್ದಾರೆ.