ಪ್ರಯಾಣಿಕರಿಗೆ ಹೆಚ್ಚುವರಿ ಸೇವೆ ನೀಡಲು ಹೊಸದಾಗಿ ಸಾವಿರ ಬಸ್​ಗಳನ್ನು ರಸ್ತೆಗೆ ಇಳಿಸಲಿರುವ ಕೆಎಸ್​ಆರ್​ಟಿಸಿ !

Bengaluru: ಕಾಂಗ್ರೇಸ್ ಪಕ್ಷದ ಮಹಾತ್ವಾಕಾಂಕ್ಷಿ ಯೋಜನೆಯಾದ ಶಕ್ತಿ ಯೋಜನೆಯಿಂದ ವಿದ್ಯಾರ್ಥಿಗಳಿಗೆ ಹಾಗೂ ಇತರ ಪ್ರಯಾಣಿಕರಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ 300ಕ್ಕೂ ಹೆಚ್ಚಿನ ಹೊಸ ಮಾರ್ಗಗಳಲ್ಲಿ ಹೆಚ್ಚುವರಿ ಬಸ್‌ ಸೇವೆ ಆರಂಭಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ನಿರ್ಧಾರ ಮಾಡಿದೆ. ಈಗಾಗಲೇ ಶಾಲೆ-ಕಾಲೇಜುಗಳು ಹೆಚ್ಚಿರುವ ಮಾರ್ಗಗಳನ್ನು ಕೆಎಸ್ಆರ್​​ಟಿಸಿ ಗುರುತಿಸಿದೆ.

ಅಂತಹ ಮಾರ್ಗಗಳಲ್ಲಿ ಹೆಚ್ಚುವರಿ ಅಥವಾ ಹೊಸದಾಗಿ ಬಸ್ ಸೇವೆ ಆರಂಭಿಸಲು ತಯಾರಿ ನಡೆಸಿದೆ. ಕೆಎಸ್ಆರ್​​ಟಿಸಿಗೆ ಸೇರ್ಪಡೆಯಾಗಿರುವ 814 ಬಸ್‌ಗಳ ಪೈಕಿ 500 ಬಸ್​ಗಳನ್ನು ಇದಕ್ಕೆಂದೇ ನಿಯೋಜಿಸಲು ನಿರ್ಧಾರ ಮಾಡಲಾಗಿದೆ. ಈ ಹಿಂದೆ ಬಿಜೆಪಿ (BJP) ಸರ್ಕಾರ ಆಡಳಿತದಲ್ಲಿರುವಾಗ ಒಂದು ಹೊಸ ಬಸ್ ಖರೀದಿ ಮಾಡಿರಲಿಲ್ಲ ಇದರಿಂದ ಪ್ರಯಾಣಿಕರಿಗೆ ಬಹಳ ಕಷ್ಟ ಉಂಟಾಗಿತ್ತು. ಇದೀಗ ವಿಭಾಗೀಯ ಮಟ್ಟದಲ್ಲಿ ಗುರುತಿಸಲಾಗಿರುವ ಹೊಸ ಮಾರ್ಗಗಳಲ್ಲಿ ಮುಂದಿನ 3 ತಿಂಗಳಲ್ಲಿ ಸೇವೆ ಆರಂಭ ಮಾಡಲಾಗುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalingareddy) ಹೇಳಿದ್ದಾರೆ.

ಇದೀಗ ಕೆಎಸ್ಆರ್​​ಟಿಸಿ ವ್ಯಾಪ್ತಿಯಲ್ಲಿ ಬಸ್‌ಗಳ ಕೊರತೆ ನೀಗಿಸುವ ಸಲುವಾಗಿ ಒಂದು ಸಾವಿರ ಹೊಸ ಬಸ್‌ ಖರೀದಿ ಮಾಡಲಾಗುತ್ತಿದೆ. ಸದ್ಯ 814 ಹೊಸ ಬಸ್​ಗಳ ಸೇರ್ಪಡೆ ಜತೆಗೆ 977 ಹಳೇ ಬಸ್‌ಗಳನ್ನು ಪುನಶ್ಚೇತನ ಮಾಡಲಾಗುತ್ತದೆ. 100 ಹೊಸ ಪಲ್ಲಕ್ಕಿ ಸ್ಲೀಪರ್ ಬಸ್‌ಗಳ ಸೇರ್ಪಡೆಗೆ ಸರ್ಕಾರ ಅನುಮತಿ ನೀಡಿದ್ದು, 20 ಅಂಬಾರಿ, 20 ಐರಾವತ ಉತ್ಸವ ಬಸ್‌ಗಳ ಖರೀದಿಗೆ ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಈಗಾಗಲೇ ಸಲ್ಲಿಸಲಾಗಿತ್ತು . ಕಾಂಗ್ರೆಸ್ (Congress) ಸರ್ಕಾರ ಕೂಡ ಹೊಸ ಯೋಜನೆಗೆ ಗ್ರೀನ್ ಸಿಗ್ನಲ್ (Green Signal) ನೀಡಿದೆ. ಸಾಮಾನ್ಯ ಸಾರಿಗೆ ಬಸ್‌ಗಳ ಜತೆಗೆ ಪ್ರೀಮಿಯಂ ಬಸ್‌ಗಳ ಸಂಖ್ಯೆಯನ್ನೂ ಹೆಚ್ಚಿಸಲು ನಿಗಮ ಯೋಜನೆ ಮಾಡಿದೆ. ಇದರಿಂದ ವಿದ್ಯಾರ್ಥಿಗಳಿಗೆ ಹಾಗೂ ಪ್ರಯಾಣಿಕರಿಗೆ ಅನುಕೂಲವಾಗಲಿದೆ.

Exit mobile version