ದೇವಾಂಗ ಅಭಿವೃದ್ಧಿ ನಿಗಮ ಸ್ಥಾಪನೆಗೆ ಒತ್ತಾಯಿಸಿ ಸಿಎಂಗೆ ಲಕ್ಷ್ಮಿ ಹೆಬ್ಬಾಳ್ಕರ್ ಮನವಿ

ಬೆಂಗಳೂರು, ಫೆ. 02: ದೇವಾಂಗ ಅಭಿವೃದ್ಧಿ ಮಂಡಳಿ ಸ್ಥಾಪಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ ಮನವಿ ಸಲ್ಲಿಸಿದ್ದಾರೆ.

ರಾಜ್ಯದಲ್ಲಿ ಸುಮಾರು 30 ಲಕ್ಷಕ್ಕಿಂತಲೂ ಹೆಚ್ಚಿನ ದೇವಾಂಗ ಜನಾಂಗದವರು ವಾಸಿಸುತ್ತಿದ್ದು, ನಮ್ಮ ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಸುಳೇಭಾವಿ ಗ್ರಾಮದಲ್ಲಿ ಅಧಿಕವಾಗಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕೂಡ ಕಾಣಸಿಗುತ್ತಾರೆ. ಈ ಸಮಾಜದವರು ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ತೀರಾ ಹಿಂದುಳಿದಿದ್ದಾರೆ ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಈ ಹಿಂದೆ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಮಂಡಳಿ ಇಲಾಖೆ ಯೋಜನೆಯಲ್ಲಿ ʻದೇವಾಂಗʼ ಮೀಸಲಾತಿಯಿತ್ತು. ಈಗ ಸುಮಾರು 4-5 ವರ್ಷಗಳ ಹಿಂದೆ ರದ್ದುಗೊಳಿಸಲಾಗಿದೆ. ಶಿವನ ತ್ರಿನೇತ್ರದಿಂದ ಉದ್ಭವಿಸಿದ ದೇವಲ ದೇವಾಂಗ ಮಹರ್ಷಿಯವರು ತ್ರಿಮೂರ್ತಿಗಳಾಗಿ ಹಾಗೂ ಇತರೆ ದೇವತೆಗಳಿಗೆ ವಸ್ತ್ರಗಳನ್ನು ನೇಯ್ದು ಕೊಟ್ಟು, ಮೂಲ ನೇಕಾರ ಅನಿಸಿಕೊಂಡಿದ್ದಾರೆ. ಆದರೆ, ಈಗ ಮಾನ ಕಾಪಾಡುವ ಮೂಲ ನೇಕಾರರಾದ ದೇವಾಂಗ ಸಮಾಜದವರಿಗೆ ಸರ್ಕಾರವು ಯಾವುದೇ ರೀತಿಯಿಂದಲೂ ಮೀಸಲಾತಿ ಕಲ್ಪಿಸಿಲ್ಲ. ಪ್ರಾತಿನಿಧ್ಯವಾಗಿ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಪ್ರಾಧಿಕಾರ ರಚಿಸಿ, ಆರ್ಥಿಕ, ಶೈಕ್ಷಣಿಕವಾಗಿ ಸಮಾಜದ ಬಡಜನರಿಗೆ ಮೇಲೆತ್ತುವ ಅಭಿನಂದನಾರ್ಹ ಕಾರ್ಯ ಮಾಡಿದ್ದಿರಿ. ಇತ್ತೀಚಿಗೆ ಕೊರೊನಾ ಸಂದರ್ಭದಲ್ಲಿ ಹಾಗೂ ಕಳೆದ ಎರಡು ವರ್ಷಗಳಿಂದ ಅಪ್ಪಳಿಸುತ್ತಿರುವ ಪ್ರವಾಹದ ಸಂಕಷ್ಟದಲ್ಲಿ ನೇಕಾರರು ಉದ್ಯೋಗವು ಇಲ್ಲದೇ, ನೇಯ್ದ ಸೀರೆ, ಬಟ್ಟೆಗಳ ಮಾರಾಟವು ಕೂಡ ಇಲ್ಲದೇ ಸಂಕಷ್ಟದಲ್ಲಿದ್ದಾರೆ. ಹಾಕಿದ ಬಂಡವಾಳಕ್ಕೆ ಯಾವುದೇ ಪ್ರತಿಫಲವಿಲ್ಲದೆ, ದಿನದ ಕೂಲಿಗಾಗಿ ಪರದಾಡುವ ಸ್ಥಿತಿಯಲ್ಲಿದ್ದಾರೆ. ಹಾಗಾಗಿ, ಇವರೆಲ್ಲರ ನೆರವಿಗೆ ಸರ್ಕಾರ ತುರ್ತಾಗಿ ಧಾವಿಸಬೇಕಾದ ಅಗತ್ಯವಿದೆ ಎಂದು ಕೋರಿದ್ದಾರೆ.

ದೇವಾಂಗ ಸಮಾಜವು ಆರ್ಥಿಕ, ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕಾದ ಕಾರಣ, ಅವರು ಕೇಳುತ್ತಿರುವುದು ನ್ಯಾಯಬದ್ಧವಾಗಿದೆ. ಅವರ ಮನವಿಯನ್ನು ನೆರವೇರಿಸಲು ನಾನು‌ ಮನಃಪೂರ್ವಕವಾಗಿ ಒಪ್ಪಿ ಗಮನಕ್ಕೆ ತರುತ್ತಿದ್ದೇನೆ. ʻದೇವಾಂಗ ಅಭಿವೃದ್ಧಿ ನಿಗಮʼ (ಆಂಧ್ರ ಪ್ರದೇಶದ ಮಾದರಿಯಲ್ಲಿ) ಸ್ಥಾಪಿಸಬೇಕು ಎಂದು ಒತ್ತಾಯಿಸಿದ್ದಾರೆ.

Exit mobile version