ಕನ್ನಡವು ಆಡಳಿತದ ಉಸಿರಾಗಲಿ: ಪರಭಾಷಿಕರಿಗೂ ಕನ್ನಡ ಕಲಿಯಿರಿ ಎಂದ ಸಿ.ಎಂ ಸಿದ್ದರಾಮಯ್ಯ

Bengaluru: ರಾಜ್ಯದಲ್ಲಿ ನೆಲೆಸಿರುವ ಪ್ರತಿಯೊಬ್ಬರೂ ಕನ್ನಡ (Kannada) ಕಲಿತು ಮಾತನಾಡಬೇಕು. ಆಗಲೇ ಕನ್ನಡ ನಾಡಿನ ಸಂಸ್ಕೃತಿ ತಿಳಿಯಲು ಸಾಧ್ಯ. ಇದರ ಜೊತೆಗೆ ಸರ್ಕಾರದ ಎಲ್ಲಾ ಕಡತಗಳು ಕನ್ನಡದಲ್ಲೇ ಇರುವಂತೆ, ಅಧಿಕಾರಿಗಳು ಆಡಳಿತದಲ್ಲಿ ಕನ್ನಡವನ್ನೇ ಬಳಸುವಂತೆ ಆದ್ಯತೆ ನೀಡಿರುವುದು ನಮ್ಮ ಸರ್ಕಾರದ ಬದ್ಧತೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.

ಅಧಿಕಾರಿಗಳ ಸ್ಪಂದನಾಶೀಲತೆ ಹಾಗೂ ಸುಧಾರಿತ ತಂತ್ರಜ್ಞಾನ ಬಳಕೆಯಿಂದ ಬಹುತೇಕ ಐಎಎಸ್‌ (IAS) ಅಧಿಕಾರಿಗಳು ಕನ್ನಡದಲ್ಲೇ ವ್ಯವಹರಿಸುವ ಜೊತೆಗೆ ಟಿಪ್ಪಣಿ, ನಡಾವಳಿ, ಕಂಡಿಕೆ, ಆದೇಶಕ್ಕೆ ಕನ್ನಡವನ್ನೇ ಬಳಸುತ್ತಿರುವುದು ಕನ್ನಡದ ಬೆಳವಣಿಗೆ ದೃಷ್ಟಿಯಿಂದ ಮಹತ್ವದ್ದೆನಿಸಿದೆ.

ಕಾನೂನಿನ ಕ್ರಮಕ್ಕಿಂತ ಭಾಷೆಯಂತಹ ಭಾವನಾತ್ಮಕ ಹಾಗೂ ಅಸ್ಮಿತೆ ವಿಚಾರದಲ್ಲಿ ಸ್ವಯಂಪ್ರೇರಿತ ಬಳಕೆಯೂ ಹೆಚ್ಚು ಪರಿಣಾಮಕಾರಿ. ಹಾಗಾಗಿ ಆಡಳಿತ ಕನ್ನಡ ಭಾಷೆಯಲ್ಲೇ ನಡೆಯಬೇಕೆಂಬ ನಿಟ್ಟಿನಲ್ಲಿಆಯಾ ಸಂದರ್ಭಕ್ಕೆ ಸರ್ಕಾರಗಳು ಕಾನೂನು, ಆದೇಶಗಳನ್ನು ಹೊರಡಿಸುತ್ತಾ ಬಂದಿವೆ.

ಕನ್ನಡ ಪರ ಸಂಘಟನೆಗಳು, ಸಾಹಿತಿಗಳು,ಚಳುವಳಿಗಾರರು, ಭಾಷಾ ಪ್ರೇಮಿಗಳು, ಭಾಷಾ ಪಂಡಿತರು, ಮುಖ್ಯವಾಗಿ ಕನ್ನಡಿಗರು ಸರ್ಕಾರದ ಎಲ್ಲಹಂತದ ಆಡಳಿತ ಕನ್ನಡದಲ್ಲೇ ನಡೆಯಬೇಕು ಎಂದು ಒತ್ತಾಯಿಸುತ್ತಲೇ ಬಂದಿದ್ದಾರೆ. ಕನ್ನಡಾಭಿಮಾನಿಗಳ ಒತ್ತಡ, ಸರ್ಕಾರದ ನೀತಿಗಳ ಜತೆಗೆ ತಂತ್ರಜ್ಞಾನ- ತಂತ್ರಾಂಶ ಕ್ಷೇತ್ರದಲ್ಲಿ ಸುಧಾರಣೆಯು ಕನ್ನಡ ಭಾಷೆಯು ಆಡಳಿತದಲ್ಲಿ ವ್ಯಾಪಕವಾಗಿ ಬಳಕೆಯಾಗಲು ಪ್ರೇರಣೆ ನೀಡಿದೆ.

ಹಾಗಾಗಿ ಸರ್ಕಾರದ ಆದೇಶಗಳು, ಸುತ್ತೋಲೆಗಳು, ತಿಳಿವಳಿಕೆ ಪತ್ರ ಸೇರಿ ಇತರೆ ಸೂಚನೆ, ಸಂವಹನ ಟಿಪ್ಪಣಿಯನ್ನು ಬಹುತೇಕ ಐಎಎಸ್‌ ಅಧಿಕಾರಿಗಳು ಕನ್ನಡದಲ್ಲೇ ಬರೆಯುತ್ತಿರುವುದು ಭರವಸೆ ಹೆಚ್ಚಿಸಿದೆ. ಕೆಲ ಇತಿಮಿತಿಗಳು, ಪರ್ಯಾಯ ಕ್ರಮಗಳ ಹೊರತಾಗಿಯೂ ಕನ್ನಡದಲ್ಲೇ ಆಡಳಿತ ನಡೆಸಬೇಕೆಂಬ ಮನೋಭಾವ ಅಧಿಕಾರದ ಉನ್ನತ ಶ್ರೇಣಿಯಲ್ಲಿರುವ ಐಎಎಸ್‌ ಅಧಿಕಾರಿಗಳಲ್ಲಿ ಮೂಡಿರುವುದು ಉತ್ತಮ ಬೆಳವಣಿಗೆ. ಕಡತಗಳು ಕನ್ನಡಮಯವಾಗಲು ಕಾರಣವಾದ ಕೆಲ ಅಂಶಗಳು ಗಮನಾರ್ಹವೆನಿಸಿವೆ.

ಭವ್ಯಶ್ರೀ ಆರ್.ಜೆ

Exit mobile version