ಶೌಚಕ್ಕೆ ಬಿಡಿ, ಕುಡಿಯಲೂ ತೊಟ್ಟು ನೀರಿಲ್ಲ

ಶೌಚಕ್ಕೆ ಬಿಡಿ, ಕುಡಿಯಲೂ ತೊಟ್ಟು ನೀರಿಲ್ಲ  | Citizen journalist | Vijayatimes

ಸ್ನೇಹಿತ್ರೆ ಈಗ ನಾನು ಹೇಳುತ್ತಿರುವ ಸಿಟಿಜನ್‌ ಜರ್ನಲಿಸ್ಟ್‌ ಸ್ಟೋರಿ ನಿಜವಾಗ್ಲೂ ನಮ್ಮ ನಿಜವಾದ ಭಾರತದ ಚಿತ್ರಣವನ್ನು ಬಿಚ್ಚಿಡುತ್ತೆ. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿಯ  ತೇರದಾಳ ಗ್ರಾಮದ ಜನರಿಗೆ ಶೌಚಕ್ಕೆ ಬಿಡಿ, ಕುಡಿಯಲು ಸಹ ನೀರಿಲ್ಲದ ಪರಿಸ್ಥಿತಿ ಎದುರಾಗಿದೆ. ಇದು  ಇತಿಹಾಸ ಪ್ರಸಿದ್ಧ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿಯ ತೇರದಾಳ ಗ್ರಾಮ ಪಂಚಾಯತಿ ಹಾಗೂ ಪುರ ಸಭೆಯ ಒಂದು ನೋಟ. ಈ ಗ್ರಾಮದಲ್ಲಿ ಪುರಸಭೆ ಹೆಸರಿಗಷ್ಟೇ ಇದೆ. ಇದರಿಂದ ಜನರಿಗೆ ಯಾವ ಪ್ರಯೋಜನವೂ ಆಗಿಲ್ಲ.

ಸ್ವಾತಂತ್ರ್ಯ ಸಿಕ್ಕು ಏಳು ದಶಕಗಳು ಕಳೆದ್ರೂ ಇಲ್ಲಿನ ಜನರಿಗೆ ಸರಿಯಾಗಿ ಕುಡಿಯುವ ನೀರನ್ನು ಒದಗಿಸುವ ಯೋಗ್ಯತೆ ಕೂಡ ಇಲ್ಲ.  ಇಲ್ಲಿನ ಮಂದಿಗೆ  ಮುನ್ಸಿಪಾಲಿಟಿ ವತಿಯಿಂದ ನಾಲ್ಕು ದಿವಸಗಳಿಗೊಮ್ಮೆ ನೀರು ಬಿಡಲಾಗುತ್ತದೆ. ಅದು ಕೂಡ ಲೆಕ್ಕಾಚಾರದಲ್ಲಿ. ಈ ರೀತಿ ನಾಲ್ಕು ದಿವಸಗಳಿಗೊಮ್ಮೆ ಬರೋ ನೀರು ಇಲ್ಲಿನ ಜನರಿಗೆ ಅಡುಗೆ, ಕುಡಿಯೋದಕ್ಕೇ  ಸಾಕಾಗುತ್ತಿಲ್ಲ. ಹಾಗಾಗಿ ಇವರು ಕುಡಿಯಲು ನೀರಿಲ್ಲದೆ ಪರದಾಡುತ್ತಿದ್ದಾರೆ. ನೀರಿಗಾಗಿ ಹೆಂಗಸರು ಪಡೋ ಕಷ್ಟ ಹೇಳತೀರದು.  ಇಲ್ಲಿನ ಜನರ ನೀರಿಗಾಗಿ ನಿತ್ಯ ಒದ್ದಾಡುತ್ತಿದ್ರೂ ಇಲ್ಲಿನ ಸ್ಥಳೀಯ ಆಡಳಿತವಾಗ್ಲಿ, ಸರ್ಕಾರವಾಗ್ಲೀ ಯಾವ ಕ್ರಮವನ್ನೂ ಕೈಗೊಳ್ಳದೇ ಇರೋದು ನಿಜವಾಗ್ಲೂ ಅಚ್ಚರಿಯ ಸಂಗತಿ.

ತೇರದಾಳ ಗ್ರಾಮದಲ್ಲಿ ಕುಡಿಯುವ ನೀರಿಗೇ ಇಷ್ಟೊಂದು ಹಾಹಾಕಾರ ಇದೆ. ಇನ್ನು ಇಲ್ಲಿನ ಸಾರ್ವಜನಿಕ  ಶೌಚಾಲಯದ ಕತೆಯನ್ನು ಹೇಳದಿರೋದೇ ಲೇಸು.  ಇಲ್ಲಿನ ಶೌಚಾಲಯಗಳು ನೀರು ಕಾಣದೆ ವರ್ಷಗಳೇ ಕಳೆದಿವೆ. ಇದ್ರಿಂದ ಇಲ್ಲಿ ಸಾರ್ವನಿಕರು ಶೌಚಾಲಯಗಳ ಒಳಗೆ ಮೂಗು ಮುಚ್ಚಿಕೊಂಡು ಹೋಗಲೂ ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬುದು ಜನರ ದೂರು. ದುರಂತ ಗೊತ್ತಾ? ಎಲ್ಲೆಡೆ ಸ್ವಚ್ಛ ಭಾರತ್ ಸ್ವಚ್ಛ ಭಾರತ್‌ ಅಂತ ಬಡ್ಕೋತೀವಿ. ಅದಕ್ಕಾಗಿ ಸಾವಿರಾರು ಖರ್ಚು ಮಾಡಲಾಗುತ್ತೆ. ಆದ್ರೆ ತೇರದಾಳದಲ್ಲಿ  ಶೌಚಾಲಯ ಆಗಿ 10 ವರ್ಷಗಳೇ ಕಳೆದಿವೆ, ಆದ್ರೆ ಇಲ್ಲಿ ನೀರಿನ ವ್ಯವಸ್ಥೆಯನ್ನೇ ಮಾಡಿಲ್ಲ ಗೊತ್ತಾ?

ಇಲ್ಲಿನ ಕೊಳವೆಬಾವಿ ಹಾಳಾಗಿ ತಿಂಗಳುಗಳೇ ಕಳೆದಿವೆ. ಆದ್ರೆ ಅದನ್ನು ಸರಿಪಡಿಸುವ ಗೋಜಿಗೆ ಪಂಚಾಯತ್ ಅಧಿಕಾರಿಗಳು ಹೋಗುತ್ತಿಲ್ಲ. ಇದು ಇಲ್ಲಿನ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ. ಈ ಬಗ್ಗೆ ಸಾಕಷ್ಟು ಹೋರಾಟಗಳು ನಡೆದು ಸಾಕಷ್ಟು ಬಾರಿ  ಮನವಿ ಪತ್ರಗಳನ್ನು ಸಲ್ಲಿಸಿದ್ದರೂ ಜನಪ್ರತಿನಿಧಿಗಳು ಕ್ಯಾರೇ ಅಂದಿಲ್ಲ ಅನ್ನೋದು ಜನರ ದೂರು. ಇನ್ನು ಇಲ್ಲಿ ಸಾರ್ವಜನಿಕರ ಮನೆ ಬಾಗಿಲಲ್ಲೇ ಚರಂಡಿಗಳಿದ್ದು ಆ ಚರಂಡಿಗಳು ತೆರೆದ ಚರಂಡಿಗಳಾಗಿದ್ದು ಗಬ್ಬು ನಾರುತ್ತಿವೆ . ಇದರಿಂದ ನಾನಾ ರೋಗಗಳ ಹರಡುತ್ತಿದ್ದು ಜನರನ್ನು ಹೈರಾಣಾಗಿಸಿವೆ ಎಂಬುದು ಜನರ ನೋವು.

ಚರಂಡಿಗಳಲ್ಲಿ ಕಸ ಕಡ್ಡಿ ತುಂಬಿಕೊಂಡು ಕೊಳೆತು ನಾರುತ್ತಿದ್ದು ಅನೇಕ ಕ್ರಿಮಿ ಕೀಠಗಳು ಇದರಲ್ಲಿ ನೆಲೆಸುತ್ತಿದ್ದು ಮಾರಕ ರೋಗಗಳಿಗೆ ಕಾರಣವಾಗುತ್ತಿವೆ.  ತೇರದಾಳ ಗ್ರಾಮದಲ್ಲಿ ಏನೆಲ್ಲಾ ಸಮಸ್ಯೆಗಳಿವೆ ಎಂಬುದನ್ನು ಅಲ್ಲಿನ ಅಧಿಕಾರಿಗಳು ಕಣ್ಣು ತೆರೆದು ನೋಡಬೇಕು. ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಕೇವಲ ಓಟಿಗಾಗಿ ಎಚ್ಚರವಾಗುವುದಲ್ಲ ಕಷ್ಟಗಳಿಗೂ ಆಗಬೇಕು ಎಂಬುದು ಜನರ ಆಗ್ರಹ. ನೋಡಿದಿರಲ್ಲಾ ತೇರದಾಳ ಗ್ರಾಮದ ಜನರ ಸಮಸ್ಯೆಗಳನ್ನು ಸೋ ಇನ್ನಾದರೂ ಅಲ್ಲಿನ ಅಧಿಕಾರಿಗಳು ನಿದ್ದೆಯಿಂದ ಎದ್ದು ತಮ್ಮ ಜವಾಬ್ದಾರಿಗಳನ್ನು ಅರಿತುಕೊಳ್ಳಲಿ, ಸಮಸ್ಯೆಗಳಿಗೆ ಸ್ಪಂದಿಸಿ ಜನರಿಗೆ ನೆಮ್ಮದಿಯನ್ನು ನೀಡಲಿ .

Exit mobile version