ರಾಜ್ಯದಲ್ಲಿ ಹಿಜಾಬ್ ವಿಚಾರದಲ್ಲಿ ಸಾಕಷ್ಟು ಗೊಂದಲ ಸೃಷ್ಠಿ ಆಗಿದ್ದು ರಾಜ್ಯ ಸರ್ಕಾರವು ಕೂಡ ಶಾಲಾ ಕಾಲೇಜುಗಳಿಗೆ ರಜೆ ಫೋಷಿಸಿದೆ. ಈ ಕುರಿತು ಕರ್ನಾಟಕ ಉಚ್ಚ ನ್ಯಾಯಾಲಯದ ವಿಚಾರಣೆಯಲ್ಲಿರುತ್ತದೆ. ಈಗ ಇದೇ ವಿವಾದ ಸುಪ್ರಿಂ ಕೋರ್ಟ್ ನಲ್ಲಿ ತೀರ್ಪಿಗಾಗಿ ಬಂದಿದೆ. ಹಿರಿಯ ವಕೀಲರಾದ ಕಪಿಲ್ ಸಿಬಲ್ ಅವರು ಹೈ ಕೋರ್ಟ್ ನಲ್ಲಿ ವಿಚಾರಣೆಯಲ್ಲಿರುವ ಹಿಜಾಬ್ ಅರ್ಜಿಯನ್ನು ಸುಪ್ರಿಂ ಕೋರ್ಟ್ ಗೆ ವರ್ಗಾಯಿಸಲು ಮನವಿ ಅರ್ಜಿ ಸಲ್ಲಿಸಿದ್ದಾರೆ.

ಇದಕ್ಕೆ ಉತ್ತರಿಸಿದ ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣರವರು “ಇದು ಅತೀ ಶೀಘ್ರ” ಎಂದು ಉಲ್ಲೇಖಿಸಿ ಕರ್ನಾಟಕ ಹೈ ಕೋರ್ಟ್ ನಲ್ಲಿ ಇಂದು 2:30 PM ಗೆ ವಿಸ್ಕೃತ ಪೀಠದಲ್ಲಿ ವಿಚಾರಣೆ ಇರುವುದರಿಂದ, ಮೊದಲು ಕರ್ನಾಟಕ ಉಚ್ಚ ನ್ಯಾಯಾಲಯವು ವಿಚಾರಣೆ ನಡೆಸಲಿ ಎಂದು ಸಿ.ಜೆ.ಐ ಎನ್. ವಿ. ರಮಣ ಹೇಳಿದ್ದಾರೆ.

ಕರ್ನಾಟಕ ಉಚ್ಚ ನ್ಯಾಯಾಲಯದ ಪೂರ್ಣ ಸದಸ್ಯ ಪೀಠವು ಹಿಜಾಬ್ ವಿಚಾರಣೆಯನ್ನು ಇಂದು ನಡೆಸಲಿದೆ. ನಿನ್ನೆ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ಏಕ ಸದಸ್ಯ ಪೀಠವು ಸಾಂವಿಧಾನಿಕ ಹಕ್ಕುಗಳು ಮತ್ತು ವೈಯಕ್ತಿಕ ಕಾನೂನಿಗೆ ಸಂಬಂಧಿಸಿದ ಪ್ರಮುಖ ಪ್ರಶ್ನೆಗಳನ್ನು ಗಮನಿಸಿ ವಿಸ್ಕೃತ ಪೀಠಕ್ಕೆ ಅರ್ಜಿಗಳನ್ನು ವರ್ಗಾಯಿಸಿದ್ದರು.

ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಮತ್ತು ನ್ಯಾಯಮೂರ್ತಿ ಜೆ.ಎಂ ಖಾಜಿ ಅವರನ್ನೊಳಗೊಂಡ ಪೀಠವು ಇಂದು ಮಧ್ಯಾಹ್ನ 2.30 ಕ್ಕೆ ಅರ್ಜಿಗಳನ್ನು ವಿಚಾರಣೆಗೆ ತೆಗೆದುಕೊಂಡಿದೆ. ಒಟ್ಟಾರೆ ಇಂದು ತೀರ್ಪು ಪ್ರಕಟವಾಗಲಿದೆಯೋ? ಅಥವಾ ಮುಂದುಡುತ್ತದೆಯೊ? ಕಾದು ನೋಡಬೇಕಿದೆ.
Source Credits : ನವೀನ್ ಶಿವಮೊಗ್ಗ