ಕೊರೊನಾದಿಂದ ಮೃತಪಟ್ಟವರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಸೂಕ್ತ ಪರಿಹಾರ ನೀಡಲಿ: ಎಚ್.ಡಿ.ರೇವಣ್ಣ

ಬೆಂಗಳೂರು, ಜೂ. 09: ಕೊರೊನಾ ಸೋಂಕಿನಿಂದ ಮೃತಪಟ್ಟವರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕೆಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಆಗ್ರಹಿಸಿದ್ದಾರೆ.

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ಕರೋನಾ ಸೊಂಕಿನಿಂದ ಮೃತಪಟ್ಟವರ ಕುಟುಂಬಗಳಿಗೆ ರಾಷ್ಟ್ರೀಯ ವಿಪತ್ತು ನಿಧಿಯಿಂದ ಐದು ಲಕ್ಷ ರೂಪಾಯಿಗಳವರೆಗೆ ಪರಿಹಾರ ನೀಡಲು ಕಾನೂನಿನಲ್ಲಿ ಅವಕಾಶವಿದೆ. ಕೇಂದ್ರ ಸರ್ಕಾರ ಈ ವಿಷಯದಲ್ಲಿ ಜನರಿಗೆ ಅನುಕೂಲವಾಗುವಂತಹ ನಿರ್ಧಾರ ತೆಗೆದುಕೊಳ್ಳಬೇಕು. ಹಾಗೆಯೇ ಕರ್ನಾಟಕ ರಾಜ್ಯ ಸರ್ಕಾರ ಕೂಡ ಕನಿಷ್ಠ ಎರಡು ಲಕ್ಷ ರೂಪಾಯಿಗಳನ್ನು ಕರೋನಾದಿಂದ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಕರ್ನಾಟಕ ರಾಜ್ಯ ಸರ್ಕಾರ ಬಡವರಿಗೆ ಹಾಗೂ ಶ್ರಮಿಕವರ್ಗದವರಿಗೆ ಘೋಷಣೆ ಮಾಡಿರುವ ಪ್ಯಾಕೇಜ್’ನಲ್ಲಿ ನೀಡಲಾಗಿರುವ ಎರಡು ಸಾವಿರ ರೂಪಾಯಿ ಹಣದಲ್ಲಿ ಬಡವರ ಜೀವನ ನಿರ್ವಹಣೆ ಮಾಡಲು ಸಾಧ್ಯವಿಲ್ಲ. ತಿಂಗಳ ಮನೆ ಬಾಡಿಗೆಯ ಮೊತ್ತವೇ ಕನಿಷ್ಠ ಐದು ಸಾವಿರ ಇರುವಾಗ ಸರ್ಕಾರ ನೀಡುವ ಎರಡು ಸಾವಿರದಲ್ಲಿ ಬಡವರು ಹೇಗೆ ಜೀವನ ನಿರ್ವಹಣೆ ಮಾಡುತ್ತಾರೆ..??

ಸರ್ಕಾರ ಈ ಕೂಡಲೇ ಈ ಪ್ಯಾಕೇಜ್’ನ್ನು ಪರಿಷ್ಕರಣೆ ಮಾಡಿ ಕನಿಷ್ಠ ಹತ್ತು ಸಾವಿರ ರೂಪಾಯಿಗಳನ್ನಾದರೂ ಶ್ರಮಿಕ ವರ್ಗದವರಿಗೆ ನೀಡಬೇಕು. ಸರ್ಕಾರ ನೀಡುವುದು ಜನರ ದುಡ್ಡು ಜನರ ತೆರಿಗೆ ಹಣ, ಜನರು ಸಂಕಷ್ಟದಲ್ಲಿರುವ ಈ ಸಮಯದಲ್ಲಿ ಜನರನ್ನು ನಿರ್ಲಕ್ಷ್ಯದಿಂದ ಕಾಣುವುದನ್ನು ಬಿಟ್ಟು ಶ್ರಮಿಕರಿಗೆ ಗೌರವಪೂರ್ವಕವಾಗಿ ಪರಿಹಾರದ ಮೊತ್ತವನ್ನು ನೀಡಬೇಕು ಎಂದು ಒತ್ತಾಯಿಸಿದ್ದಾರೆ.

Exit mobile version