ಸೋಂಕಿನ ಅಪಾಯದ ಬಗ್ಗೆ ನಿರ್ಲಕ್ಷ್ಯತೋರದೆ, ಒಗ್ಗಟ್ಟಿನಿಂದ ಕೊರೊನಾ ಹಿಮ್ಮೆಟ್ಟಿಸೋಣ: ಸಿಎಂ‌ ಯಡಿಯೂರಪ್ಪ

ಬೆಂಗಳೂರು,ಜೂ.21: ಕೊರೊನಾ ಸೋಂಕಿನ ಅಪಾಯದ ಬಗ್ಗೆ ನಿರ್ಲಕ್ಷ್ಯ ತೋರದೆ, ಎಲ್ಲರೂ ಒಗ್ಗಟ್ಟಿನಿಂದ ಕೊರೊನಾ ಹಿಮ್ಮೆಟ್ಟಿಸೋಣ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮನವಿ ಮಾಡಿದ್ದಾರೆ.

ರಾಜ್ಯದಲ್ಲಿ ಕೊರೊನಾ ಪ್ರಕರಣ ಕಡಿಮೆಯಾಗಿರುವ ಪರಿಣಾಮ ರಾಜ್ಯದ ಹಲವು ಜಿಲ್ಲೆಗಳಲ್ಲಿ ಲಾಕ್ ಡೌನ್ ನಿಯಮಗಳನ್ನು ಸಡಿಲಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಕೊರೋನಾ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ವಿಧಿಸಲಾಗಿದ್ದ ನಿರ್ಬಂಧಗಳನ್ನು, ಜಿಲ್ಲಾವಾರು ಪರಿಸ್ಥಿತಿಗಳನ್ನು ಪರಿಗಣಿಸಿ, ಅದಕ್ಕನುಗುಣವಾಗಿ ಸಡಿಲಿಸಲಾಗುತ್ತಿದೆ. ಸಾಮಾನ್ಯ ಜನಜೀವನಕ್ಕೆ ಅನುಕೂಲ ಕಲ್ಪಿಸಲು ಈ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದ್ದು, ಸೋಂಕಿನ ಅಪಾಯದ ಕುರಿತು ನಿರ್ಲಕ್ಷ್ಯ ಖಂಡಿತಾ ಬೇಡ ಎಂದು ಮನವಿ ಮಾಡಿದ್ದಾರೆ.

ಅಲ್ಲದೇ, ಸಾಧ್ಯವಾದಷ್ಟು ಮನೆಯಲ್ಲೇ ಇರಿ, ಸುರಕ್ಷತಾ ಕ್ರಮಗಳನ್ನು ತಪ್ಪದೇ ಪಾಲಿಸಿ. ಹೊರಗೆ ಬರುವಾಗ ಮಾಸ್ಕ್ ಧರಿಸಿ, ಭೌತಿಕ ಅಂತರ ಕಾಯ್ದುಕೊಳ್ಳಿ, ಶುಚಿತ್ವ ಪಾಲಿಸಿ, ಸರದಿ ಬಂದಾಗ ಲಸಿಕೆ ಪಡೆದುಕೊಳ್ಳಿ. ಮುನ್ನೆಚ್ಚರಿಕೆ ವಹಿಸಿ, ನಿಯಮಗಳನ್ನು ಅನುಸರಿಸಿ, ಸರ್ಕಾರದೊಂದಿಗೆ ಸಹಕರಿಸಿ. ನಾವೆಲ್ಲರೂ ಒಗ್ಗಟ್ಟಿನಿಂದ ಕೊರೋನಾ ಹಿಮ್ಮೆಟ್ಟಿಸೋಣ ಎಂದು ತಿಳಿಸಿದ್ದಾರೆ.

Exit mobile version