ರಾಜಕೀಯ ಮಾಡೋಣ, ಕರ್ನಾಟಕ ಕೇಂದ್ರಿತ ರಾಜಕಾರಣ ಮಾಡೋಣ. ನಮ್ಮ ಮೇಲಿನ ಆರೋಪಗಳನ್ನು ಜನರ ತೀರ್ಮಾನಕ್ಕೆ ಬಿಡೋಣ: ಎಚ್ಡಿಕೆ

ಬೆಂಗಳೂರು, ಜು. 10: ಸಂಸದೆ ಸುಮಲತಾ ಅಂಬರೀಶ್ ಹಾಗೂ ಜೆಡಿಎಸ್ ನಾಯಕರ ನಡುವಿನ ಜಟಾಪಟಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರೋ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ನಾವು ರಾಜಕೀಯ ಮಾಡೋಣ, ಕರ್ನಾಟಕ ಕೇಂದ್ರಿತ ರಾಜಕಾರಣ ಮಾಡೋಣ. ನಮ್ಮ ಮೇಲಿನ ಆರೋಪಗಳನ್ನು ಜನರ ತೀರ್ಮಾನಕ್ಕೆ ಬಿಡೋಣ ಎಂದಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಕಾರ್ಯಕರ್ತ ಬಂಧುಗಳೇ, ಅಭಿಮಾನಿ ಅಣ್ಣ ತಮ್ಮಂದಿರೆ, ಅಕ್ಕ ತಂಗಿಯರೇ ನಾವು ಹೋರಾಟ ಮಾಡಬೇಕಾದ ವಿಚಾರ ಬಹಳಷ್ಟಿವೆ. ಕನ್ನಡ, ಕನ್ನಡಿಗ, ಕರ್ನಾಟಕಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ನಮಗೆ ಬಹುದೊಡ್ಡ ನ್ಯಾಯ ಸಿಗಬೇಕಿದೆ. ನನ್ನ ಹೋರಾಟವನ್ನು ಈಗಾಗಲೇ ಅತ್ತ ಕೇಂದ್ರೀಕರಿಸಿದ್ದೇನೆ. ನಾಡು ನುಡಿಗಾಗಿ ಹೋರಾಡೋಣ. ಬೇರೆಲ್ಲ ವಿಷಯಗಳನ್ನು ನಾವು ಉಪೇಕ್ಷಿಸೋಣ ಎಂದು ಸಲಹೆ ನೀಡಿದ್ದಾರೆ.

ಪ್ರಾದೇಶಿಕ ಪಕ್ಷವಾಗಿ ನಾವು ಮಾತಾಡುವುದಿದೆ, ಮಾತಾಡೋಣ. ಪ್ರಾದೇಶಿಕ ವಿಚಾರಗಳು ಇತ್ತೀಚೆಗೆ ಗೌಣವಾಗುತ್ತಿವೆ, ಅದರ ಬಗ್ಗೆ ಮಾತಾಡೋಣ. ಒಕ್ಕೂಟ ವ್ಯವಸ್ಥೆಯಲ್ಲಿ ನಮಗೆ ಆಗುತ್ತಿರುವ ಅನ್ಯಾಯಗಳ ಬಗ್ಗೆ ಕೂಗಿ ಹೇಳೋಣ. ಪ್ರಾದೇಶಿಕ ಅಸ್ಮಿತೆಯ ವಿಚಾರವನ್ನು ಜನರೊಂದಿಗೆ ಪ್ರಸ್ತಾಪಿಸೋಣ. ಆದರೆ, ಅನಗತ್ಯ ಮಾತು ಅನಗತ್ಯವಷ್ಟೆ. ನಾವು ಸಿಡಿಯಬೇಕಾದ ಪರಿಸ್ಥಿತಿ ಇದೆ, ಸಿಡಿಯೋಣ. ಕಾವೇರಿ ಜಲದ ಯೋಜನೆಗಳಿಗೆ ತಡೆಯೊಡ್ಡುತ್ತಿರುವವರ ವಿರುದ್ಧ ಸಿಡಿಯೋಣ. ನಮ್ಮ ನೆಲದಲ್ಲಿ ಕನ್ನಡ ಧ್ವಜವನ್ನು ಹಾರಿಸಲು ಬಿಡಲೊಲ್ಲದ ಪಟ್ಟಭದ್ರರ ವಿರುದ್ಧ ಸಿಡಿಯೋಣ ಎಂದಿದ್ದಾರೆ.

Exit mobile version