ಶ್ರೀಲಂಕಾ ವಿರುದ್ಧದ ಸೀಮಿತ ಓವರ್ ಗಳ ಕ್ರಿಕೆಟ್ ಸರಣಿ: ಕೊಲೊಂಬೊ ತಲುಪಿದ ಶಿಖರ್‌ ಧವನ್ ನಾಯಕತ್ವದ ಟೀಂ‌ ಇಂಡಿಯಾ

ಮುಂಬೈ,ಜೂ.29: ಶ್ರೀಲಂಕಾ ವಿರುದ್ಧ ನಡೆಯಲಿರುವ ಸೀಮಿತ ಓವರ್​ಗಳ ಕ್ರಿಕೆಟ್ ಸರಣಿಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಟೀಂ ಇಂಡಿಯಾ ಆಟಗಾರರ ತಂಡ ಶ್ರೀಲಂಕಾದ ಕೊಲಂಬೊ ತಲುಪಿದೆ.

ಶಿಖರ್ ಧವನ್ ನಾಯಕತ್ವದ ಟೀಂ ಇಂಡಿಯಾ, ಜುಲೈ 13 ರಿಂದ ಆರಂಭವಾಗಲಿರುವ ಏಕದಿನ ಹಾಗೂ ಟಿ20 ಸರಣಿಯಲ್ಲಿ ಶ್ರೀಲಂಕಾ‌ ವಿರುದ್ಧ ಮುಖಾಮುಖಿಯಾಗಲಿದೆ. ಯುವ ಆಟಗಾರರ ತಂಡದಲ್ಲಿ ಮೂವರು ಕನ್ನಡಿಗರು ಸೇರಿದಂತೆ ಆರು ಮಂದಿ ಅನ್ ಕ್ಯಾಪ್ಡ್ ಆಟಗಾರರಿದ್ದಾರೆ.

ವಿರಾಟ್ ಕೊಹ್ಲಿ ಸಾರಥ್ಯದ ಟೀಂ ಇಂಡಿಯಾ ಹಿರಿಯ ಆಟಗಾರರು, ಇಂಗ್ಲೆಂಡ್ ಪ್ರವಾಸದಲ್ಲಿರುವ ಕಾರಣದಿಂದ  ಶ್ರೀಲಂಕಾ ಪ್ರವಾಸಕ್ಕೆ ಹೊಸ ಆಟಗಾರರಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಅನುಭವಿ ಆಟಗಾರ ಶಿಖರ್ ಧವನ್ ಹೆಗಲಿಗೆ ತಂಡದ ನಾಯಕತ್ವದ ಜವಾಬ್ದಾರಿ ನೀಡಲಾಗಿದ್ದು, ವೇಗಿ ಭುವನೇಶ್ವರ್ ಕುಮಾರ್ ಅವರನ್ನು ತಂಡದ ಉಪ ನಾಯಕನಾಗಿ ನೇಮಿಸಲಾಗಿದೆ.

ಕೊಲಂಬೊ ತಲುಪಿರುವ ಟೀಂ ಇಂಡಿಯಾ ಆಟಗಾರರು ಜೂನ್ 29 ರಿಂದ ಜುಲೈ 1ರವರೆಗೆ ಕ್ವಾರಂಟೈನ್ ನಲ್ಲಿದ್ದು, ಜುಲೈ 5ರಿಂದ ಅಭ್ಯಾಸ ನಡೆಸಲಿದ್ದಾರೆ. ಸರಣಿ ಆರಂಭಕ್ಕೂ ಮುನ್ನ ಟೀಂ ಇಂಡಿಯಾ ಆಟಗಾರರು ಸ್ಥಳೀಯ ತಂಡದೊಂದಿಗೆ ಅಭ್ಯಾಸ ಪಂದ್ಯವಾಡಲಿದ್ದಾರೆ.

ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಮಿಂಚಿರುವ ಮನೀಷ್ ಪಾಂಡೆ, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ದೀಪಕ್ ಚಹರ್ ಜೊತೆಗೆ ಐಪಿಎಲ್‍ನಲ್ಲಿ ಅಬ್ಬರಿಸಿದ್ದ ದೇವದತ್ ಪಡಿಕ್ಕಲ್, ಋತುರಾಜ್ ಗಾಯಕ್ವಾಡ್, ನಿತೀಶ್ ರಾಣಾ, ರಾಹುಲ್ ಚಹರ್, ಚೇತನ್ ಸಕಾರಿಯಾ ತಂಡಕ್ಕೆ ಆಯ್ಕೆಯಾಗಿದ್ದಾರೆ. ಇವರ ಜೊತೆಗೆ ಆಲ್‍ರೌಂಡರ್ ಕೃಷ್ಣಪ್ಪ ಗೌತಮ್, ಸ್ಪಿನ್ನರ್ ಕುಲದೀಪ್ ಯಾದವ್, ವರುಣ್ ಚಕ್ರವರ್ತಿ ಮತ್ತು ವೇಗಿ ನವದೀಪ್ ಸೈನಿ ಕೂಡ ತಂಡದಲ್ಲಿದ್ದಾರೆ.

Exit mobile version