ಏನಿದು ಫ್ಯಾಟ್ ಸರ್ಜರಿ? ಇದು ಕೆಲವರಲ್ಲಿ ಪ್ರಾಣಕ್ಕೆ ಕುತ್ತು ತರಲು ಕಾರಣವೇನು? ಇಲ್ಲಿದೆ ಉತ್ತರ!

Liposuction Surgery

ಇತ್ತೀಚಿಗೆ ಟ್ರೆಂಡ್ ಆಗಿರುವ ಫ್ಯಾಟ್ ರಿಮೂವಿಂಗ್ ಸರ್ಜರಿಯ(Fat Removing Surgery) ಬಗ್ಗೆ ನಿಮಗೆಷ್ಟು ಗೊತ್ತು? ಅಷ್ಟಕ್ಕೂ ಏನಿದು ಫ್ಯಾಟ್ ಸರ್ಜರಿ ಎಂದರೆ?

ಇದು ದೇಹದಲ್ಲಿನ ಹೆಚ್ಚಿನ ಪ್ರಮಾಣದ ಕೊಬ್ಬನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆಯುವ ವಿಧಾನ. ಕೊಬ್ಬು ತೆಗೆಯುವ ಶಸ್ತ್ರಚಿಕಿತ್ಸೆ ಸಾಮಾನ್ಯವಾಗಿ ಎರಡು ವಿಧವಾಗಿದೆ. ಬಾರಿಯಾಟ್ರಿಕ್(Bariatric) ಮತ್ತು ಕಾಸ್ಮೆಟಿಕ್ ಲಿಪೊಸೆಕ್ಷನ್(Cosmetic Liposection). ಬಾರಿಯಾಟ್ರಿಕ್ ಶಸ್ತ್ರಚಿಕಿತ್ಸೆಯ ಉದ್ದೇಶವು ತೂಕವನ್ನು ಕಡಿಮೆ ಮಾಡುವುದು ಮತ್ತು ತೂಕ-ಸಂಬಂಧಿತ ಅಸ್ವಸ್ಥತೆಗಳು ಅಥವಾ ಸಹ-ಅಸ್ವಸ್ಥತೆಗಳನ್ನು ನಿವಾರಿಸುವುದು. ಆಹಾರ ಮತ್ತು ವ್ಯಾಯಾಮವು ವ್ಯಕ್ತಿಯ ದೇಹದ ತೂಕವನ್ನು ನಿಯಂತ್ರಿಸುವಲ್ಲಿ ವಿಫಲವಾದಾಗ ಅಥವಾ ಅಧಿಕ ದೇಹದ ತೂಕದಿಂದಾಗಿ ಗಂಭೀರವಾದ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವಾಗ ಬಾರಿಯಾಟ್ರಿಕ್ ಸರ್ಜರಿಯನ್ನು ವೈದ್ಯರು ಶಿಫಾರಸು ಮಾಡುತ್ತಾರೆ.


ಬಾರಿಯಾಟ್ರಿಕ್ ಶಸ್ತ್ರಚಿಕಿತ್ಸೆಯು ಅನೇಕ ಪ್ರಯೋಜನಗಳನ್ನ ನೀಡುವುದರ ಜೊತೆಗೆ, ಎಲ್ಲಾ ರೀತಿಯ ತೂಕ ನಷ್ಟ ಶಸ್ತ್ರಚಿಕಿತ್ಸೆಯು ಗಂಭೀರ ಅಪಾಯಗಳು ಮತ್ತು ಅಡ್ಡ ಪರಿಣಾಮಗಳನ್ನು ಉಂಟುಮಾಡುವ ಸಾಧ್ಯತೆಗಳಿವೆ. ಅಲ್ಲದೆ, ಈ ಚಿಕಿತ್ಸೆಯ ನಂತರ ಆಹಾರ ಕ್ರಮದಲ್ಲಿ ಶಾಶ್ವತ ಆರೋಗ್ಯಕರ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಬಾರಿಯಾಟ್ರಿಕ್ ಶಸ್ತ್ರಚಿಕಿತ್ಸೆಯು ದೀರ್ಘಾವಧಿಯ ಯಶಸ್ಸು ನೀಡಬೇಕಾದರೆ ನಿಯಮಿತ ವ್ಯಾಯಾಮ ಮಾಡಬೇಕು. ಬಾಡಿ ಮಾಸ್ ಇಂಡೆಕ್ಸ್ 40 ಅಥವಾ ಅದಕ್ಕಿಂತ ಹೆಚ್ಚಿಗೆ ಇರುವವರಿಗೆ,

ತೀವ್ರ ಸ್ಥೂಲಕಾಯತೆ ಇರುವವರಿಗೆ ಮತ್ತು ಟೈಪ್-2 ಮಧುಮೇಹ, ಅಧಿಕ ರಕ್ತದೊತ್ತಡ ಅಥವಾ ತೀವ್ರ ನಿದ್ರೆಯಲ್ಲಿ ಉಸಿರುಕಟ್ಟುವಿಕೆ ಮುಂತಾದ ಗಂಭೀರ ತೂಕ-ಸಂಬಂಧಿತ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವವರಿಗೆ ಈ ಚಿಕಿತ್ಸೆ ಅಷ್ಟು ಒಳ್ಳೆಯದಲ್ಲ.
ಇನ್ನೊಂದು ವಿಧದ ಸರ್ಜರಿ ಎಂದರೆ, ಕಾಸ್ಮೆಟಿಕ್ ಲಿಪೊಸಕ್ಷನ್. ಈ ಕೊಬ್ಬು ತೆಗೆಯುವ ಶಸ್ತ್ರಚಿಕಿತ್ಸೆಯನ್ನು ಸ್ಥಳೀಯ ಅರಿವಳಿಕೆ ಅಡಿಯಲ್ಲಿ ಮಾಡಲಾಗುತ್ತದೆ. ಆದರೆ ಬಾರಿಯಾಟ್ರಿಕ್ ಶಸ್ತ್ರಚಿಕಿತ್ಸೆಯನ್ನು ಸಾಮಾನ್ಯ ಅರಿವಳಿಕೆ ಅಡಿಯಲ್ಲಿ ಮಾಡಲಾಗುತ್ತದೆ.

ಎರಡೂ ಸಂದರ್ಭಗಳಲ್ಲಿ, ಹೊಟ್ಟೆ, ಪೃಷ್ಠದ ಭಾಗ, ಎದೆ, ಒಳ ಮೊಣಕಾಲುಗಳು, ಸೊಂಟ, ಪಾರ್ಶ್ವಗಳು, ಕಂಠರೇಖೆ ಮತ್ತು ಗಲ್ಲದ ಅಡಿ ಪ್ರದೇಶ, ತೊಡೆಗಳು, ಹೊರ ತೊಡೆಗಳು ಮತ್ತು ಒಳ ತೊಡೆಗಳು, ಮೇಲಿನ ತೋಳುಗಳಿಗೆ ಈ ಚಿಕಿತ್ಸೆ ಮಾಡಲಾಗುತ್ತದೆ.
ಕಾಸ್ಮೆಟಿಕ್ ಕೊಬ್ಬು ತೆಗೆಯುವ ಶಸ್ತ್ರಚಿಕಿತ್ಸೆಗಳ ಮುಖ್ಯ ಅಡ್ಡಪರಿಣಾಮ ಎಂದರೆ, ಎಂಬಾಲಿಸಮ್ ಅಥವಾ ರಕ್ತ ಹೆಪ್ಪುಗಟ್ಟುವಿಕೆ. ಕಾಸ್ಮೆಟಿಕ್ ಲಿಪೊಸಕ್ಷನ್ ಗಿಂತ ಬಾರಿಯಾಟ್ರಿಕ್ ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ಉಂಟಾಗುವ ತೊಡಕುಗಳ ಅಪಾಯವು ಎರಡು ಪ್ರತಿಶತದಷ್ಟು ಕಡಿಮೆಯಾಗಿರುತ್ತದೆ.

ಕೆಲವೊಮ್ಮೆ ಅರಿವಳಿಕೆಯಿಂದ ಅಡ್ಡಪರಿಣಾಮವುಂಟಾಗಿ, ಇದು ಹೃದಯಾಘಾತವನ್ನು ತೀವ್ರವಾಗಿ ಪ್ರೇರೇಪಿಸುತ್ತದೆ. ಇದು ಜೀವಕ್ಕೆ ಅಪಾಯಕಾರಿ. ಜೊತೆಗೆ ನಿದ್ರೆಯಲ್ಲಿ ಉಸಿರುಕಟ್ಟುವಿಕೆಗೆ ಕಾರಣವಾಗಬಹುದು. ಶ್ವಾಸಕೋಶದ ಕಾಯಿಲೆ ಇರುವ ರೋಗಿಗೆ ಸರಿಯಾದ ಸಿದ್ಧತೆಯಿಲ್ಲದೆ ಶಸ್ತ್ರಚಿಕಿತ್ಸೆ ನಡೆಸಿದರೆ, ಶ್ವಾಸಕೋಶದಲ್ಲಿ ನೀರು ಸಂಗ್ರಹವಾಗಿ ಅವರ ಜೀವಕ್ಕೆ ಕಂಟಕ ತರಬಹುದು.
ಮುಖ್ಯವಾಗಿ ಲಿಪೊಸಕ್ಷನ್ ಶಸ್ತ್ರಚಿಕಿತ್ಸೆಯಲ್ಲಿ ಕೊಬ್ಬಿನ ಕೋಶಗಳನ್ನು ಶಾಶ್ವತವಾಗಿ ತೆಗೆದುಹಾಕಿ ದೇಹದ ಆಕಾರವನ್ನು ಬದಲಾಯಿಸಲಾಗುತ್ತದೆ.

ಆದರೆ, ಶಸ್ತ್ರಚಿಕಿತ್ಸೆಯ ನಂತರ ರೋಗಿಯು ಆರೋಗ್ಯಕರ ಜೀವನಶೈಲಿಯನ್ನು ನಡೆಸದಿದ್ದರೆ, ಉಳಿದ ಕೊಬ್ಬಿನ ಕೋಶಗಳು ದೊಡ್ಡದಾಗಿ ಬೆಳೆಯುವ ಅಪಾಯವಿದೆ. ಜೊತೆಗೆ ಸೋಂಕು, ಮರಗಟ್ಟುವಿಕೆ ಸೇರಿದಂತೆ ಕೆಲವು ಅಪಾಯಗಳಿವೆ. ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ಕೊಬ್ಬನ್ನು ತೆಗೆದುಹಾಕಿದರೆ, ಚರ್ಮದಲ್ಲಿ ಗಂಟುಗಳಾಗುವ ಸಾಧ್ಯತೆಯಿರುತ್ತದೆ. ಹಾಗಾಗಿ ವ್ಯಾಯಾಮ, ವಾಕಿಂಗ್, ಆರೋಗ್ಯಕರವಾದ ಆಹಾರ ಪದ್ದತಿಯ ಮೂಲಕ ನೈಸರ್ಗಿಕವಾಗಿಯೇ ದೇಹದ ತೂಕವನ್ನು ನಿಯಂತ್ರಿಸುವುದು ಒಳ್ಳೆಯದು.

Exit mobile version