ಗೋವಾ, ಏ. 29: ಗೋವಾದಲ್ಲಿ ಸೋಂಕು ಹೆಚ್ಚುತ್ತಿರುವ ಹಿನ್ನಲೆ ಅಲ್ಲಿನ ಸರ್ಕಾರ ಐದು ದಿನಗಳ ಕಾಲ ಲಾಕ್ಡೌನ್ ಘೋಷಣೆ ಮಾಡಿ ಆದೇಶ ಹೊರಡಿಸಿದೆ. ರಾಜ್ಯದಲ್ಲಿ ಸೋಂಕಿಗೆ ತುತ್ತಾಗಿ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆ ಈ ಕ್ರಮಕ್ಕೆ ಮುಂದಾಗಲಾಗಿದೆ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ತಿಳಿಸಿದ್ದಾರೆ. ಏಪ್ರಿಲ್ 29ರಿಂದ ಮೇ 3ರವರೆಗೆ ರಾಜ್ಯದಲ್ಲಿ ಲಾಕ್ಡೌನ್ ಇರಲಿದ್ದು, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಈ ಲಾಕ್ಡೌನ್ ವೇಳೆ ಅಗತ್ಯ ಸೇವೆ ಹಾಗೂ ಕೈಗಾರಿಕೆಗಳನ್ನು ಹೊರತುಪಡಿಸಿ ಸಾರ್ವಜನಿಕ ಸಾರಿಗೆಯನ್ನು ಕೂಡ ಬಂದ್ ಮಾಡಲಾಗಿದೆ. ಇಂದು ಸಂಜೆಯಿಂದಲೇ ರಾಜ್ಯದಲ್ಲಿ ಲಾಕ್ಡೌನ್ ಜಾರಿಯಾಗಲಿದ್ದು, ಸೋಮವಾರ ಬೆಳಗಿನವರೆಗೆ ಇದು ಜಾರಿಯಲಿರಲಿದೆ
ಕೊರೋನಾ ಸೋಂಕಿನ ಸರಪಳಿ ಮುರಿಯಲು ಲಾಕ್ಡೌನ್ ಅನಿವಾರ್ಯವಾಗಿದೆ. ಮಂಗಳವಾರ ರಾಜ್ಯದಲ್ಲಿ 2, 110 ಹೊಸ ಸೋಂಕು ಪ್ರಕರಣ ಪತ್ತೆಯಾಗಿದ್ದು, 31 ಜನರು ಸಾವನ್ನಪ್ಪಿದ್ದಾರೆ. ಇದುವರೆಗೂ ರಾಜ್ಯದಲ್ಲಿ ಕೋವಿಡ್ನಿಂದಾಗಿ 81, 908 ಮಂದಿ ಸಾವನ್ನಪ್ಪಿದ್ದಾರೆ.
ಲಾಕ್ಡೌನ್ ವೇಳೆ ವೀಕ್ಲಿ ಮಾರ್ಕೆಟ್ಗೆ ಯಾವುದೇ ಅವಕಾಶ ಇರುವುದಿಲ್ಲ ಕ್ಯಾಸಿನೋಗಳು ಮುಚ್ಚಲಿವೆ. ಕೈಗಾರಿಕೆಗಳು ಕಾರ್ಯನಿರ್ವಹಿಸಲಿದೆ. ಲಾಕ್ಡೌನ್ನಿಂದಾಗಿ ಸಾಮಾನ್ಯ ಕಾರ್ಮಿಕರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ಸೋಂಕು ಹೆಚ್ಚಾಗುತ್ತಿರುವ ಹಿನ್ನಲೆ ಜನರು ಅಗತ್ಯ ಮುನ್ನೆಚ್ಚರಿಕೆ ಕ್ರಮವಹಿಸಬೇಕು. ಸೋಂಕಿನ ಲಕ್ಷಣ ಕಾಣಿಸಿಕೊಂಡವರು ತಕ್ಷಣಕ್ಕೆ ವೈದ್ಯಕೀಯ ಪರೀಕ್ಷೆಗೆ ಒಳಗಾಗುವಂತೆ ಸಿಎಂ ಪ್ರಮೋದ್ ಸಾವಂತ್ ಮನವಿ ಮಾಡಿದ್ದಾರೆ. ಅಲ್ಲದೇ, ಕೋವಿಡ್ ಟ್ರಿಟ್ಮೆಟ್ ಪ್ರೋಟೋ ಕಾಲ್ ಪ್ರಕಾರ, ವರದಿಯ ಫಲಿತಾಂಶಕ್ಕೆ ಕಾಯುವ ಬದಲು ಪರೀಕ್ಷೆಯ ಸಮಯದಲ್ಲಿ ಜನರಿಗೆ ಔಷಧಿ ನೀಡಲಾಗುವುದು ಎಂದಿದ್ದಾರೆ.
ಲಾಕ್ಡೌನ್ ವೇಳೆಯಲ್ಲಿಯೂ ಲಸಿಕೆ ಕೇಂದ್ರಗಳು ಕಾರ್ಯನಿರ್ವಹಿಸುತ್ತವೆ. ಜನರು ಅಪಾಯಿಂಟ್ಮೆಂಟ್ ಮೂಲಕ ಲಸಿಕೆಗೆ ಬುಕ್ ಮಾಡಿಕೊಳ್ಳಬಹುದಾಗಿದೆ.