ಭಾರತೀಯ ಸೇನೆಯ ನಂ. 2 ಸ್ಥಾನಕ್ಕೆ ಕನ್ನಡಿಗ ಲೆ.ಜ. ರಾಜು ನೇಮಕ!

BS Raju

ಭಾರತೀಯ ಸೇನೆಯ(Indian Army) ಉಪಮುಖ್ಯಸ್ಥರಾಗಿ ಕರ್ನಾಟಕದ ಬಗ್ಗವಳ್ಳಿ ಸೋಮಶೇಖರ್ ರಾಜು(Bhaggavalli Somashekar Raju) ಅವರು ನೇಮಕವಾಗಿದ್ದಾರೆ.

ಈ ಮೂಲಕ ಭಾರತೀಯ ಸೇನೆಯ ನಂಬರ್ 2 ಸ್ಥಾನ ಕನ್ನಡಿಗರಿಗೆ ದಕ್ಕಿದೆ. ಅನೇಕ ವರ್ಷಗಳ ನಂತರ ಭಾರತೀಯ ಸೇನೆಯಲ್ಲಿ ಉನ್ನತ ಸ್ಥಾನಕ್ಕೇರಿದ ಕೀರ್ತಿ ಲೆ.ಜ. ರಾಜು ಸಲ್ಲುತ್ತದೆ. ಈ ಹಿಂದೆ ಬಾಗಲಕೋಟೆಯ ಲೆ.ಜ. ರಮೇಶ್ ಹಲಗಲಿ ಅವರು ಭಾರತೀಯ ಸೇನೆಯ ಉಪಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. ತದನಂತರ ಭಾರತೀಯ ಸೇನೆಯಲ್ಲಿ ಅತ್ಯಂತ ಉನ್ನತ ಹುದ್ದೆಗೆ ಲೆ.ಜ. ರಾಜು ಆಯ್ಕೆಯಾಗಿದ್ದಾರೆ.

ಇನ್ನು ಚಿಕ್ಕಮಗಳೂರು ಜಿಲ್ಲೆಯವರಾದ ಸೋಮಶೇಖರ್ ರಾಜು ಅವರು, ವಿಜಯಪುರದ ಸೈನಿಕ ಶಾಲೆಯಲ್ಲಿ ವಿದ್ಯಾಭ್ಯಾಸ ನಡೆಸಿದ್ದಾರೆ. ಸೈನಿಕ ಶಾಲೆಯ ಮೂಲಕ ಎನ್‍ಡಿಎ ಪರೀಕ್ಷೆ ಪಾಸು ಮಾಡಿ, ಪುಣೆಯ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಲ್ಲಿ ಪದವಿ ಪೂರೈಸಿದ ನಂತರ 1984 ಡಿ. 15ರಂದು ಜಾಟ್ ರೆಜಿಮೆಂಟ್‍ನಲ್ಲಿ ತಮ್ಮ ಸೇವೆಯನ್ನು ಪ್ರಾರಂಭಿಸಿದ್ದರು. ಕಾಶ್ಮೀರ ಕಣಿವೆಯುದ್ದಕ್ಕೂ ನಡೆದ ವಿಶೇಷ ಕಾರ್ಯಾಚರಣೆಗಳ ಮೇಲ್ವಿಚಾರಣೆಯನ್ನು ಲೆ.ಜ. ರಾಜು ನಡೆಸಿದ್ದರು.

ಲೆ.ಜ. ರಾಜು ಅವರು ಸದ್ಯ ಭಾರತೀಯ ಸೇನೆಯ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದಕ್ಕೂ ಮುನ್ನ ಪೂರ್ವ ಲಡಾಕ್‍ನ ಸಂಪೂರ್ಣ ಸೇನಾ ಕಾರ್ಯಾಚರಣೆಯ ಮುಖ್ಯಸ್ಥರಾಗಿದ್ದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ನಡೆಸಿದ ‘ಆಪರೇಷನ್ ಪರಾಕ್ರಮ’ ಕಾರ್ಯಾಚರಣೆಯ ನೇತೃತ್ವವನ್ನು ಲೆ.ಜ. ರಾಜು ವಹಿಸಿಕೊಂಡಿದ್ದರು. ಕಾಶ್ಮೀರ ಕಣಿವೆಯಲ್ಲಿನ ಉಗ್ರರ ಹೆಡೆಮುರಿ ಕಟ್ಟುವಲ್ಲಿ ಲೆ.ಜ. ರಾಜು ಯಶಸ್ವಿಯಾಗಿದ್ದರು.

ಇನ್ನು ಲೆ.ಜ. ರಾಜು ಅವರು ಸುಧೀರ್ಘ 38 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ ಭಾರತೀಯ ಸೇನಾ ಮುಖ್ಯಸ್ಥರಾಗಿರುವ ಎಂ.ಎಂ ನರಾವಣೆ ಅವರು ನಿವೃತ್ತರಾಗಲಿದ್ದು, ಆ ಸ್ಥಾನವನ್ನು ಉಪಸೇನಾಮುಖ್ಯಸ್ಥರಾಗಿರುವ ಮನೋಜ್ ಪಾಂಡೆ ವಹಿಸಿಕೊಳ್ಳಲಿದ್ದಾರೆ. ಹೀಗಾಗಿ ಉಪಸೇನಾಮುಖ್ಯಸ್ಥರಾಗಿ ಕನ್ನಡಿಗ ಲೆ.ಜ. ರಾಜು ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಮೇ 1ರಂದು ಲೆ.ಜ. ರಾಜು ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ.

Exit mobile version