ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕರ್ನಾಟಕದ ಖ್ಯಾತ ಅಥ್ಲೀಟ್‌ ಎಂ.ಆರ್. ಪೂವಮ್ಮ

ಬೆಂಗಳೂರು ಡಿ 30 : ಭಾರತದ ಖ್ಯಾತ  ಅಥ್ಲೀಟ್‌, ಏಶ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಕರ್ನಾಟಕದ ಪೂವಮ್ಮ ಅವರು ಕೇರಳದ  ಜಿತಿನ್ ಪೌಲ್ ಅವರೊಂದಿಗೆ ಬುಧವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮಂಗಳೂರಿನ ಹೊರ ವಲಯದ ಅಡ್ಯಾರ್ ಗಾರ್ಡನ್‌ನಲ್ಲಿ ಕೊಡವ ಸಂಪ್ರದಾಯದಂತೆ ಮದುವೆ ಸಮಾರಂಭ ನೆರವೇರಿತು. ಜನವರಿ 1 ರಂದು ಕೇರಳದ ತ್ರಿಶ್ಶೂರ್‌ನಲ್ಲಿ ಮತ್ತೊಂದು ಕಾರ್ಯಕ್ರಮ ಜರುಗಲಿದೆ. ಇದೀಗ ಪೂವಮ್ಮ ಮತ್ತು ಜಿತಿನ್ ಕ್ರೀಡಾ ದಂಪತಿಗಳ ಪಟ್ಟಿಗೆ ಹೊಸ ಸೇರ್ಪಡೆಯಾಗಿದ್ದಾರೆ. ಕೊಡಗು ಮೂಲದ 31 ವರ್ಷದ ಪೂವಮ್ಮ 2014ರ ಇಂಚೋನ್ ಏಷ್ಯಾಡ್‍ನಲ್ಲಿ 1 ಚಿನ್ನ, 1 ಕಂಚು ಮತ್ತು 2018ರ ಜಕಾರ್ತ್ ಏಷ್ಯಾಡ್‍ನಲ್ಲಿ 2 ಚಿನ್ನ ಜಯಿಸಿದ್ದರು.

ಪೂವಮ್ಮ ಒಲಿಂಪಿಕ್ಸ್‌ನಲ್ಲಿ 2 ಬಾರಿ ಮತ್ತು ಅಂತರಾಷ್ಟ್ರೀಯ ಅಥ್ಲೀಟ್ ಕೂಟದಲ್ಲಿ 4 ಬಾರಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಜಿತಿನ್ ಪೌಲ್ 400 ಮೀಟರ್ ಅಡೆತಡೆ ಓಟದ ಸ್ಪರ್ಧೆಯಲ್ಲಿ ಚಾಂಪಿಯನ್ ಆಗಿದ್ದು, ಏಷ್ಯನ್ ಗೇಮ್ಸ್ ಮತ್ತು ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.

ಮಂಗಳೂರು ಹೊರವಲಯದ ಅಡ್ಯಾರ್ ಗಾರ್ಡನ್‍ನ ವಿ.ಕೆ.ಶೆಟ್ಟಿ ಅಡಿಟೋರಿಯಂನಲ್ಲಿ ಕೊಡವ ಸಂಪ್ರದಾಯದಂತೆ ಮದುವೆ ನೆರವೇರಿತು. ಪೂವಮ್ಮ ಅವರ ತಂದೆ ಮಚ್ಚೆಟ್ಟಿರ ಜಿ. ತಮ್ಮಯ್ಯ (ರಾಜು), ತಾಯಿ ಜಾನಕಿ (ಜಾಜಿ), ಜಿತಿನ್ ಪೌಲ್ ಅವರ ತಾಯಿ ಜಾನ್ಸಿ ಸೇರಿದಂತೆ ಕುಟುಂಬದವರು, ಬಂಧುಮಿತ್ರರು ಸ್ನೇಹಿತರು ಈ ವೇಳೆ ಉಪಸ್ಥಿತರಿದ್ದರು.  ಜನವರಿ ಒಂದರಂದು ತ್ರಿಶೂರ್‌ನಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ.

Exit mobile version