ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್​ಮುಖ್ ರಾಜೀನಾಮೆ: ತನಿಖೆಗೆ ಕೋರ್ಟ್ ಆದೇಶ

ಮುಂಬೈ, ಏ. 05: ಸದ್ಯ ಅಮಾನತು ಆಗಿರುವ, ಮುಂಬೈ ಮಾಜಿ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಬಳಿ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್​ಮುಖ್ ಪ್ರತೀ ತಿಂಗಳು ₹ 100 ಕೋಟಿ ಸಂಗ್ರಹಿಸುವಂತೆ ಒತ್ತಡ ಹಾಕಿದ್ದರು ಎಂಬ ಪ್ರಕರಣಕ್ಕೆ ಸಂಬಂಧಿಸಿ ಬಾಂಬೆ ಹೈಕೋರ್ಟ್ ಅನಿಲ್ ದೇಶ್​ಮುಖ್ ವಿರುದ್ಧ ತನಿಖೆಗೆ ಆದೇಶಿಸಿತ್ತು. ಈ ಬೆನ್ನಲ್ಲೇ ಎನ್​ಸಿಪಿ ನಾಯಕರೂ ಆಗಿರುವ ಅನಿಲ್ ದೇಶ್​ಮುಖ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್​ಮುಖ್ ವಿರುದ್ಧ ಪ್ರತಿ ತಿಂಗಳು ₹ 100 ಕೋಟಿ ಹಣ ವಸೂಲಿ ಒತ್ತಡ ಆರೋಪಿಸಿ ಪತ್ರ ಬರೆದಿದ್ದ ಪರಮ್​ವೀರ್ ಸಿಂಗ್ ಪ್ರಕರಣ ಸಿಬಿಐ ಮೆಟ್ಟಿಲೇರಿದೆ. 15 ದಿನದ ಒಳಗೆ ಪ್ರಾಥಮಿಕ ತನಿಖೆ ನಡೆಸಿ ವರದಿ ನಿಡುವಂತೆ ಸಿಬಿಐಗೆ ಬಾಂಬೆ ಹೈಕೋರ್ಟ್ ಸೂಚನೆ ನೀಡಿದೆ.

ಕೆಲ ದಿನಗಳ ಹಿಂದೆ ಮುಕೇಶ್ ಅಂಬಾನಿ ಮನೆ ಮುಂದೆ ಸ್ಪೋಟಕ ಹೊತ್ತಿದ್ದ ಕಾರು ಪತ್ತೆ ಪ್ರಕರಣ ರೋಚಕ ತಿರುವು ಪಡೆದಿತ್ತು. ಸಸ್ಪೆಂಡ್ ಆಗಿರುವ ಎಎಸ್ಐ​ ಸಚಿನ್ ವಾಜೆ ಬಳಿ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶಮುಖ್, ಬಾರ್ ಮತ್ತು ರೆಸ್ಟೊರೆಂಟ್​​ಗಳಿಂದ ಪ್ರತಿ ತಿಂಗಳು ₹ 100 ಕೋಟಿ ಹಣ ವಸೂಲಿ ಮಾಡುವಂತೆ ಒತ್ತಡ ಹೇರಿದ್ದರು ಎಂದು ಮುಂಬೈ ಮಾಜಿ ಪೊಲೀಸ್ ಆಯುಕ್ತ ಪರಮ್​ವೀರ್ ಸಿಂಗ್ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆಗೆ ಇಂದು ಪತ್ರ ಬರೆದಿದ್ದರು.

Exit mobile version