ರಾಜ್ಯದಲ್ಲಿ ಮಹಾಮಾರಿ ಕೊರೊನಾ ಆರ್ಭಟ: “ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ” ಕಾರ್ಯಕ್ರಮಕ್ಕೆ ಬ್ರೇಕ್

ಬೆಂಗಳೂರು, ಏ. 08: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಸಾರ್ವಜನಿಕರಲ್ಲಿ ಭಾರೀ ಆತಂಕ ಸೃಷ್ಟಿಸಿದೆ. ಈ ನಡುವೆ ಸರ್ಕಾರದ ಆಡಳಿತದ ಮೇಲೂ ಕೊರೊನಾ ಕರಿನೆರಳು ಆವರಿಸಿದ್ದು, ಮಹಾಮಾರಿಯ ಆರ್ಭಟ ಜೋರಾಗಿರುವುದರ ಪರಿಣಾಮ ರಾಜ್ಯದಲ್ಲಿ ನಡೆಸಲಾಗುತ್ತಿದ್ದ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯಕ್ಕೆ ಬ್ರೇಕ್‌ ಬಿದ್ದಿದೆ.

ಗ್ರಾಮೀಣ ಜನರ ಸಮಸ್ಯೆಗಳನ್ನು ಆಲಿಸುವ ಹಾಗೂ ಸ್ಥಳದಲ್ಲೇ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕಂದಾಯ ಸಚಿವ ಆರ್.‌ ಅಶೋಕ್‌ ಸೂಚನೆಯಂತೆ ರಾಜ್ಯದಲ್ಲಿ “ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ” ಎಂಬ ಹೆಸರಿನೊಂದಿಗೆ ಗ್ರಾಮ ವಾಸ್ತವ್ಯ ನಡೆಸಲಾಗುತ್ತಿತ್ತು. ಪ್ರತೀ ತಿಂಗಳ 3ನೇ ಶನಿವಾರದಂದು ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ನಡೆಸಿ ಅಲ್ಲಿನ ಸಮಸ್ಯೆಗಳ ಬಗ್ಗೆ ಗಮನವಹಿಸಿ, ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದರು. ಈ ಕಾರ್ಯಕ್ರಮಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಹ ವ್ಯಕ್ತವಾಗಿತ್ತು.

ಆದರೆ ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಕೊರೊನಾ ಮಹಾಮಾರಿ ಆತಂಕ ಹೆಚ್ಚುತ್ತಿದ್ದು, ಸೋಂಕು ಹರಡುವುದನ್ನು ತಡೆಯುವ ಸಲುವಾಗಿ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಕೊರೊನಾ ಹೆಚ್ಚಳದಿಂದಾಗಿ ಸಾರ್ವಜನಿಕರು ಗುಂಪುಗೂಡುವುದನ್ನ ತಡೆಗಟ್ಟುವ ಸಲುವಾಗಿ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಸ್ಥಗಿತಗೊಳಿಸಲಾಗಿದೆ.

ಪ್ರಮುಖವಾಗಿ ರಾಜ್ಯದ ಹತ್ತು ಜಿಲ್ಲೆಯ ಜಿಲ್ಲಾಧಿಕಾರಿಗಳ ಗ್ರಾಮವಾಸ್ತವ್ಯ ಸ್ಥಗಿತಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಈ ಹಿನ್ನೆಲೆಯಲ್ಲಿ ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಹಾಸನ, ಬೀದರ್, ದಕ್ಷಿಣ ಕನ್ನಡ, ಕಲಬುರಗಿ, ಮಂಡ್ಯ, ಮೈಸೂರು, ಹಾಸನ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಗ್ರಾಮವಾಸ್ತವ್ಯ ಸ್ಥಗಿತಗೊಳಿಸಲಾಗಿದೆ. ಈ ಕುರಿತು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್‌. ಮಂಜುನಾಥ್‌ ಪ್ರಸಾದ್‌ ಆದೇಶ ಹೊರಡಿಸಿದ್ದಾರೆ. ‌

Exit mobile version