2 ವಾರದಲ್ಲಿ 2ನೇ ಬಾರಿಗೆ ಮಹಾತ್ಮ ಗಾಂಧಿ ಪ್ರತಿಮೆ ಧ್ವಂಸ!

New York

ನ್ಯೂಯಾರ್ಕ್‌ : ಈ ತಿಂಗಳು ಮಹಾತ್ಮ ಗಾಂಧಿ(Mahatma Gandhi) ಅವರ ಸ್ಮಾರಕದ ಮೇಲೆ ನಡೆದಿರುವ ಎರಡನೇ ದಾಳಿ ಇದಾಗಿದ್ದು, ನ್ಯೂಯಾರ್ಕ್‌ನ(New York) ದೇವಸ್ಥಾನದ ಮುಂಭಾಗದಲ್ಲಿದ್ದ ಮಹಾತ್ಮ ಗಾಂಧಿಯವರ ಪ್ರತಿಮೆಯನ್ನು ಒಡೆದು ಕೆಡವಿ ಹಾಕಲಾಗಿದೆ.

ಆಗಸ್ಟ್ 16ರ ಮುಂಜಾನೆ ಸಂಭವಿಸಿದ ಈ ಘಟನೆಯು ಯುನೈಟೆಡ್ ಸ್ಟೇಟ್ಸ್ನಲ್ಲಿ ಗಾಂಧಿ ಪ್ರತಿಮೆಗಳ ಮೇಲೆ ಸಂಭವಿಸಿರುವ ಎರಡನೇ ದಾಳಿ ಎಂದು ಸುದ್ದಿ ಸಂಸ್ಥೆ ಇಂಡಿಯಾ ಟುಡೇ(India Today) ವರದಿ ಮಾಡಿದೆ. ಆರು ಮಂದಿ ಶ್ರೀ ತುಳಸಿ ಮಂದಿರದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆಯನ್ನು ಸುತ್ತಿಗೆ ಉಪಯೋಗಿಸಿ ಧ್ವಂಸಗೊಳಿಸಿದ್ದಾರೆ ಮತ್ತು ಸ್ಥಳದ ಸುತ್ತ, ರಸ್ತೆಯ ಮೇಲೆ ಪ್ರಚೋದನಕಾರಿ ಪದಗಳನ್ನು ಚಿತ್ರಿಸಿದ್ದಾರೆ ಎಂದು ಪೊಲೀಸರು ಪ್ರಕಟಣೆಯಲ್ಲಿ ಉಲ್ಲೇಖಿಸಿದ್ದಾರೆ.

ದಾಳಿಯಲ್ಲಿ ಭಾಗಿಯಾಗಿರುವ ಶಂಕಿತ 25 ರಿಂದ 30 ವರ್ಷ ವಯಸ್ಸಿನ ಪುರುಷರು ಸಿಸಿಟಿವಿ ಕ್ಯಾಮರಾದ(CCTV Camera) ಕಣ್ಗಾವಲಿನಲ್ಲಿ ಸೆರೆಯಾಗಿರುವ ವೀಡಿಯೊವನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಪುಂಡರು ಮಹಾತ್ಮ ಗಾಂಧಿ ಅವರ ಪ್ರತಿಮೆಯನ್ನು ಧ್ವಂಸಗೊಳಿಸಿ, ಬಿಳಿ ಮರ್ಸಿಡಿಸ್ ಬೆಂಜ್ ಮತ್ತು ಗಾಢ ಬಣ್ಣದ ಕಾರಿನಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ. ಬಾಡಿಗೆಗೆ ಖರೀದಿಸಿ ಬಳಸಲಾದ ಕಾರು ಟೊಯೊಟಾ ಕ್ಯಾಮ್ರಿ ಆಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಈ ನಡುವೆ ನ್ಯೂಯಾರ್ಕ್ ಸ್ಟೇಟ್ ಅಸೆಂಬ್ಲಿ ಸದಸ್ಯೆ ಜೆನ್ನಿಫರ್ ರಾಜ್‌ಕುಮಾರ್ ಅವರು ಈ ಘಟನೆಯನ್ನು ತೀವ್ರ ಖಂಡಿಸಿದ್ದಾರೆ. “ದುಷ್ಕರ್ಮಿಗಳನ್ನು ಶೀಘ್ರವಾಗಿ ಬಂಧಿಸಬೇಕು, ಚಾರ್ಜ್ ಮಾಡಿ ಮತ್ತು ಕಾನೂನಿನ ಪೂರ್ಣ ಪ್ರಮಾಣದಲ್ಲಿ ಶೀಘ್ರವೇ ಕಾನೂನು ಕ್ರಮ ಜರುಗಿಸಬೇಕು” ಎಂದು ಕರೆ ನೀಡಿದ್ದಾರೆ. ತುಳಸಿ ಮಂದಿರದಲ್ಲಿರುವ ಗಾಂಧಿ ಪ್ರತಿಮೆಯನ್ನು ಎರಡನೇ ಬಾರಿ ಧ್ವಂಸಗೊಳಿಸಲಾಗಿದ್ದು, ಈ ಬಾರಿ ಪ್ರತಿಮೆಯನ್ನು ಉದ್ದೇಶಪೂರ್ವಕವಾಗಿ ಸಂಪೂರ್ಣವಾಗಿ ಧ್ವಂಸಗೊಳಿಸಿದ್ದಾರೆ.

ಈ ವರ್ಷ ಜುಲೈ 14 ರಂದು, ಕೆನಡಾದಲ್ಲಿ(Canada) ಇದೇ ರೀತಿಯ ಘಟನೆಯಲ್ಲಿ ಮಹಾತ್ಮ ಗಾಂಧಿ ಪ್ರತಿಮೆಯನ್ನು ಧ್ವಂಸಗೊಳಿಸಲಾಯಿತು, ಈ ಕೃತ್ಯಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಯಿತು. ಈ ವರ್ಷದ ಫೆಬ್ರವರಿಯಲ್ಲಿ, ಮ್ಯಾನ್‌ಹ್ಯಾಟನ್, ನ್ಯೂಯಾರ್ಕ್‌ ಸಿಟಿಯಲ್ಲಿ ಮತ್ತೊಂದು ದೊಡ್ಡ ಗಾತ್ರದ ಮಹಾತ್ಮ ಗಾಂಧಿ ಪ್ರತಿಮೆಯನ್ನು ಧ್ವಂಸಗೊಳಿಸಲಾಯಿತು.

Exit mobile version