ಚಿತ್ರದುರ್ಗ, ನ. 28: ಭಾಗ್ಯಗಳ ಹೆಸರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರು ರಾಜ್ಯಕ್ಕೆ ದೌರ್ಭಾಗ್ಯ ತಂದಿಟ್ಟಿದ್ದಾರೆ ಎಂಬುದಾಗಿ ಸಂಸದ ಪ್ರತಾಪ್ ಸಿಂಹ ಹೇಳಿಕೆಯನ್ನು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ ಕರಾವಳಿಯಲ್ಲಿ ರಿಯಾಜ್ ಭಟ್ಕಳ್, ಯಾಸೀನ್ ಭಟ್ಕಳ್‌ಗಳಿಂದ ದೇಶ ವಿರೋಧಿ ಚಟುವಟಿಕೆಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಕೇರಳ ಮಾದರಿ ಕೊಲೆಗಳು ಸಹ ಮಂಗಳೂರಿನಲ್ಲೇ ಆರಂಭವಾಗಿದೆ. ಈಗ ರಾಜ್ಯದಾದ್ಯಂತ ಕೇರಳ ಮಾದರಿ ಕೊಲೆಗಳು ಹರಡಿದೆ. ಗೃಹ ಸಚಿವರು, ಸಿಎಂ ಈ ಬಗ್ಗೆ ಕ್ರಮ ವಹಿಸಬೇಕು ಎಂದು ತಿಳಿಸಿದರು.
ಈಗಿನ ಬಿಜೆಪಿ ಸರ್ಕಾರ ದಿವಾಳಿಯಾಗಿದೆ ಎಂದಿದ್ದ ಸಿದ್ದರಾಮಯ್ಯ ಅವರ ಹೇಳಿಕೆಗೆ ತಿರುಗೇಟು ನೀಡಿ, ಬಿಜೆಪಿ ಸರ್ಕಾರ ದಿವಾಳಿ ಆಗಿದೆ ಎಂದ ಸಿದ್ದರಾಮಯ್ಯ ಅವರಿಗೆ ನೈತಿಕತೆ ಇಲ್ಲ. ಭಾಗ್ಯಗಳ ಹೆಸರಿನಲ್ಲಿ ರಾಜ್ಯಕ್ಕೆ ದೌರ್ಭಾಗ್ಯ ತಂದಿದ್ದಾರೆ. ಬಿಜೆಪಿ ಸರ್ಕಾರದ ಬಗ್ಗೆ ಮಾತನಾಡುವ ಅರ್ಹತೆ ಯಾವುದೂ ಅವರಿಗೆ ಇಲ್ಲ ಎಂದಿದ್ದಾರೆ. ಅವರ ಅವಧಿಯಲ್ಲಿ ರಾಜ್ಯದ ಸ್ಥಿತಿ ಹೇಗಿತ್ತು ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.