ನೈತಿಕ ಪೊಲೀಸ್ ಗಿರಿ ನಡೆಸಿದ ಆರೋಪದಡಿ ಐವರ ಬಂಧನ

ಮಂಗಳೂರು ಸೆ 29 : ನೈತಿಕ ಪೊಲೀಸ್ ಗಿರಿ ನಡೆಸಿದ ಆರೋಪದ ಮೇಲೆ 5 ಮಂದಿ ಬಜರಂಗದಳ ಕಾರ್ಯಕರ್ತರನ್ನು ಸುರತ್ಕಲ್‌ನಲ್ಲಿ ಬಂಧಿಸಲಾಗಿದ್ದು, ಬಂಧಿತರನ್ನು ಪ್ರೀತಂ ಶೆಟ್ಟಿ, ಭಜರಂಗದಳ ಜಿಲ್ಲಾ ಮುಖಂಡ ಅರ್ಶಿತ್, ಭಜರಂಗದಳ ಸುರತ್ಕಲ್ ಮುಖಂಡ ಶ್ರೀನಿವಾಸ್, ರಾಕೇಶ್ ಮತ್ತು ಅಭಿಷೇಕ್ ಎಂದು ಗುರುತಿಸಲಾಗಿದ್ದು ಅವರ ವಿರುದ್ದ ಸೆಕ್ಷನ್ 341, 323 ಅಡಿಯಲ್ಲಿ ಕೇಸು ದಾಖಲಿಸಲಾಗಿದೆ

ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಎಂಬಿಬಿಎಸ್ ವಿದ್ಯಾರ್ಥಿಗಳು ನಿನ್ನೆ ಸಾಯಂಕಾಲ ಸಮುದ್ರ ತೀರಕ್ಕೆ ಭೇಟಿ ನೀಡಿ ವಾಪಸ್ ಬರುತ್ತಿದ್ದಾಗ ಈ ಬಜರಂಗದಳ ಕಾರ್ಯಕರ್ತರು ಅಡ್ಡಗಟ್ಟಿ ಹಲ್ಲೆ ನಡೆಸಿದ್ದರು ಎಂದು ವಿಡಿಯೋ ವೈರಲ್‌ ಆಗಿದೆ

ಘಟನೆಯ ಹಿನ್ನಲೆ :  ಮಂಗಳೂರಿನ ಕೆ ಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ 6 ಮಂದಿ ಯುವಕ-ಯುವತಿಯರು ನಿನ್ನೆ ಸಾಯಂಕಾಲ ಮಲ್ಪೆ ಬೀಚ್ ಗೆ ಹೋಗಿ ವಾಪಸ್ ಬರುವಾಗ ಅವರು ಪ್ರಯಾಣಿಸುತ್ತಿದ್ದ ಕಾರನ್ನು ಮಂಗಳೂರಿನ ಸುರತ್ಕಲ್ ಟೋಲ್‌ಗೇಟ್ ಬಳಿ ಬಜರಂಗದಳ ಕಾರ್ಯಕರ್ತರು ತಡೆದಿದ್ದಾರೆ. ಅನ್ಯಕೋಮಿನ ಯುವಕ ಯುವತಿಯರಿಗೆ ಪ್ರಶ್ನಿಸಲು ಮುಂದಾಗಿದ್ದರು

ಯುವತಿಯರಿಗೆ ಮುಸ್ಲಿಂ ಯುವಕರ ಜೊತೆ ಏಕೆ ಸುತ್ತಾಡುತ್ತಿದ್ದೀರಿ ಎಂದು ಪ್ರಶ್ನಿಸಿ ನಿಂದಿಸಿದ್ದಾರೆ. ಈ ವೇಳೆ ಹಿಂದೂ ಸಂಘಟನೆ ಯುವಕರು ಮತ್ತು ಮುಸ್ಲಿಂ ಯುವಕರ ನಡುವೆ ಜಗಳ ಆರಂಭವಾಗಿ ಅನ್ಯಕೋಮಿನ ಯುವಕ, ಯುವತಿಯರ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾರೆ ಎಂದು ಸ್ಥಳೀಯ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಘಟನೆ ವೇಳೆ ಸ್ಥಳದಲ್ಲಿ ಇನ್ಸ್ಪೆಕ್ಟರ್ ಶರೀಫ್ ಇದ್ದು, ಹಿಂದೂ ಸಂಘಟನೆ ಯುವಕರಿಂದ ನೈತಿಕ ಪೊಲೀಸ್ ಗಿರಿ ನಡೆದಿದೆ. ಈ ವೇಳೆ ಕಾರಿನ ಮೇಲೆ ಯುವಕರ ಗುಂಪಿನಿಂದ ಆಗುತ್ತಿದ್ದ ದಾಳಿಯನ್ನು ಇನ್ಸ್ಪೆಕ್ಟರ್ ಶರೀಫ್ ತಡೆದು ಜಗಳವನ್ನು ನಿಯಂತ್ರಿಸುವಲ್ಲಿ ಸಫಲರಾಗಿದ್ದರು.

Exit mobile version