11 ವಿವಿಧ ಶೈಲಿಯಲ್ಲಿ ಬರೆಯುವ ವಿಶಿಷ್ಟ ಪ್ರತಿಭೆ ಮಂಗಳೂರಿನ ಆದಿ ಸ್ವರೂಪ

ಒಂದೇ ಸಮಯದಲ್ಲಿ ಎರಡೂ ಕೈಗಳಿಂದ ಬರೆಯುವುದು ಸಾಧ್ಯವೇ? ಅಸಾಧ್ಯ ಎಂದು ನೀವು ತಿಳಿದರೆ, ಅದು ನಿಮ್ಮ ತಪ್ಪು ಕಲ್ಪನೆ. ಏಕೆಂದರೆ ಏಕಕಾಲದಲ್ಲಿ ಎರಡು ಕೈಗಳಿಂದ ಬರೆಯುವ ಜೊತೆಗೆ, ಒಂದು ನಿಮಿಷಕ್ಕೆ 45 ಇಂಗ್ಲೀಷ್ ಪದಗಳನ್ನು ಯುನಿ ಡೈರೆಕ್ಷನಲ್ ಶೈಲಿಯಲ್ಲಿ ಬರೆಯುವ ಮೂಲಕ ದಾಖಲೆ ಸೃಷ್ಟಿಸಿದ್ದಾರೆ ನಮ್ಮ ರಾಜ್ಯದ ಮಂಗಳೂರಿನ(Mangaluru) ಆದಿ ಸ್ವರೂಪಾ(Aadi Swaroopa).

ಉತ್ತರ ಪ್ರದೇಶದ ಬರೇಲಿಯಾ ಲಾಟಾ ಫೌಂಡೇಶನ್‌ ಸಂಸ್ಥೆಯು ಮಂಗಳೂರಿನ 17 ವರ್ಷದ ಆದಿ ಸ್ವರೂಪಾಗೆ, ಎಕ್ಸ್‌ಕ್ಲೂಸಿವ್ ವಲ್ಡ್ ರೆಕಾರ್ಡ್‌ ಗೌರವ ಘೋಷಿಸಲಾಗಿದೆ. ಮಂಗಳೂರಿನ ಸ್ವರೂಪಾ ಅಧ್ಯಯನ ಕೇಂದ್ರದ ಗೋಪಾಡ್ಕರ್‌- ಸುಮಾಡ್ಕರ್‌ ದಂಪತಿಯ ಪುತ್ರಿ. 4 ವರ್ಷಗಳ ಹಿಂದೆ ಎರಡೂ ಕೈಯಿಂದ ಬರೆಯುವುದನ್ನು ಆರಂಭಿಸಿದ್ದ ಆದಿ ಸ್ವರೂಪಾ, 11 ರೀತಿಯಲ್ಲಿ ಬರೆಯುವುದನ್ನು ರೂಢಿಸಿಕೊಂಡಿದ್ದಾರೆ.


ಸ್ವರೂಪಾ ಶಾಲೆಗೆ ಹೋಗಿಲ್ಲ, 10ನೇ ತರಗತಿಯ ಸ್ವಕಲಿಕೆಯಲ್ಲಿ ತೊಡಗಿಕೊಂಡಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಕೈಗಳಿಂದ ಬರೆಯುವುದರ ಅಭ್ಯಾಸ ಮಾಡಿಕೊಂಡಿದ್ದ ಆದಿ ಸ್ವರೂಪ, ಇದೀಗ ಯುನಿ ಡೈರೆಕ್ಷನಲ್, ವಿರುದ್ಧ ಮಾರ್ಗಗಳಲ್ಲಿ, ರೈಟ್ ಹ್ಯಾಂಡ್ ಸ್ಪೀಡ್, ಲೆಫ್ಟ್ ಹ್ಯಾಂಡ್ ಸ್ಪೀಡ್, ರಿವರ್ಸ್ ರನ್ನಿಂಗ್, ಮಿರರ್‌ ಇಮೇಜ್‌, ಹೆಟೆರೋಟೋಪಿಕ್, ಹೆಟೆರೋ ಲಿಂಗ್ವಿಸ್ಟಿಕ್, ಎಕ್ಸ್‌ಚೇಂಜ್‌, ಡ್ಯಾನ್ಸಿಂಗ್ ಮತ್ತು ಬ್ಲೈಂಡ್‌ ಫೋಲ್ಡಿಂಗ್ ಎನ್ನುವ ಹತ್ತು ಶೈಲಿಗಳಲ್ಲಿ ಬೋರ್ಡ್‌ ಮೇಲೆ ಬರೆಯುವಷ್ಟು ಪರಿಣತಿಯನ್ನು ಹೊಂದಿದ್ದಾರೆ.

ಸ್ವರೂಪ ಕಲಿಕೆಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದು, ಸಾಹಿತ್ಯ, ಸಂಗೀತ, ಯಕ್ಷಗಾನ, ಚಿತ್ರಕಲೆ, ಮಿಮಿಕ್ರಿ, ಬೀಟ್‌ ಬಾಕ್ಸ್‌, ರೂಬಿಕ್ ಕ್ಯೂಬ್ ಹೀಗೆ ಇತರ ವಿಷಯಗಳ ಅಧ್ಯಯನದಲ್ಲೂ ಆಸಕ್ತಿ ಹೊಂದಿದ್ದಾರೆ. ಆದಿ ಸ್ವರೂಪಾ ಅವರಿಗೆ ಸಂಗೀತ ಎಂದರೆ ಬಲು ಪ್ರೀತಿ. ಹಿಂದೂಸ್ತಾನಿ ಸಂಗೀತವನ್ನು ಪಂಡಿತ್‌ ರವಿಕಿರಣ್ ಅವರಲ್ಲಿ ಅಭ್ಯಸಿಸುತ್ತಿದ್ದಾರೆ. 7 ವರ್ಷಗಳಲ್ಲಿ 50ಕ್ಕೂ ಹೆಚ್ಚು ಯಕ್ಷಗಾನ ಪ್ರದರ್ಶನ, ಕಥಾ ಸಂಕಲನ ಹೊರತಂದಿದ್ದಾರೆ.


ಸಾಮಾನ್ಯವಾಗಿ, ಎಸ್ಎಸ್ಎಲ್ಸಿ ಪೂರ್ತಿ ಪಠ್ಯವನ್ನು ಅಭ್ಯಸಿಸಲು ವಿದ್ಯಾರ್ಥಿಗಳು ಬಹಳ ಕಷ್ಟಪಡುತ್ತಾರೆ. ಆದರೆ, ರೆಗ್ಯುಲರ್ ಶಾಲೆಗೆ ಹೋಗದೆ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುತ್ತಿರುವ ಆದಿ ಸ್ವರೂಪ ತನ್ನ ವಿಶೇಷ ಕಾರ್ಯದಿಂದ ಇಂಡಿಯಾ ಬುಕ್ ಅಫ್ ರೆಕಾರ್ಡ್ ಕೂಡ ಸೇರಿದ್ದಾರೆ. ಆದಿ ಸ್ವರೂಪ 10ನೇ ತರಗತಿಯ 6 ವಿಷಯಗಳನ್ನು ಕೇವಲ 8 ಪೇಜ್ನಲ್ಲಿ ಬರೆದಿದ್ದಾಳೆ. ಪಠ್ಯದ ವಿಚಾರವನ್ನು ಸಣ್ಣ ಸಣ್ಣ ಚಿತ್ರಗಳಲ್ಲಿ ಬಿಡಿಸಿ, ನೆನಪಿನಲ್ಲಿ ಉಳಿಯುವಂತೆ ಮಾಡಿದ ವಿಶಿಷ್ಟ ಕಾರ್ಯದಿಂದಾಗಿ ಇಂಡಿಯಾ ಬುಕ್ ಅಫ್ ರೆಕಾರ್ಡ್ ಈಕೆಯ ಸಾಧನೆಯನ್ನು ಗುರುತಿಸಿದೆ.


ಆದಿ ಸ್ವರೂಪ ಹೆಸರು ಇಂಡಿಯಾ ಬುಕ್ ಅಫ್ ರೆಕಾರ್ಡ್ನಲ್ಲಿ ‘Incredible Visual Memory Artist’ ಎಂಬ ವಿಭಾಗದಲ್ಲಿ ದಾಖಲಾಗಿದೆ. ಇದು ಸೇರಿದಂತೆ, ಎಸ್ಎಸ್ಎಲ್ಸಿ ಪಠ್ಯ ಕಲಿಕೆಯಲ್ಲಿ ಬೇರೆ ಬೇರೆ ವಿಧಾನದಲ್ಲಿ 10 ಇಂಡಿಯಾ ಬುಕ್ ಅಫ್ ರೆಕಾರ್ಡ್ ಸಾಧನೆ ಮಾಡುವ ಗುರಿಯನ್ನು ಕೂಡ ಆದಿ ಸ್ವರೂಪ ಹೊಂದಿದ್ದಾರೆ. ಎಸ್ಎಸ್ಎಲ್ಸಿ ಕಲಿಕೆಯನ್ನು ಕಷ್ಟಪಟ್ಟು ಮಾಡುವ ವಿದ್ಯಾರ್ಥಿಗಳಿಗೆ, ಆದಿ ಸ್ವರೂಪ ಮಾದರಿಯಾಗಿದ್ದಾರೆ ಎಂದೇ ಹೇಳಬಹುದು.

Exit mobile version