14 ವರ್ಷಗಳ ಬಳಿಕ ಬೆಂಕಿ ಪೊಟ್ಟಣದ ಬೆಲೆ ಏರಿಕೆ

  ಮದುರೈ ಅ 23: ಪೆಟ್ರೋಲ್, ಡಿಸೇಲ್, ಗ್ಯಾಸ್ ನಿಂದ ಹಿಡಿದುದಿನನಿತ್ಯ ಬಳಕೆಯಾಗುವ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಆದರೆ ಇದೀಗ 14 ವರ್ಷಗಳ ದೀರ್ಘಾವಧಿಯ ಬಳಿಕ ಬೆಂಕಿ ಪೊಟ್ಟಣದ ಬೆಲೆ ಏರಿಕೆಯಾಗಲಿದೆ . ಈ ಬೆಲೆ ರೂ.1 ರಿಂದ ರೂ. 2ಕ್ಕೆ ಏರಿಕೆಯಾಗುತ್ತಿದೆ. ಈ ಹೊಸ ಡಿಸೆಂಬರ್ 1 ರಿಂದ ಜಾರಿಯಾಗಲಿದೆ ಎಂದು ಮೂಲಗಳು ತಿಳಿಸಿವೆ.

ಇದಕ್ಕೂ ಮೊದಲು 2007ರಲ್ಲಿ ಬೆಂಕಿ ಪೊಟ್ಟಣದ ಬೆಲೆಯನ್ನು ಪರಿಷ್ಕರಿಸಲಾಗಿತ್ತು. ಆಗ ಬೆಂಕಿ ಪೊಟ್ಟಣದ ಬೆಲೆಯನ್ನು 50 ಪೈಸೆಯಿಂದ 1 ರೂ.ಗೆ ಹೆಚ್ಚಿಸಲಾಗಿತ್ತು. ಗುರುವಾರ ಶಿವಕಾಶಿಯಲ್ಲಿ ಮುಕ್ತಾಯಗೊಂಡ ಆಲ್ ಇಂಡಿಯಾ ಚೇಂಬರ್ ಆಫ್ ಮಾಚಿಸ್ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಈ ಸಂದರ್ಭದಲ್ಲಿ ಕಚ್ಚಾ ಸಾಮಗ್ರಿಗಳಲ್ಲಿ ಆಗುತ್ತಿರುವ ಬೆಲೆ ವೃದ್ಧಿಯೇ ಈ ಬೆಲೆ ಏರಿಕೆಗೆ ಕಾರಣ ಎಂದು ಉದ್ಯಮ ಪ್ರತಿನಿಧಿಗಳು ಹೇಳಿದ್ದಾರೆ.

ಸಾಮಾನ್ಯವಾಗಿ ಬೆಂಕಿಕಡ್ಡಿಗಳನ್ನು ತಯಾರಿಸಲು 14 ಬಗೆಯ ಕಚ್ಚಾ ಸಾಮಗ್ರಿಗಳು ಬೇಕಾಗುತ್ತವೆ ಎಂದು ತಯಾರಕರು ತಿಳಿಸಿದ್ದಾರೆ. ಒಂದು ಕೆಜಿ ಕೆಂಪು ರಂಜಕ ರೂ 425 ರಿಂದ ರೂ 810 ಕ್ಕೆ, ಮೇಣ ರೂ 58 ರಿಂದ ರೂ 80 ಕ್ಕೆ ಹೊರ ಬಾಕ್ಸ್ ಬೋರ್ಡ್ ರೂ 36 ರಿಂದ ರೂ 55 ಕ್ಕೆ ಮತ್ತು ಒಳ ಪೆಟ್ಟಿಗೆ ಬೋರ್ಡ್ ರೂ 32 ರಿಂದ ರೂ 58 ಕ್ಕೆ ಏರಿಕೆಯಾಗಿದೆ. ಅಕ್ಟೋಬರ್ 10 ರಿಂದ ಪೇಪರ್ ಪ್ರಿಂಟ್ ಪೊಟ್ಯಾಸಿಯಮ್ ಕ್ಲೋರೇಟ್ ಮತ್ತು ಸಲ್ಟರ್ ಬೆಲೆಯೂ ಹೆಚ್ಚಾಗಿದೆ. ಡೀಸೆಲ್ ಬೆಲೆ ಏರಿಕೆಯಿಂದ ನಮ್ಮ ಉದ್ಯಮಗಳ ಮೇಲೆ ಹೆಚ್ಚುವರಿ ಹೊರೆ ಬೀಳುತ್ತಿದೆ ಎಂದು ಹೇಳಿದ್ದಾರೆ.

Exit mobile version