ಮೆಟ್ರಿಕ್ ನಂತರದ ಸ್ಕಾಲರ್‌ಶಿಪ್‌: 59,000 ಕೋಟಿ ರೂ. ಅನುಮೋದನೆ ನೀಡಿದ ಕೇಂದ್ರ ಸರ್ಕಾರ

ದೆಹಲಿ, ಡಿ. 24: ಪರಿಶಿಷ್ಟ ಜಾತಿಯ (ಎಸ್‌ಸಿ) ಕಡುಬಡವ ಕುಟುಂಬಗಳ ವಿದ್ಯಾರ್ಥಿಗಳ ಮೆಟ್ರಿಕ್‌ ನಂತರದ ವಿದ್ಯಾರ್ಥಿವೇತನಕ್ಕಾಗಿ ಮುಂದಿನ 5 ವರ್ಷಗಳಲ್ಲಿ 59,000 ಕೋಟಿ ರೂ. ಅನ್ನು ವಿನಿಯೋಗಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

ಅಂತಹ 1.36 ಕೋಟಿ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ನಂತರ ಶಿಕ್ಷಣ ಮುಂದುವರಿಸುತ್ತಿಲ್ಲ. ಮುಂದಿನ ಐದು ವರ್ಷಗಳಲ್ಲಿ ಈ ವಿದ್ಯಾರ್ಥಿಗಳನ್ನು ಉನ್ನತ ಶಿಕ್ಷಣಕ್ಕೆ ಮರಳಿ ತರುವುದು ಯೋಜನೆಯ ಮುಖ್ಯ ಗುರಿಯಾಗಿದೆ. ಈ ಯೋಜನೆಗೆ ವಿದ್ಯಾರ್ಥಿಗಳನ್ನು ನೋಂದಾಯಿಸುವ ಅಭಿಯಾನ ಶೀಘ್ರವೇ ಆರಂಭವಾಗಲಿದೆ. ಈ ವಿದ್ಯಾರ್ಥಿಗಳು ಕೈಗೊಳ್ಳುವ ಉನ್ನತ ಶಿಕ್ಷಣ ಕೋರ್ಸ್‌ನ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಅದಕ್ಕಾಗಿ ವಿನಿಯೋಗಿಸುವ 59,041 ಕೋಟಿ ರೂ. ವೆಚ್ಚದಲ್ಲಿ ಶೇ. 60ರಷ್ಟು (35,534 ಕೋಟಿ ರೂ.) ಅನ್ನು ಕೇಂದ್ರ ಸರ್ಕಾರವು ಹಾಗೂ ಶೇ. 40ರಷ್ಟನ್ನು ರಾಜ್ಯ ಸರ್ಕಾರ ಭರಿಸಲಿದೆ ಎಂದು ಸರ್ಕಾರ ಹೇಳಿದೆ.

ʻಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಇದು ನೆರವಾಗುತ್ತದೆʼ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ವಿದ್ಯಾರ್ಥಿಗಳು ತಮ್ಮ ಇಚ್ಛೆಯ ಕೋರ್ಸ್‌ ಅನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದ್ದು, ವೆಚ್ಚವನ್ನು ಸರ್ಕಾರ ಭರಿಸಲಿದೆ. ಈ ಯೋಜನೆಯು ಕಡು ಭದ್ರತೆಯುಳ್ಳ ಸೈಬರ್ ಪ್ಲಾಟ್‌ಫಾರಂನ ಮೂಲಕ ಅನುಷ್ಠಾನವಾಗಲಿದೆ. ಪಾರದರ್ಶಕತೆ, ಉತ್ತರದಾಯಿತ್ವ, ದಕ್ಷತೆ, ಕಾಲಮಿತಿಯಲ್ಲಿ ಪಾವತಿಗೆ ಒತ್ತು ನೀಡಲಾಗುತ್ತದೆ. ವಿದ್ಯಾರ್ಥಿಗಳ ಅರ್ಹತೆ, ಜಾತಿ ಪ್ರಮಾಣಪತ್ರ, ಆಧಾರ್ ಮತ್ತು ಬ್ಯಾಂಕ್ ಖಾತೆ ವಿವರಗಳನ್ನು ಪರಿಶೀಲಿಸಿ, ನಿರ್ವಹಣೆ ಮಾಡುವ ಹೊಣೆ ರಾಜ್ಯ ಸರ್ಕಾರಗಳದ್ದು ಎಂದು ಕೇಂದ್ರ ಸರ್ಕಾರ‌ ತಿಳಿಸಿದೆ.

Exit mobile version