ಪುರುಷರ ಟಿ20 ವಿಶ್ವಕಪ್ ಟೂರ್ನಿ ಯುಎಇ & ಓಮನ್‌ಗೆ ಸ್ಥಳಾಂತರ: ಅಕ್ಟೋಬರ್ 17ರಿಂದ ನವೆಂಬರ್ 14ರವರೆಗೆ ನಡೆಯಲಿರುವ ಟೂರ್ನಿ

ಹೊಸದಿಲ್ಲಿ,ಜೂ.29: ಕೊರೊನಾ‌‌ ಕಾರಣದಿಂದಾಗಿ ಮುಂಬರುವ ಐಸಿಸಿ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ಯುಎಇ ಹಾಗೂ ಓಮನ್ ರಾಷ್ಟ್ರದಲ್ಲಿ  ನಡೆಯಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತಿಳಿಸಿದೆ.

ನಿಗದಿಯಂತೆ ಇಡೀ ಪಂದ್ಯಾವಳಿ ಭಾರತದಲ್ಲೇ ನಡೆಯಬೇಕಿತ್ತು.  ಆದರೆ ದೇಶದಲ್ಲಿ ಕೊರೊನಾ  ಹಿನ್ನೆಲೆಯಲ್ಲಿ ಟೂರ್ನಿಯನ್ನು ಯುಎಇ ಹಾಗೂ ಓಮನ್ ರಾಷ್ಟ್ರಕ್ಕೆ ಸ್ಥಳಾಂತರಿಸಲಾಗಿದೆ. ಆದರೆ ಬಿಸಿಸಿಐ ಈ ಟೂರ್ನಿಯ  ಆತಿಥೇಯರಾಗಿ ಉಳಿಯಲಿದೆ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 17ರಿಂದ ನವೆಂಬರ್ 14ರವರೆಗೆ ಪಂದ್ಯಾವಳಿ ನಡೆಯಲಿದ್ದು, ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣ, ಅಬುದಾಬಿಯ ಶೇಖ್ ಜಯೇದ್ ಕ್ರೀಡಾಂಗಣ, ಶಾರ್ಜಾ ಕ್ರೀಡಾಂಗಣ ಹಾಗೂ ಓಮನ್‌ನ ಕ್ರಿಕೆಟ್ ಅಕಾಡೆಮಿ ಮೈದಾನಗಳಲ್ಲಿ ಟಿ20 ವಿಶ್ವಕಪ್ ಪಂದ್ಯಗಳು ನಡೆಯಲಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಪುರುಷರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯನ್ನು ಭಾರತದಲ್ಲೇ ಆಯೋಜಿಸಲು ಅತ್ಯಂತ ಉತ್ಸಕರಾಗಿದ್ದೆವು. ಆದರೆ ಕೊರೊನಾ ಪರಿಸ್ಥಿತಿಯ ಕಾರಣದಿಂದ ಟೂರ್ನಿಯನ್ನು ಸ್ಥಳಾಂತರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

Exit mobile version