ಬೆಂಗಳೂರು ಡಿ 27 : ರಾಜ್ಯದ್ಯಾಂತ ನೈಟ್ ಕರ್ಫ್ಯೂ ಜಾರಿಗೊಳಿಸಿರುವ ಹಿನ್ನಲೆಯಲ್ಲಿ ಮುಂದಿನ ಹತ್ತು ದಿನಗಳ ಕಾಲ ಮೆಟ್ರೋ ಸಂಚಾರದಲ್ಲೂ ಬದಲಾವಣೆಯಾಗಲಿದೆ. ನಾಳೆಯಿಂದ 10 ದಿನಗಳ ಕಾಲ ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿಗೊಳಿಸಲಾಗಿದ್ದು, ಹಲವು ನಿರ್ಬಂಧಗಳನ್ನು ಹೇರಲಾಗಿದೆ. ಈ ಹಿನ್ನೆಲೆಯಲ್ಲಿ BMRCL ಮೆಟ್ರೋ ರೈಲು ಸಂಚಾರದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿದೆ.
ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ನೈಟ್ ಕರ್ಫ್ಯೂ ಇರುವುದರಿಂದ ರಾತ್ರಿ 10 ರ ಬಳಿಕ ಜನರು ರಸ್ತೆಗಿಳಿಯದಂತೆ ನಿರ್ಬಂಧ ವಿಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮೆಟ್ರೋಗೆ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗುವ ಸಾಧ್ಯತೆ ಇದೆ. ಹಾಗಾಗಿ ರಾತ್ರಿ 10 ಗಂಟೆ ನಂತರ ಮೆಟ್ರೋ ರೈಲಿನ ಟ್ರಿಪ್ ಅನ್ನು ಕಡಿಮೆ ಮಾಡಲಾಗಿದೆ. ಮೆಟ್ರೋ ರೈಲಿನ ಸಂಚಾರದ ಅವಧಿಯಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ ಎಂದು BMRCL ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.