ಜುಲೈ 15 ರಂದು ಸಿನಿಪ್ರೇಕ್ಷಕರ ಮುಂದೆ ಮಿಥಾಲಿ ರಾಜ್ ಜೀವನಾಧಾರಿತ ಚಿತ್ರ “ಶಬ್ಬಾಶ್ ಮಿಥು”

Mithali Raj

ಭಾರತ ಮಹಿಳಾ ಕ್ರಿಕೆಟ್(India Womens Cricket) ತಂಡದ ಮಾಜಿ ನಾಯಕಿ, ಮಹಿಳಾ ಕ್ರಿಕೆಟ್ ನ ಹೆಸರಾಂತ ಆಟಗಾರ್ತಿ ‘ಮಿಥಾಲಿ ರಾಜ್’(Mithali Raj)ಅವರ ಜೀವನಾಧಾರಿತ ಚಿತ್ರ ‘ಶಭಾಷ್ ಮಿಥು’(Shabhash Mithu) ಟ್ರೈಲರ್ ಬಿಡುಗಡೆಯಾದಾಗ ಪ್ರೇಕ್ಷಕರ ಕುತೂಹಲ ಗರಿಗೆದರಿತ್ತು. ಈಗ ಚಿತ್ರ ತಂಡದಿಂದ ಪ್ರೇಕ್ಷಕರಿಗೊಂದು ಸಿಹಿ ಸುದ್ದಿ ಸಿಕ್ಕಿದೆ, ಅದೇನೆಂದರೆ ಇದೇ ಜುಲೈ 15 ರಂದು ಈ ಸಿನಿಮಾ ಬಿಡುಗಡೆಯಾಗಲಿದ್ದು, ಚಿತ್ರಮಂದಿರದಲ್ಲಿ ಪ್ರೇಕ್ಷಕರು ಮಿಥಾಲಿ ರಾಜ್ ಅವರ ಜೀವನದ ಏಳು-ಬೀಳುಗಳು, ವೈಫಲ್ಯಗಳು ಮತ್ತು ಉತ್ಸಾಹದ ಕ್ಷಣಗಳನ್ನು ಕಣ್ತುಂಬಿಕೊಳ್ಳಬಹುದು.


ಮಿಥಾಲಿ ಅವರ ಬಾಲ್ಯದಿಂದ ಹಿಡಿದು, ಪುರುಷ ಪ್ರಧಾನ ಕ್ರೀಡೆ ಎಂದೇ ಗುರುತಿಸಿಕೊಂಡಿರುವ ಕ್ರಿಕೆಟ್ ನಲ್ಲಿ ಉನ್ನತ ಸ್ಥಾನಕ್ಕೇರುವವರೆಗೂ, ಮಿಥಾಲಿ ರಾಜ್ ನಡೆಸಿದ ಹೋರಾಟವನ್ನು ಈ ಸಿನಿಮಾದಲ್ಲಿ ಎಳೆ ಎಳೆಯಾಗಿ ತೋರಿಸಲಾಗಿದೆ. ಮಿಥಾಲಿ ರಾಜ್ ಗೆ ಬಾಲ್ಯದಿಂದಲೂ ಮನದಲ್ಲಿದ್ದ ಕ್ರಿಕೆಟ್ ಆಡುವ ಕನಸು ಮತ್ತು ಅದನ್ನು ಈಡೇರಿಸಿಕೊಳ್ಳುವ ಸಂದರ್ಭದಲ್ಲಿ ಅವರು ಪಟ್ಟ ಕಷ್ಟ, ಅನುಭವಿಸಿದ ಅವಮಾನ ಹಾಗೂ ಗೆದ್ದ ನಂತರದ ಸಂಭ್ರಮವನ್ನೂ ಪ್ರೇಕ್ಷಕರ ಮನಮುಟ್ಟುವಂತೆ ಚಿತ್ರಿಸಲಾಗಿದೆ.

ಮಹಿಳಾ ಕ್ರಿಕೆಟ್ ಅನ್ನು ಬೇರೆಯೇ ಹಂತಕ್ಕೆ ಕೊಂಡೊಯ್ದ ಮಿಥಾಲಿ ರಾಜ್ ಅವರ ಶ್ರಮವನ್ನು ಕಣ್ಣಿಗೆ ಕಟ್ಟುವಂತೆ ತೋರಿಸಲಾಗಿದೆ. ಚಿತ್ರದಲ್ಲಿ ತಾಪ್ಸಿ ಪನ್ನು ಅವರು ಮಿಥಾಲಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಮಿಥಾಲಿ ರಾಜ್ ಜೀವನಾಧಾರಿತ ಚಿತ್ರವನ್ನು ಶ್ರೀಜಿತ್ ಮುಖರ್ಜಿ ನಿರ್ದೇಶಿಸಿದ್ದು, ಪ್ರಿಯಾ ಅವೆನ್ ಚಿತ್ರಕಥೆ ಬರೆದಿದ್ದಾರೆ. ವಯಾಕಾಮ್ 18 ಸ್ಟುಡಿಯೋಸ್ ನಿರ್ಮಿಸಿದ ಈ ಚಿತ್ರವನ್ನು ದೇಶೀಯ ಮತ್ತು ಅಂತಾರಾಷ್ಟ್ರೀಯ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ.

ಭಾರತದ ಅಪ್ರತಿಮ ಕ್ರಿಕೆಟಿಗರಲ್ಲಿ ಒಬ್ಬರಾದ ಸೌರವ್ ಗಂಗೂಲಿ ಅವರು ಈ ಚಿತ್ರದ ಟ್ರೇಲರ್ ಅನ್ನು ಬಿಡುಗಡೆ ಮಾಡಿದ್ದು, ತಾಪ್ಸಿ ಪನ್ನು ಮತ್ತು ಮಿಥಾಲಿ ರಾಜ್ ಕೂಡ ತಮ್ಮ ಇನ್‌ಸ್ಟಾಗ್ರಾಮ್ ಖಾತೆಗಳಲ್ಲಿ ಟ್ರೇಲರ್ ಅನ್ನು ಹಂಚಿಕೊಂಡಿದ್ದಾರೆ.

Exit mobile version